ಕಾರವಾರ :ನೀತಿ ಸಂಹಿತೆ ಜಾರಿಯಾದ ಬಳಿಕ1.72 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ

ಕಾರವಾರ : ಲೋಕಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಮಾ.31ರ ವರೆಗೆ ರೂ. 1.72 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಜಿಲ್ಲೆಯಲ್ಲಿ 25 ಚೆಕ್ ಪೋಸ್ಟ್ ಸ್ಥಾಪಿಸಿದ್ದು ಎಲ್ಲ ಕಡೆಯೂ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಪ್ರತಿ ಚೆಕ್‍ಪೋಸ್ಟ್ ನಲ್ಲಿಯೂ ವಿಡಿಯೊ ಕಣ್ಗಾವಲು ತಂಡ, ಸ್ಥಿರ ಕಣ್ಗಾವಲು ತಂಡ ಇಡಲಾಗಿದೆ. ಸಿಸಿಟಿವಿ ಮೂಲಕ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಿಂದಲೂ ಚೆಕ್‍ಪೋಸ್ಟ್ ಗಳ ಮೇಲೆ ನಿಗಾ ಇಡಲಾಗುತ್ತಿದೆ. ಹೀಗಾಗಿ ಪರಿಣಾಮಕಾರಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಂಗಳವಾರ ಮಾಧ್ಯಮಗಳಿಗೆ ವಿವರಿಸಿದರು.

ವಿವಿಧ ಚೆಕ್‍ಪೋಸ್ಟ್ ಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರೂ. 22.29ಲಕ್ಷ ಮೌಲ್ಯದ ನಗದು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ದಾಖಲೆ ಸಲ್ಲಿಸಿದ ರೂ. 2 ಲಕ್ಷ ಹಣವನ್ನು ವಾರಸುದಾರರಿಗೆ ಮರಳಿಸಲಾಗಿದೆ. 57,427 ಲೀ. ಅಕ್ರಮ ಮದ್ಯ ಮತ್ತು ಅವುಗಳ ಸಾಗಾಟಕ್ಕೆ ಬಳಸಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದು ಇವುಗಳ ಮೌಲ್ಯ ರೂ. 1,22,46,058 ರಷ್ಟಿದೆ. ರೂ. 64 ಸಾವಿರ ಮೌಲ್ಯದ 3.55 ಕೆ.ಜಿ ಗಾಂಜಾ, ರೂ. 28.73 ಲಕ್ಷ ಮೌಲ್ಯದ 54 ವಿಧದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ. ಈ ಎಲ್ಲ ಸರಕುಗಳಿಗೆ ಸಂಬಂಧಿಸಿ ಅಬಕಾರಿ ಇಲಾಖೆಯಿಂದ 161, ಪೊಲೀಸ್ ಇಲಾಖೆಯಿಂದ 34 ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಸಾರ್ವಜನಿಕರು ಚುನಾವಣೆ ಅಕ್ರಮಗಳು ಗಮನಕ್ಕೆ ಬಂದರೆ 1950 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ‘ಸಿ–ವಿಜಿಲ್ ಆ್ಯಪ್’ ಮೂಲಕವೂ ದೂರು ಸಲ್ಲಿಸಲು ಅವಕಾಶವಿದೆ. ದೂರುಗಳ ಸ್ವೀಕಾರಕ್ಕೆ ಪ್ರತ್ಯೇಕ ವಿಭಾಗ ತೆರೆದಿದ್ದು, ಸಿಸಿಟಿವಿ ಮೂಲಕ ಚೆಕ್‍ಪೋಸ್ಟ್ ಗಳಲ್ಲಿ ತಪಾಸಣೆ ಕೈಗೊಳ್ಳುವುದನ್ನು ವೀಕ್ಷಿಸಲು ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿದೆ ಎಂದರು.

………..

Latest Indian news

Popular Stories