ಕಬ್ಬು ಖರೀದಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಲಿ ; ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ

ಕಾರವಾರ : ಸರ್ಕಾರದ ಆದೇಶದಂತೆ 2024-25 ನೇ ಸಾಲಿನ ಕಬ್ಬು ಅರೆಯುವ ಹಂಗಾಮು ನವೆಂಬರ್ 15 ರಿಂದ ಆರಂಭವಾಗಲಿದ್ದು, ಜಿಲ್ಲೆಯ ಕಬ್ಬು ಬೆಳಗಾರರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ, ಜಿಲ್ಲೆಯಲ್ಲಿ ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ಕಬ್ಬು ಖರೀದಿ ಪ್ರಕ್ರಿಯೆಯನ್ನು ನಡೆಸುವಂತೆ ಹಳಿಯಾಳದ ಇಐಡಿ ಪ್ಯಾರಿ ಕಂಪೆನಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.

ಅವರು ಬುಧವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಮತ್ತು ಕಬ್ಬು ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 13,559.50 ಹೆಕ್ಟೇರ್ ನಲ್ಲಿ ಕಬ್ಬು ಬೆಳೆಯಲಾಗಿದ್ದು, ಕಬ್ಬು ಬೆಳಗಾರರಿಗೆ ಪ್ರತೀ ಮೆ. ಟನ್‌ಗೆ ಗರಿಷ್ಠ ದರ ನೀಡಿ ಕಬ್ಬು ಖರೀದಿಸುವಂತೆ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಗಳು, ಕಬ್ಬು ಕಟಾವು, ಸಾಗಾಣಿಕೆ, ಖರೀದಿ, ತೂಕ ಸೇರಿದಂತೆ ಯಾವುದೇ ಪ್ರಕ್ರಿಯೆಗಳಲ್ಲಿ ಜಿಲ್ಲೆಯ ಕಬ್ಬು ಬೆಳಗಾರರಿಗೆ ವಂಚನೆಯಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಸಕ್ಕರೆ ಕಾರ್ಖಾನೆಯು ಕಬ್ಬಿನ ಉಪ ಉತ್ಪನ್ನಗಳಿಂದ ಪಡೆಯುವ ಲಾಭವನ್ನು ರೈತರಿಗೆ ಹಂಚಬೇಕು, ಕಬ್ಬು ಕಟಾವುಗೆ ನಿಗಧಿಪಡಿಸಿರುವ ಪ್ರದೇಶದ ವ್ಯಾಪ್ತಿಯ ಬಗ್ಗೆ ಪರಿಶೀಲಿಸಿ, ರೈತರಿಗೆ ಅನುಕೂಲವಾಗುವಂತೆ ವ್ಯಾಪ್ತಿ ಮಿತಿಯಲ್ಲಿ ಅಗತ್ಯ ಬದಲಾವಣೆ ಮಾಡಬೇಕು, ಕಬ್ಬು ಕಟಾವು ಮತ್ತು ಸಾಗಾಣಿಕಾ ವೆಚ್ಚವನ್ನು ಸರ್ಕಾರದ ಸುತ್ತೊಲೆ ಪ್ರಕಾರ ವಸೂಲಿ ಮಾಡಬೇಕು ಎಂದರು.
ಕಬ್ಬು ಕಟಾವು ಸಂದರ್ಭದಲ್ಲಿ ಆದ್ಯತಾ ಪಟ್ಟಿಯನ್ನು ಸಿದ್ದಪಡಿಸಿ, ಈ ಕುರಿತು ಪಟ್ಟಯನ್ನು ಎಲ್ಲಾ ಗ್ರಾಮಗಳಲ್ಲಿನ ರೈತರಿಗೆ ನೀಡಬೇಕು.

ನಿಗಧಿತ ಪಟ್ಟಿಯ ಪ್ರಕಾರವೇ ರೈತರ ಜಮಿನುಗಳಲ್ಲಿ ಕಬ್ಬು ಕಟಾವು ಮಾಡಬೇಕು. ಇದನ್ನು ಉಲ್ಲಂಘಿಸಿದ್ದಲ್ಲಿ ಸಂಬಂಧಪಟ್ಟವರ ವಿರುದ್ದ ಪೊಲೀಸ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ಜಿಲ್ಲಾಧಿಕಾರಿ ನೀಡಿದರು .

ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಸರ್ಕಾರ ಜಾರಿ ಮಾಡಿರುವ ದ್ವಿಪಕ್ಷೀಯ ಒಪ್ಪಂದ ಪತ್ರ ಕೂಡಲೇ ಜಾರಿ ಮಾಡಬೇಕು ಮತ್ತಿತರ ವಿಷಯಗಳ ಬಗ್ಗೆ ರೈತರು ಮನವಿ ಸಲ್ಲಿಸಿದರು.ರೈತರ ಎಲ್ಲಾ ಮನವಿಗಳ ಬಗ್ಗೆ ರಾಜ್ಯ ಸಕ್ಕರೆ ಆಯುಕ್ತರ ಗಮನಕ್ಕೆ ತಂದು ಅಗತ್ಯ ಪರಿಹರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಈಶ್ವರ ಕುಮಾರ್ ಕಾಂದೂ, ಉಪ ವಿಭಾಗಾಧಿಕಾರಿ ಕನಿಷ್ಕ, ಅಪರ ಜಿಲ್ಲಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣ್‌ಕರ್, ವಿವಿಧ ಇಲಾಖೆಯ ಅಧಿಕಾರಿಗಳು, ಕಬ್ಬು ಬೆಳಗಾರರ ಸಂಘದ ಪದಾಧಿಕಾರಿಗಳು, ಇಐಡಿ ಪ್ಯಾರಿ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
….

Latest Indian news

Popular Stories