ಲೋಕಸಭಾ ಚುನಾವಣೆ, ಗೋವಾ ಗಡಿಯಲ್ಲಿ ಹೆಚ್ಚಿನ ನಿಗಾ ವಹಿಸಿ; ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಜಿಲ್ಲೆಗೆ ಹೊಂದಿಕೊಂಡಿರುವ ಗೋವಾ ಗಡಿಭಾಗದಲ್ಲಿ, ಗೋವಾ ರಾಜ್ಯದಿಂದ ಉತ್ತರ ಕನ್ನಡ ಜಿಲ್ಲೆಗೆ ಅನಧಿಕೃತವಾಗಿ ಮದ್ಯ, ಮಾದಕ ವಸ್ತುಗಳು, ನಗದು ಮತ್ತು ಮತದಾರರಿಗೆ ಉಚಿತ ಉಡುಗೊರೆ ನೀಡುವ ಯಾವುದೇ ಸರಕುಗಳ ಸಾಗಾಣಿಕೆ ಆಗದಂತೆ ಹೆಚ್ಚಿನ ನಿಗಾ ವಹಿಸುವಂತೆ ದಕ್ಷಿಣ ಗೋವಾದ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಅವರು ಲೋಕಸಭಾ ಚುನಾವಣಾ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಮಂಗಳವಾರ ಗೋವಾ ರಾಜ್ಯದ ಅಧಿಕಾರಿಗಳೊಂದಿಗೆ ನಡೆದ ವೀಡಿಯೋ ಸಂವಾದ ಸಭೆಯಲ್ಲಿ ಮಾತನಾಡಿದರು.

ಚುನಾವಣಾ ಸಂದರ್ಭದಲ್ಲಿ ಗೋವಾ ರಾಜ್ಯದ ಮೂಲಕ ಜಿಲ್ಲೆಗೆ ಅನಧಿಕೃತವಾಗಿ ಮತ್ತು ಕಳ್ಳ ಸಾಗಾಣಿಕೆ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸಾಗಾಣಿಕೆ ಆಗುವ ಸಾಧ್ಯತೆಗಳಿದ್ದು, ತಮ್ಮ ರಾಜ್ಯದ ಗಡಿಯಲ್ಲಿ ಈ ಬಗ್ಗೆ ಹೆಚ್ಚಿನ ತಪಾಸಣೆ ನಡೆಸುವಂತೆ ಗೋವಾ ರಾಜ್ಯದ ಅಧಿಕಾರಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಗಳು, ಗೋವಾ ಗಡಿಯಿಂದ ಜಿಲ್ಲೆಯೊಳಗೆ ಅರಣ್ಯ ಮೂಲಕ ಕಾಲುದಾರಿಯಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಮಾಡುವವರ ವಿರುದ್ದ ಕೂಡಾ ಹೆಚ್ಚು ನಿಗಾ ಇರಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಗಡಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆಯುವಂತೆ ಮತ್ತು ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನೇಮಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಅರಣ್ಯದ ಮೂಲಕ ತಲೆ ಮೇಲೆ ಸರಕು ಹೊತ್ತು ಬರುವವರ ಬಗ್ಗೆ ಕೂಡಾ ಪರಿಶೀಲಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಅಗತ್ಯ ಸೂಚನೆ ನೀಡಿ, ತಪಾಸಣೆಯನ್ನು ಬಿಗಿಗೊಳಿಸುವಂತೆ ಹೇಳಿದರು.
ಸಮುದ್ರದ ಮೂಲಕ ಮದ್ಯ ಸಾಗಾಟ ಮಾಡುವವರ ವಿರುದ್ದ ಜಿಲ್ಲೆಯ ಕರಾವಳಿ ಕಾವಲು ಪಡೆ ಪರಿಶೀಲಿಸಲಿದ್ದು, ಗೋವಾ ಮೂಲಕ ಜಿಲ್ಲೆಯ ಕಡೆ ಸಂಚರಿಸುವ ಅನುಮಾನಸ್ಪದ ಬೋಟುಗಳ ಬಗ್ಗೆ ಮಾಹಿತಿ ಇದ್ದಲ್ಲಿ ಹಂಚಿಕೊಳ್ಳುವಂತೆ ಹಾಗೂ ರೈಲುಗಳಲ್ಲಿ ಕೂಡಾ ಅಬಕಾರಿ ಮತ್ತು ರೈಲ್ವೆ ಪೊಲೀಸ್ ರಿಂದ ಹೆಚ್ಚಿನ ತಪಾಸಣೆ ನಡೆಸುವಂತೆ ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕಾರ್ಯ ಕೈಗೊಳ್ಳಲು ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗಳನ್ನು ನಿಯೋಜಿಸುತ್ತಿದ್ದು, ಜಿಲ್ಲೆಯ ಮೂಲಕ ಗೋವಾ ರಾಜ್ಯಕ್ಕೆ ಅನಧಿಕೃತವಾಗಿ ಯಾವುದೇ ಮದ್ಯ, ಮಾದಕ ವಸ್ತು ಹಾಗೂ ಸರಕುಗಳ ಸಾಗಾಣಿಕೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ನಿಗಧಿತ ಮಿತಿಗಿಂತ ಹೆಚ್ಚಿನ ನಗದು ಮೊತ್ತವನ್ನು ಸಾಗಾಟ ಮಾಡುವವರ ಬಗ್ಗೆ ಹಾಗೂ ಮಾದಕ ವಸ್ತುಗಳ ಸರಬರಾಜು ಮಾಡುವವರ ವಿರುದ್ದ ಕೂಡಾ ಎರಡೂ ಜಿಲ್ಲೆಗಳ ಅಧಿಕಾರಿಗಳು ಹೆಚ್ಚಿನ ಕಟ್ಟೆಚ್ಚರ ವಹಿಸಬೇಕು, ಗೋವಾದ ರಾಜ್ಯದ ಅಧಿಕಾರಿಗಳು ಮತ್ತು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್, ಅಬಕಾರಿ ಮತ್ತು ಆದಾಯ ತೆರಿಗೆ ಅಧಿಕಾರಿಗಳು ನಿರಂತರವಾಗಿ ಸಂಪರ್ಕದಲ್ಲಿದ್ದು , ಪರಸ್ಪರ ಸಮನ್ವಯದಿಂದ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಮುಕ್ತ ಮತ್ತು ಪಾರದರ್ಶಕವಾಗಿ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಈಗಾಗಲೇ ಜಿಲ್ಲೆಯ ಅಂತರರಾಜ್ಯ ಗಡಿ ಪ್ರದೇಶವಾದ ಕಾರವಾರದ ಮಾಜಾಳಿ ಚೆಕ್ ಪೋಸ್ಟ್, ಜೋಯಿಡಾದ ಅನ್‌ಮೋಡ್ ಚೆಕ್ ಪೋಸ್ಟ್ ಕಾರ್ಯನಿರ್ವಹಿಸುತ್ತಿದ್ದು, ಕಾರವಾರದ ಮೈನ್‌ಗಿಣಿ ಚೆಕ್ ಪೋಸ್ಟ್ ಶೀಘ್ರದಲ್ಲಿ ಕಾರ್ಯರಂಭಗೊಳ್ಳಲಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್, ಅಬಕಾರಿ ಮತ್ತು ಅದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
……..

Latest Indian news

Popular Stories