ವಿಧಾನಸೌಧ ಸಚಿವಾಲಯದಲ್ಲಿ ಭಾರಿ ಅಗ್ನಿ ದುರಂತ; ಕಡತಗಳು ಭಸ್ಮ

ಭೋಪಾಲ್‌: ಮಧ್ಯಪ್ರದೇಶ ವಿಧಾನಸೌಧದ ಸಚಿವಾಲಯದ ಕಟ್ಟಡದಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದೆ. ಭೋಪಾಲ್‌ನ ಅರೇರಾ ಹಿಲ್‌ನಲ್ಲಿರುವ ವಲ್ಲಭ ಭವನ ರಾಜ್ಯ ಸಚಿವಾಲಯದ ಕಟ್ಟಡದಲ್ಲಿ ಏಕಾಏಕಿ ಅಗ್ನಿ ದುರಂತ ಸಂಭವಿಸಿದ್ದು, ಸುಮಾರು 10-15 ಅಗ್ನಿ ಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸಲು ಆಗಮಿಸಿವೆ.

ಅಗ್ನಿಶಾಮಕ ದಳದ ಸಿಬ್ಬಂದಿಯು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ. ಅಗ್ನಿಯ ಕೆನ್ನಾಲಗೆಗೆ ಹಲವು ಕಡತಗಳು ಭಸ್ಮವಾಗಿವೆ ಎಂದು ತಿಳಿದುಬಂದಿದೆ.

ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಸಚಿವಾಲಯ ಕಟ್ಟಡದ ಮೂರನೇ ಅಂತಸ್ತಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿದ ಕಾರಣ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದಾಗ್ಯೂ, ಮೂರನೇ ಮಹಡಿಯಿಂದ ಬೆಂಕಿಯು ಬೇರೆ ಮಹಡಿಗೆ ಹರಡಿಲ್ಲ. ಇಲ್ಲದಿದ್ದರೆ, ಭಾರಿ ಪ್ರಮಾಣದಲ್ಲಿ ನಷ್ಟವಾಗುತ್ತಿತ್ತು. ಕಟ್ಟದಲ್ಲಿರುವ ಸಿಬ್ಬಂದಿಗೂ ತೊಂದರೆಯಾಗುತ್ತಿತ್ತು ಎಂದು ಹೇಳಲಾಗುತ್ತಿತ್ತು.

ಅಗ್ನಿ ಅನಾಹುತದ ಕುರಿತು ಮುಖ್ಯಮಂತ್ರಿ ಮೋಹನ್‌ ಯಾದವ್‌ ಪ್ರತಿಕ್ರಿಯಿಸಿದ್ದಾರೆ. “ವಲ್ಲಭ ಭವನದ ಮೂರನೇ ಮಹಡಿಯಲ್ಲಿ ಅಗ್ನಿ ದುರಂತ ಸಂಭವಿಸಿದ ವಿಷಯ ಗೊತ್ತಾಗಿದೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಯಾವುದೇ ರೀತಿಯಲ್ಲಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಪ್ರಕರಣದ ಉಸ್ತುವಾರಿ ವಹಿಸಿಕೊಳ್ಳಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಸದ್ಯ, ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಘಟನೆಯ ಕುರಿತು ವಿವರವಾದ ವರದಿ ನೀಡಲು ಸೂಚಿಸಿದ್ದೇನೆ. ಮತ್ತೆ ಇಂತಹ ದುರಂತಗಳು ಮರುಕಳಿಸುವುದಿಲ್ಲ ಎಂಬ ನಂಬಿಕೆ ಇದೆ” ಎಂದು ಹೇಳಿದ್ದಾರೆ.

ದುರಂತದ ಕುರಿತು ಸಚಿವಾಲಯದ ಆವರಣದಲ್ಲಿ ಸ್ವಚ್ಛತೆ ಕೆಲಸದಲ್ಲಿ ತೊಡಗಿದ್ದ ಸಿಬ್ಬಂದಿಯು ಮಾಹಿತಿ ನೀಡಿದ್ದಾರೆ. ಇದಾದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದೆ. ಇಡೀ ಮಹಡಿಯು ಅಗ್ನಿಗೆ ಆಹುತಿಯಾದ ಕಾರಣ ದಟ್ಟ ಹೊಗೆ ಆವರಿಸಿತ್ತು. ಆದಾಗ್ಯೂ, ಅಗ್ನಿ ದುರಂತಕ್ಕೆ ನಿಖರವಾದ ಕಾರಣ ಏನು ಎಂಬುದು ಇದುವರೆಗೆ ಗೊತ್ತಾಗಿಲ್ಲ. ಯಾವ ದಾಖಲೆಗಳು ಭಸ್ಮವಾಗಿವೆ ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Latest Indian news

Popular Stories