ಜಿಲ್ಲೆಯ ಅನುಪಾತ : 1000 ಗಂಡುಗಳಿಗೆ 967 ಹೆಣ್ಣು
ಕಾರವಾರ : ಹೆಣ್ಣು ಮತ್ತುಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಆಶಾಕಿರಣ ಎನ್ನುವಂತೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಡಿಸೆಂಬರ್ ವರೆಗೆ ಜನಿಸಿರುವ ಮಕ್ಕಳಲ್ಲಿನ ಲಿಂಗಾನುಪಾತ ಪ್ರಮಾಣ
1000 ಗಂಡು ಮಕ್ಕಳಿಗೆ 1016 ಹೆಣ್ಣು ಮಕ್ಕಳು ಅನುಪಾತ ಇದ್ದು, ಸಂತಸ ಮೂಡಿಸಿದೆ. ಆದರೆ ಇದೇ ಅವಧಿಯಲ್ಲಿ ಜಿಲ್ಲೆಯ ಒಟ್ಟು ಲಿಂಗಾನುಪಾತ ಮಾತ್ರ 1000 ಗಂಡುಗಳಿಗೆ 967 ಹೆಣ್ಣು ಅನುಪಾತ ಇದೆ.
ಭಟ್ಕಳ ತಾಲೂಕಿನಲ್ಲಿ ಈ 2023ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 986 ಗಂಡು ಮತ್ತು 1002 ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 1016 ಆಗಿದೆ ಅಲ್ಲದೇ ಕಳೆದ 2022 ರ ಏಪ್ರಿಲ್‌ನಿಂದ 2023ರ ಮಾರ್ಚ್ವರೆಗೆ ಒಟ್ಟು 1469 ಗಂಡು ಮತ್ತು 1471 ಹೆಣ್ಣು ಮಕ್ಕಳು ಸೇರಿದಂತೆ 2940 ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 1001 ಆಗಿದೆ.
ಜಿಲ್ಲೆಯಲ್ಲಿ ಭಟ್ಕಳದ ನಂತರ ಯಲ್ಲಾಪುರ ತಾಲೂಕುನಲ್ಲಿ ಲಿಂಗಾನುಪಾತದ ಪ್ರಮಾಣ 1000 ಇದ್ದು, ಪ್ರಸಕ್ತ ಸಾಲಿನಲ್ಲಿ ಡಿಸೆಂಬರ್‌ವರೆಗೆ 197 ಹೆಣ್ಣು ಮತ್ತು ಗಂಡು ಮಕ್ಕಳು ಜನಿಸಿದ್ದಾರೆ. ಕುಮಟಾ ತಾಲೂಕು 3ನೇ ಸ್ಥಾನದಲ್ಲಿದ್ದು 955 ಗಂಡು ಮತ್ತು 952 ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 997. ಜಿಲ್ಲೆಯಲ್ಲಿ ಅತೀ ಕಡಿಮೆ ಲಿಂಗಾನುಪಾತದ ಪ್ರಮಾಣ ಕಾರವಾರ ಮತ್ತು ಮುಂಡಗೋಡನಲ್ಲಿದ್ದು ಅಲ್ಲಿನ ಪ್ರಮಾಣ 869 ಇದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 2018-19 ರಿಂದ ಅಂಕಿ ಅಂಶಗಳನ್ನು ಪರಿಶೀಲಿಸಿದ್ದಲ್ಲಿ ಈ ಅವಧಿಯಲ್ಲಿ ಜನಿಸಿರುವ ಮಕ್ಕಳ ಲಿಂಗಾನುಪಾತದ ಪ್ರಮಾಣದಲ್ಲಿ ಏರಿಳಿತ ಕಂಡು ಬರುತ್ತದೆ. 2018-19ರಲ್ಲಿ ಜಿಲ್ಲೆಯಲ್ಲಿ 10,261 ಗಂಡು ಮತ್ತು 9,956 ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 970, 2019-20 ರಲ್ಲಿ 10,071 ಗಂಡು ಮತ್ತು 9,714 ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 965, 2020-21 ರಲ್ಲಿ 9,185 ಗಂಡು ಮತ್ತು 8,731 ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 951, 2021-22 ರಲ್ಲಿ 9,109 ಗಂಡು ಮತ್ತು 8,650 ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 950, 2022-23 ರಲ್ಲಿ 9,713 ಗಂಡು ಮತ್ತು 9,233 ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 951 ರಲ್ಲಿದೆ. ಆದರೆ ಭಟ್ಕಳ ತಾಲೂಕಿನಲ್ಲಿ ಈ ಪ್ರಮಾಣ ಅಧಿಕಗೊಂಡಿದ್ದು, 2018-19ರಲ್ಲಿ 938 ಇದ್ದದ್ದು, 2022-23 ರಲ್ಲಿ 1001 ಆಗುವ ಮೂಲಕ ಗಮನಾರ್ಹ ಏರಿಕೆ ಕಂಡಿದೆ. ಪ್ರಸಕ್ತ ಸಾಲಿನಲ್ಲಿ ಇದುವರೆಗಿನ ಜಿಲ್ಲೆಯ ಲಿಂಗಾನುಪಾತದ ಪ್ರಮಾಣ 967 ಆಗಿದ್ದು ಆಶಾದಾಯಕವಾಗಿದೆ.
ಜಿಲ್ಲೆಯಲ್ಲಿ ಯಾವುದೇ ಸಂದರ್ಭದಲ್ಲೂ ಅಕ್ರಮವಾಗಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಡೆಯದಂತೆ ವ್ಯಾಪಕವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಇದುವರೆಗೆ ಇಂತಹ ಯಾವುದೇ ಪ್ರಕರಣ ಕಂಡು ಬಂದಿರುವುದಿಲ್ಲ. ತಾಯಿ ಮತ್ತು ಶಿಶು ಮರಣ ತಪ್ಪಿಸಲು ಸಹ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗರ್ಭೀಣಿ ಸ್ತ್ರೀಯರ ಯೋಗಕ್ಷೇಮ ವಿಚಾರಣೆಗೆ ವಿವಿಧ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಗರ್ಭಿಣಿ ತಾಯಿ ಮತ್ತು ನವಜಾತು ಶಿಶುವಿನ ಸುರಕ್ಷತೆಗೆ ಒತ್ತು ನೀಡಲಾಗಿದೆ. ಜಿಲ್ಲೆಯಲ್ಲಿನ ಲಿಂಗಾನುಪಾತದ ಪ್ರಮಾಣವನ್ನು ಗಮನಾರ್ಹ ರೀತಿಯಲ್ಲಿ ಸುಧಾರಿಸಲು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ.
– ಗಂಗೂಬಾಯಿ ಮಾನಕರ,
ಜಿಲ್ಲಾಧಿಕಾರಿಗಳು, ಉತ್ತರಕನ್ನಡಜಿಲ್ಲೆ.