ಮನುಷ್ಯ ಒಳಗಡೆಯಿಂದ ಪರಿವರ್ತನೆಯಾಗಬೇಕು,ಆಗ ಮಾತ್ರ ಸಮಾಜವನ್ನು ಒಳ್ಳೆ ರೀತಿಯಲ್ಲಿ ಮುನ್ನಡೆಸಲು ಸಾಧ್ಯ: ನ್ಯಾಯಾಧೀಶ ರೋಹಿಣಿ ಬಸಾಪುರ

ಕಾರವಾರ : ಮನುಷ್ಯ ಒಳಗಡೆಯಿಂದ ಪರಿವರ್ತನೆಯಾಗಬೇಕು,ಆಗ ಮಾತ್ರ ಸಮಾಜವನ್ನು ಒಳ್ಳೆ ರೀತಿಯಲ್ಲಿ ಮುನ್ನಡೆಸಲು ಸಾಧ್ಯ ಎಂದು ದಾಂಡೇಲಿ ಸಿವಿಲ್ ನ್ಯಾಯಾಧೀಶೆ ರೋಹಿಣಿ ಬಸಾಪುರ ಅಭಿಪ್ರಾಯಪಟ್ಟರು.

ದಾಂಡೇಲಿಯ ಬೃಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಈಚೆಗೆ ನಗರಸಭೆಯ ಮೈದಾನದಲ್ಲಿ ಮೂರು ದಿನಗಳ ದ್ವಾದಶ ಜ್ಯೋತಿರ್ಲಿಂಗ ದರ್ಶನ, ಆಧ್ಯಾತ್ಮಿಕ ಪ್ರದರ್ಶನ, ರಾಜ್ಯ ಕಾನೂನು ಸೇವಾ ಪ್ರಾಧಿಕಾರ ದಾಂಡೇಲಿ ಘಟಕದಿಂದ ಏರ್ಪಟ್ಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಜಗತ್ತಿನಲ್ಲಿ ಆಧ್ಯಾತ್ಮಿಕತೆಯ ಅವಶ್ಯಕತೆ ಇದೆ. ಜೀವನವನ್ನು ನಡೆಸುವಂತ ಶೈಲಿ ಬೇಕಾಗಿದೆ. ಅದನ್ನು ಶಾಲಾಕಾಲೇಜುಗಳಲ್ಲಿ ಕಲಿಸಲಾಗುವದಿಲ್ಲ. ಇಂತಹ ಸಂಸ್ಕಾರವನ್ನು ಈಶ್ವರೀಯ ವಿಶ್ವವಿದ್ಯಾಲಯ ಕಲಿಸಿಕೊಡುತ್ತದೆ ಎಂದು ನುಡಿದರು.

