Uttara Kannada

ಕಾರವಾರ ಜಿಲ್ಲೆಯಲ್ಲಿ ಲೋಕ್ ಅದಾಲತ್ ಯಶಸ್ವಿ – 42 ಕುಟುಂಬ ಆಸ್ತಿ ವಿಭಜನೆಯ ಪ್ರಕರಣಗಳು ರಾಜಿ

ಕಾರವಾರ: ಜಿಲ್ಲೆಯಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಬೃಹತ್ ಲೋಕ ಅದಾಲತ್‍ನಲ್ಲಿ 30,217 ಪ್ರಕರಣಗಳು ರಾಜಿ ಸಂಧಾನದಲ್ಲಿ ಇತ್ಯರ್ಥಗೊಂಡವು ಎಂದು
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ. ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಲೋಕ್ ಅದಾಲತ್ ನಲ್ಲಿ ಇತ್ಯರ್ಥವಾದ ಪ್ರಕರಣಗಳ ಸಂಖ್ಯಾ ವಿವರವನ್ನು ಅವರು ನೀಡಿದ್ದು, ಪತಿಯಿಂದ ಜೀವನಾಂಶ ಒದಗಿಸುವಂತೆ ಕೋರಿ ಮಹಿಳೆಯೊಬ್ಬರು ಸಿದ್ದಾಪುರದ ನ್ಯಾಯಾಲಯದಲ್ಲಿ ಹೂಡಿದ್ದ ಪ್ರಕರಣವನ್ನೂ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಪತಿ–ಪತ್ನಿ ಜಗಳ ತೊರೆದು ಮತ್ತೆ ಒಗ್ಗೂಡುವಂತೆ ಮಾಡುವಲ್ಲಿ ನ್ಯಾಯಾಧೀಶರು ಯಶ ಕಂಡಿದ್ದಾರೆ ಎಂದರು. ಅಲ್ಲದೇ, 42 ಕುಟುಂಬ ಆಸ್ತಿ ವಿಭಜನೆಯ ಪ್ರಕರಣಗಳೂ ರಾಜಿಯಲ್ಲಿ ಬಗೆಹರಿದವು. ಈ ಘಟನೆಗಳು ಅದಾಲತ್‍ನ ಮಹತ್ವ ಸಾರುವಂತಾಯಿತು ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಯಿತು.

ಈ ಬಾರಿ ಲೋಕ ಅದಾಲತ್‍ನಲ್ಲಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದುಕೊಂಡ 37,296 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಸೂಕ್ತ ಎಂದು ಪರಿಗಣಿಸಲಾಗಿತ್ತು. ಅವುಗಳ ಪೈಕಿ 24,569 ವ್ಯಾಜ್ಯ ಪೂರ್ವ ಪ್ರಕರಣ ಮತ್ತು 5,348 ಪ್ರಕರಣಗಳು ರಾಜಿ ಸಂಧಾನದಲ್ಲಿ ಇತ್ಯರ್ಥಗೊಂಡವು ಎಂದರು.

410 ಚೆಕ್ ಅಮಾನ್ಯ ಪ್ರಕರಣಗಳು, 298 ರಾಜಿಗೆ ಅರ್ಹ ಅಪರಾಧಿಕ ಪ್ರಕರಣಗಳು, 75 ಬ್ಯಾಂಕ್ ಪ್ರಕರಣಗಳು, 340 ಕಾರ್ಮಿಕ ವಿವಾದಗಳು, 16,310 ಕ್ರಿಮಿನಲ್ ಪ್ರಕರಣಗಳು, 114 ಅಪಘಾತ ಪ್ರಕರಣಗಳು, ಆಸ್ತಿ ಕರಕ್ಕೆ ಸಂಬಂಧಿಸಿದ 48 ಪ್ರಕರಣಗಳು, ಭೂಸ್ವಾಧೀನದ 5 ಮತ್ತು 12,605 ಇತರೆ ಸಿವಿಲ್ ಪ್ರಕರಣಗಳು ಇತ್ಯರ್ಥಗೊಂಡವು. ಅವುಗಳ ಮೂಲಕ ರೂ . 3.07 ಕೋಟಿ ಮೌಲ್ಯದ ಪರಿಹಾರಗಳನ್ನು ಸಂಬಂಧಿತ ಕಕ್ಷಿದಾರರಿಗೆ ಒದಗಿಸಲಾಯಿತು.

ಈ ಸಲದ ಲೋಕ ಅದಾಲತ್ ಉತ್ತಮ ಯಶಸ್ಸು ಕಂಡಿದೆ. ಬಾಕಿ ಉಳಿದಕೊಂಡಿದ್ದ ಬಹುತೇಕ ಪ್ರಕರಣಗಳು ರಾಜಿಯಲ್ಲಿ ಇತ್ಯರ್ಥಗೊಂಡಿವೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ. ತಿಳಿಸಿದ್ದಾರೆ.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button