ಉ.ಕ | ಕನ್ನಡ ನಾಮ ಫಲಕ ಕಡ್ಡಾಯ, ತಪ್ಪಿದಲ್ಲಿ ದಂಡ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಎಚ್ಚರಿಕೆ

ಕಾರವಾರ : ಅಂಗಡಿ ಮುಗ್ಗಟ್ಟುಗಳ ,‌ವಾಣಿಜ್ಯ ವ್ಯಾಪಾರ ಮಾಡುವ ಎಲ್ಲಾ ತರಹದ ಮಳಿಗೆಗಳು ಕನ್ನಡ ನಾಮಫಲಕ ಬರೆಸುವುದು ಕಡ್ಡಾಯ, ಕನ್ನಡ ಹೆಸರಿನ ಕೆಳಗೆ ತಮಗೆ ಬೇಕಾದ ಭಾಷೆಯಲ್ಲಿ ಬರೆಸಿಕೊಳ್ಳಬಹುದು. ನಾಮಫಲಕ ಕನ್ನಡದಲ್ಲಿ ಬರೆಸದಿದ್ದರೆ ದಂಡ ವಿಧಿಸಲಾಗುವುದು ಎಂದು
ಜಿಲ್ಲಾ ಮಟ್ಟದ ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಗಂಗೂಬಾಯಿ ಎಚ್ಚರಿಸಿದ್ದಾರೆ.
ಬುಧುವಾರ ಈ ಸಂಬಂಧ ಅವರು ಮಾದ್ಯಮಗಳ ಮೂಲಕ ಸರ್ವಾಜನಿಕರು ಮತ್ತು ವ್ಯಾಪಾರ ಮಳಿಗೆ ಮಾಲಕರಿಗೆ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಸರ್ಕಾರದ ಅಥವಾ ಸ್ಥಳೀಯ ಪ್ರಾಧಿಕಾರಗಳ ಅನುಮೋದನೆ ಮತ್ತು ಮಂಜೂರಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಕೈಗಾರಿಕೆ ಮತ್ತು ವ್ಯಾಪಾರ ಸಂಸ್ಥೆ, ಟ್ರಸ್ಟಗಳು , ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್ ಮುಂತಾದವುಗಳ ಹೆಸರನ್ನು ಪ್ರದರ್ಶಿಸುವ ನಾಮ ಫಲಕಗಳ ಮೇಲಿನ ಅರ್ಧ ಭಾಗವು ಕನ್ನಡದಲ್ಲಿ ಇರತಕ್ಕದ್ದು ಮತ್ತು ಕೆಳಗಿನ ಅರ್ಧ ಭಾಗವು ಬೇರೆ ಯಾವುದೇ ಭಾಷೆಯಲ್ಲಿ ಇರಬಹುದು. ಇದನ್ನು ಉಲ್ಲಂಘಿಸುವ ಯಾವುದೇ ಕೈಗಾರಿಕೆ, ಅಂಗಡಿ, ಫರ್ಮ್ ಮತ್ತು ವಾಣಿಜ್ಯ ಸಂಸ್ಥೆಯ ಮಾಲೀಕ ಅಥವಾ ಅದರ ಉಸ್ತುವಾರಿ ವ್ಯಕ್ತಿಗಳಿಗೆ ನಿಯಮಾನುಸಾರ ದಂಡ ವಿಧಿಸಲಾಗುವುದು ಎಂದು ಗಂಗೂಬಾಯಿ ಮಾನಕರ ಎಚ್ಚರಿಸಿದ್ದಾರೆ.

ರಾಜ್ಯ ಸರ್ಕಾರದ ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ಅಧಿನಿಯಮ 2024 ರಂತೆ, ರಾಜ್ಯ ಸರ್ಕಾರದ ಇಲಾಖೆಗಳು, ಉದ್ಯಮಗಳು ಅಥವಾ ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕುಗಳು, ಇತರ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು, ಮತ್ತು ವಿಶ್ವವಿದ್ಯಾಲಯಗಳ ಫಲಕಗಳಲ್ಲಿರುವ ಹೆಸರುಗಳು, ಮತ್ತು ಸದರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಹೆಸರು ಮತ್ತು ಪದನಾಮಗಳನ್ನು ಸೂಚಿಸುವ ಫಲಕಗಳು ಪ್ರಮುಖವಾಗಿ ಕನ್ನಡದಲ್ಲಿ ಇರತಕ್ಕದ್ದು.
ರಸ್ತೆಗಳು ಮತ್ತು ಬಡಾವಣೆ ಪ್ರದೇಶಗಳ ಹೆಸರುಗಳೂ ಸೇರಿದಂತೆ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳ ಮತ್ತು ಸ್ಥಳೀಯ ಪ್ರಾಧಿಕಾರಗಳ ಮೇಲ್ವಿಚಾರಣೆಯಲ್ಲಿ ಹಾಕಲಾಗಿರುವ ಫಲಕಗಳ ಮೇಲೆ ಪ್ರದರ್ಶಿಸಲಾಗುವ ವಿವರಗಳು ಪ್ರಮುಖವಾಗಿ ಕನ್ನಡದಲ್ಲಿ ಇರಬೇಕು.

