ಚುನಾವಣಾ ನೋಡೆಲ್ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ :ಮುಂಬರುವ ಲೋಕಸಭಾ ಚುನಾವಣಾ ಪ್ರಯುಕ್ತ ವಿವಿಧ ಕರ್ತವ್ಯಗಳ ನಿರ್ವಹಣೆಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿ ಮತ್ತು ಜವಾಬ್ದಾರಿಗಳನ್ನು ಅರಿತುಕೊಂಡು ಯಾವುದೇ ಲೋಪಗಳಿಗೆ ಆಸ್ಪದ ನೀಡದೆ ಕರ್ತವ್ಯ ನಿರ್ವಹಿಸುವಂತೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು.

ಅವರು ಬುಧುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಚುನಾವಣಾ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎಲ್ಲಾ ನೋಡೆಲ್ ಅಧಿಕಾರಿಗಳು ತಮಗೆ ವಹಿಸಲಾಗಿರುವ ಜವಾಬ್ದಾರಿಗಳ ಬಗ್ಗೆ ತಮ್ಮ ಅಧೀನ ಸಿಬ್ಬಂದಿಗೆ ಸೂಕ್ತ ತರಬೇತಿಗಳನ್ನು ನೀಡಿ ಅವರನ್ನು ಚುನಾವಣಾ ಕರ್ತವ್ಯಗಳಿಗೆ ಸಜ್ಜುಗೊಳಿಸಬೇಕು. ತರಬೇತಿ ಸಮಯದಲ್ಲಿ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಣೆ ಕುರಿತಂತೆ ಇರುವ ಎಲ್ಲಾ ಸಂದೇಹ ಮತ್ತು ಗೊಂದಲಗಳನ್ನು ಪರಿಹರಿಸಿ, ಅವರು ಪರಿಪೂರ್ಣವಾಗಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದರು.

ಚುನಾವಣಾ ದಿನಾಂಕ ಘೋಷಣೆಯಾದ ಕೂಡಲೇ ತಮ್ಮ ವ್ಯಾಪ್ತಿಗಳಲ್ಲಿ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಅದಕ್ಕೆ ಬೇಕಾದ ಎಲ್ಲಾ ಅಗತ್ಯ ಸಿದ್ದತೆಗಳನ್ನು ಸಾಕಷ್ಟು ಮುಂಚಿತವಾಗಿ ಮಾಡಿಕೊಳ್ಳುವುದರ ಮೂಲಕ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸಿದ್ದರಿರುವಂತೆ ತಿಳಿಸಿದರು.

ಚುನಾವಣೆ ಘೋಷಣೆಯಾದ ನಂತರ ಚುನಾವಣಾ ಆಯೋಗ ಹೊರಡಿಸುವ ಹೊಸ ಮಾರ್ಗಸೂಚಿಗಳು ಮತ್ತು ಆದೇಶಗಳ ಬಗ್ಗೆ ಎಲ್ಲಾ ನೋಡೆಲ್ ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸಬೇಕು ಹಾಗೂ ಆಯೋಗದ ಮಾರ್ಗಸೂಚಿಯಂತೆಯೇ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಎಲ್ಲಾ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

…..

Latest Indian news

Popular Stories