ಕಾರವಾರ: ಜಮೀನನ್ನು ವಾಂಟಣಿ ಮಾಡಿಕೊಡಲು ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಭ್ರಷ್ಠಾಚಾರ ಪ್ರತಿಬಂಧಕ ಕಾಯ್ದೆ -1988 ರ ಕಲಂ 7 ರಡಿ 2 ವರ್ಷಗಳ ಕಠಿಣ ಕಾರಾಗೃಹ ವಾಸ ಶಿಕ್ಷೆ ಹಾಗೂ 5000 ರೂ. ದಂಡ ಹಾಗೂ ಕಲಂ13(1)(ಡಿ)ಸಹಿತ 13(2) ರಡಿಯಲ್ಲಿ 2 ವರ್ಷಗಳ ಕಠಿಣ ಕಾರಾಗೃಹ ವಾಸ ಶಿಕ್ಷೆ ಹಾಗೂ 10000 ರು ದಂಡ ವಿಧಿಸಿವಿಶೇಷ ಮತ್ತು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ಎಸ್.ವಿಜಯ ಕುಮಾರ್ ತೀರ್ಪು ನೀಡಿದ್ದಾರೆ.
ಅಪರಾಧಿ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 6 ತಿಂಗಳ ಕಾರಾವಾಸ ಶಿಕ್ಷೆ ಅನುಭವಿಸಬೇಕೆಂದು ತೀರ್ಪಿನಲ್ಲಿ ಹೇಳಲಾಗಿದೆ.
ಪ್ರಕರಣ ಹಿನ್ನಲೆ: ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಎಚ್,ಭಜಂತ್ರಿ ಎಂಬಾತ , ಗಂಗಾ ತಿಮ್ಮಯ್ಯ ಕೋಡಿಯಾ ಅವರ ಜಮೀನನ್ನು ಅವರ ಮಕ್ಕಳಾದ ಮಹಾಬಳೇಶ್ವರ ತಿಮ್ಮಯ್ಯ ಕೊಡಿಯಾ ಹಾಗೂ ಶಂಕರ ಕೊಡಿಯಾ ಅವರ ಹೆಸರಿಗೆ ವಾಂಟಣಿ ಮಾಡಿಕೊಡಲು 20000 ಲಂಚದ ಹಣಕ್ಕೆ ಬೇಡಿಕೆ ಇಟ್ಟು ಮುಂಗಡವಾಗಿ 1500 ಪಡೆದುಕೊಂಡು ನಂತರ 18500 ಹಣಕ್ಕೆ ಬೇಡಿಕೆ ಇಟ್ಟಿದ್ದು, ಟ್ರಾಪ್ ಕಾರ್ಯಚರಣೆಯಲ್ಲಿ ರಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಆಪಾದಿತ ನೌಕರರ ವಿರುದ್ದ ವಿಶೇಷ ಮತ್ತು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ,ಉತ್ತರ ಕನ್ನಡದಲ್ಲಿ ದೋಷಾರೋಪಣ ಪತ್ರ ಸಲ್ಲಿಕೆಯಾಗಿ, ವಿಚಾರಣೆ ನಡೆಸಲಾಗಿತ್ತು.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ಲಕ್ಷ್ಮಿಕಾಂತ . ಎಮ್. ಪ್ರಭು ವಾದ ಮಂಡಿಸಿದ್ದರು.
…..