ಪ್ರತಿಯೊಬ್ಬ ಮನುಷ್ಯನಿಗೆ ಬೇಕಾಗಿರುವದು ಮನಸ್ಸಿನೊಳಗಿನ ಶಾಂತಿ. ಶಾಂತಿ ಯಾವಾಗ ಇರುತ್ತೋ ಆವಾಗ ಹೊರಗಿನ ಯಾವುದೇ ಕೆಲಸವನ್ನು ಮಾಡಿದರೂ ಅದನ್ನು ಚೆನ್ನಾಗಿ ಮಾಡಲು ಸಾಧ್ಯ. ಸುಮಾರು 20 ವರ್ಷಗಳ ಹಿಂದೆ ಜಗತ್ತಿನಲ್ಲಿ ಶಾಂತಿ ಸೌಹಾರ್ದತೆ ಇದ್ದದ್ದನ್ನು ನೋಡಬಹುದು. ಆದರೆ ಇಂದು ಎಂತಹ ಸಂಧಿಗ್ದ ಪರಿಸ್ಥಿತಿ. ಸಮಾಜದಲ್ಲಿ ಮೂಡಿರುವ ಅರಾಜಕತೆ ಭೃಷ್ಠಾಚಾರವನ್ನೆ ನೋಡಿ. ಅಧಿಕಾರ ಇರುವವರು ಎಲ್ಲವನ್ನು ಮಾಡುತ್ತಾರೆ. ಅವರಲ್ಲಿ. ಎಲ್ಲ ಇರುತ್ತೆ. ಆದರೂ ದುರಾಸೆ. ಬೇಕು, ಬೇಕೆಂಬ ಅತಿಯಾದ ದುರಾಸೆ ಸಮಾಜದ ವ್ಯವಸ್ಥೆಯನ್ನೆ ಬದಲಿಸಿದೆ. ಕಿತ್ತು ತಿನ್ನುವ ಬಡತನದಲ್ಲಿ ಚಿಕ ಮಕ್ಕಳು, ಮಹಿಳೆಯರು ಶೋಷಿತರಾಗುತ್ತಿದ್ದು , ಅವರಿಗೆ ಶಾಂತಿ, ಸೌಹಾರ್ದತೆ, ಸಂಸ್ಕಾರ ರೂಪಿಸಿ ರಕ್ಷಣೆ ಒದಗಿಸಲು ಇಂತಹ ಸಮಾಜಮುಖಿ ಕಾರ್ಯಕ್ರಮಗಳ ಆಯೋಜನೆಯಾಗಬೇಕು ಎನ್ನುವ ಆಶಯ ವ್ಯಕ್ತಪಡಿಸಿದರು.

ಇದೇ ವೇಳೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಾನೂನು ತಿಳುವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮೂರು ದಿನಗಳ ಕಾಲ ಜರುಗಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇಲ್ಲಿಯ ದ್ವಾದಶ ಜ್ಯೋತಿರ್ಲಿಂಗ್ ದರ್ಶನ, ಅನಂತಕೋಟಿ ಶಿವಲಿಂಗ ದರ್ಶನ ಆಧ್ಯಾತ್ಮಿಕ ಪ್ರದರ್ಶನ, ಸಾ೦ಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ಆನಂದಿಸಿದರು.
ಕಾರ್ಯಕ್ರಮದಲ್ಲಿ ತಹಶೀಲದಾರ ಎಂ. ಎನ್. ಮಠದ, ಡಿ.ವೈ ಎಸ್.ಪಿ. ಶಿವಾನಂದ ಎನ್.ಎಂ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚವ್ಹಾಣ, ಸಹಾಯಕ ಸರ್ಕಾರಿ ಅಭಿಯೋಜಕರಾದ ಶಿವರಾಯ ಎಚ್. ದೇಸಾಯಿ, ಪ್ರಕಾಶ ಹಾಲಮ್ಮನವರ, ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಕುಲಕರ್ಣಿ, ನಗರಸಭಾ ಸದಸ್ಯರು,ಮತ್ತಿತರ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡು ಸಹಕಾರ ನೀಡಿದರು. ಇದೇ ಸಂದರ್ಭದಲ್ಲಿ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಗೀತಕ್ಕ ಮಾತನಾಡಿ ಶಿವಸ್ಮರಣೆಯ ಸನ್ನಿಧಿಯಲ್ಲಿ ಶಿವನಾಮ ಸ್ಮರಣೆ ಮಾಡುತ್ತಾ ಆಧ್ಯಾತ್ಮದ ತಲ್ಲೀನತೆಯಿಂದ ಕೈಗೊಳ್ಳುವ ಉಪವಾಸವೇ ನಿಜ ಸ್ವರೂಪದ ದರ್ಶನ ಎಂದು ನಿರಾಕಾರ ನಿರ್ಗುಣನು ಆಗಿರುವ ಶಿವನ ಕುರಿತು ವಿವರಿಸಿದರು. ನಿರ್ಮಲಕ್ಕ ಕಾರ್ಯಕ್ರಮ ಸಂಯೋಜಿಸಿದರು.
…….

Latest Indian news

Popular Stories