ಕರ್ನಾಟಕದಲ್ಲಿ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರ ಪ್ರಕಟಣೆಗಾಗಿ ಹೊರಡಿಸಿದ ಎಲ್ಲಾ ಟೆಂಡರ್ ಅಧಿಸೂಚನೆ, ಜಾಹೀರಾತು, ಅರ್ಜಿ ನಮೂನೆ, ಡಿಜಿಟಲ್ ನಮೂನೆ, ಪ್ರಮಾಣ ಪತ್ರ ಮತ್ತು ಅಧಿಸೂಚನೆಗಳು, ಸರ್ಕಾರ, ಸ್ಥಳೀಯ ಪ್ರಾಧಿಕಾರ, ಅನುದಾನಿತ ಅಥವಾ ಅನುದಾನರಹಿತ ಸಂಸ್ಥೆ ನಡೆಸುವ, ನೋಟೀಸುಗಳು ಇತ್ಯಾದಿ ಪ್ರಮುಖವಾಗಿ ಕನ್ನಡದಲ್ಲಿ ಇರತಕ್ಕದ್ದು ಎಂದಿದ್ದಾರೆ.

ಸರ್ಕಾರವು ಕೈಗೊಂಡಂತಹ ಅಥವಾ ಸರ್ಕಾರ ಅಥವಾ ಸಂಬಂಧಿತ ಸಂಸ್ಥೆಗಳು ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಯಾವುದೇ ರೀತಿಯ ಪ್ರತಿಫಲ, ಅನುದಾನ, ರಿಯಾಯಿತಿ ಪಡೆದು ಅನುಷ್ಠಾನಗೊಳಿಸುತ್ತಿರುವ ಯಾವುದೇ ಯೋಜನೆಗೆ ಸಂಬಂಧಿಸಿದ ಫಲಕ, ಜಾಹೀರಾತು, ರಸೀದಿ, ಬಿಲ್ಲು, ನೋಟೀಸುಗಳು ಇತ್ಯಾದಿ ಪ್ರಮುಖವಾಗಿ ಕನ್ನಡದಲ್ಲಿ ಇರಬೇಕು.
ಸಾದ್ಯವಾದಷ್ಟು ಮಟ್ಟಿಗೆ ರಾಜ್ಯದೊಳಗೆ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲಾ ಕೈಗಾರಿಕಾ ಮತ್ತು ಇತರ ಗ್ರಾಹಕ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳು ಯಾವುದಾದರೂ ಇದ್ದಲ್ಲಿ ಯಾವುದೇ ಇತರ ಭಾಷೆಯ ಜೊತೆಗೆ ಕನ್ನಡದಲ್ಲಿ ಇರತಕ್ಕದ್ದು,

ರಾಜ್ಯದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾದ ಜಾಹೀರಾತು ಮತ್ತು ಸೂಚನೆಗಳನ್ನು ಪ್ರದರ್ಶಿಸುವ ಎಲ್ಲಾ ಫಲಕಗಳಲ್ಲಿ ವಿಷಯಗಳ ನಿಗದಿತ ಶೇಕಡಾವಾರು ಪ್ರಮಾಣವು ಕನ್ನಡ ಭಾಷೆಯಲ್ಲಿರಬೇಕು. ಜಾಹೀರಾತುಗಳ ವರ್ಗೀಕರಣ ಮತ್ತು ಕನ್ನಡದಲ್ಲಿ ಪ್ರದರ್ಶಿಸಬೇಕಾದ ಜಾಹೀರಾತು ವಿಷಯಗಳ ಶೇಕಡಾವಾರು ಪ್ರಮಾಣವು ರಾಜ್ಯ ಸರ್ಕಾರದಿಂದ ನಿಯಮಿಸಲಾದಂತೆ ಇರಬೇಕು.

ಈ ನಿಯಮಗಳ ಉಲ್ಲಂಘನೆಗಾಗಿ ಯಾವುದೇ ಕೈಗಾರಿಕೆ, ಅಂಗಡಿ, ಫರ್ಮ್ ಮತ್ತು ವಾಣಿಜ್ಯ ಸಂಸ್ಥೆಯ ಮಾಲೀಕ ಅಥವಾ ಅದರ ಉಸ್ತುವಾರಿ ವ್ಯಕ್ತಿಗಳು ಮೊದಲನೆಯ ಅಪರಾಧಕ್ಕಾಗಿ ರೂ.5,000 ವರೆಗೆ ದಂಡ ಹಾಕಲಾಗುವುದು. ಸೂಚನೆಯ ನಂತರ ಎರಡನೆಯ ಸಲವೂ ನಾಮಫಲಕ ಬರೆಸದ ಅಪರಾಧಕ್ಕಾಗಿ ರೂ.10,000 ವರೆಗೆ ದಂಡ ವಿಸ್ತರಿಸಬಹುದು. ಮೂರನೇ ಸಲ ಮಾಡಿದ ಪ್ರತಿಯೊಂದು ಅಪರಾಧಕ್ಕಾಗಿ ರೂ.20,000 ವರೆಗೆ ವಿಸ್ತರಿಸಿ ಜುಲ್ಮಾನೆ ಹಾಕಬಹುದು ಮತ್ತು ಮಳಿಗೆಯ ಪರವಾನಗಿಯನ್ನು ಸಹ ರದ್ದುಗೊಳಿಸಲಾಗುವುದು ಆದ್ದರಿಂದ ಸಂಬಂದಪಟ್ಟವರು ಕೂಡಲೇ ಸರಕಾರದ ಈ ಆದೇಶಗಳನ್ನು ಪಾಲಿಸುವಂತೆ ವ್ಯಾಪಾರಿ ಮಳಿಗೆ,‌ಅಂಗಡಿ, ಹೋಟೆಲ್ ,ಲಾಡ್ಜ್ ನವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
…….

Latest Indian news

Popular Stories