ಲೋಕಸಭೆ ಚುನಾವಣೆ; 1272 ಪ್ರಚಾರ ಸಾಮಗ್ರಿಗಳ ತೆರವು:ಜಿಲ್ಲಾ ಚುನಾವಣಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ 72 ಗಂಟೆಯ ಒಳಗಡೆ ಎಲ್ಲ ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಖಾಸಗಿ ಒಡೆತನದಲ್ಲಿರುವ ಸ್ಥಳ, ಕಟ್ಟಡಗಳ ಮೇಲೆ ಪ್ರಕಟಿಸಲಾಗಿದ್ದ ವಿವಿಧ ರೀತಿಯ ಪ್ರಚಾರ ಹಾಗೂ ಮತದಾರರ ಮೇಲೆ ಪ್ರಭಾವ ಬೀರುವಂತಹ ಸುಮಾರು 1272 ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಚುನಾವಣಾ ಆಯೋಗದ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆ ಜಾರಿಯಾದ ಮರುಕ್ಷಣದಿಂದಲೇ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮಗಳಲ್ಲಿನ ಸರ್ಕಾರಿ, ಸಾರ್ವಜನಿಕ ಮತ್ತು ಖಾಸಗಿ ಸ್ಥಳ, ಕಟ್ಟಡಗಳಲ್ಲಿ ಪ್ರಚುರಪಡಿಸಿದ್ದ, ಮತದಾರರ ಮೇಲೆ ಪ್ರಭಾವ ಬೀರಬಹುದಾದ ವಿವಿಧ ರೀತಿಯ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ.
ಮಾದರಿ ನೀತಿ ಸಂಹಿತೆ ಜಾರಿಯಾದ 72 ಗಂಟೆಯೊಳಗೆ ಜಿಲ್ಲೆಯ ಸರ್ಕಾರಿ ಸ್ಥಳಗಳಲ್ಲಿ ಪ್ರಕಟಿಸಲಾಗಿದ್ದ 251 ಗೋಡೆ ಬರಹಗಳು, 349 ಪೊಸ್ಟರ್‌ಗಳು, 255 ಬ್ಯಾನರ್‌ಗಳು ಹಾಗೂ 417 ಇತರೆ ಸೇರಿ ಒಟ್ಟು 1272 ಪ್ರಚಾರ ಸಾಮಗ್ರಿಗಳನ್ನು 33 ತಂಡಗಳಿಂದ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ.
ಜೋಯಿಡಾದಲ್ಲಿ 96, ದಾಂಡೇಲಿ 69, ಹಳಿಯಾಳ 85, ಕಾರವಾರ 229, ಅಂಕೋಲಾ 81, ಕುಮಟಾ 120, ಹೊನ್ನಾವರ 192, ಭಟ್ಕಳ 49, ಶಿರಸಿ 152, ಸಿದ್ದಾಪುರ 65, ಯಲ್ಲಾಪುರ 86 ಹಾಗೂ ಮುಂಡಗೋಡನಲ್ಲಿ 48 ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ.
ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾಗಳು ಮತ್ತು ಕೇಬಲ್ ಟಿವಿಗಳಲ್ಲಿ ಯಾವುದೇ ರೀತಿಯ ಚುನಾವಣಾ ಪ್ರಚಾರದ ಜಾಹೀರಾತುಗಳನ್ನು ನೀಡಲು ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿಯ ಪೂರ್ವಾನುಮತಿಯನ್ನು ಪಡೆಯುವುದು ಕಡ್ಡಾಯವಾಗಿದ್ದು, ಇದನ್ನು ಉಲ್ಲಂಘಿಸಿಸುವವರ ವಿರುದ್ಧ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
……..

Latest Indian news

Popular Stories