ಅಹಮದಾಬಾದ್: ಅಹಮದಾಬಾದ್‌ನ ನಿತ್ಯಾನಂದ ಆಶ್ರಮದಲ್ಲಿ ಅಕ್ರಮ ಬಂಧನದಲ್ಲಿ ಇರಿಸಲಾಗಿದೆ ಎನ್ನಲಾದ ತನ್ನ ಇಬ್ಬರು ಹೆಣ್ಣುಮಕ್ಕಳ ಕಸ್ಟಡಿಗೆ ಕೋರಿ ತಂದೆಯೊಬ್ಬರು ಗುಜರಾತ್ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ನಾಲ್ಕು ವರ್ಷಗಳ ನಂತರ, ವಿಭಾಗೀಯ ಪೀಠವು ಶುಕ್ರವಾರ ಅರ್ಜಿಯನ್ನು ವಜಾಗೊಳಿಸಿದೆ.
ಮಹಿಳೆಯರು ವಯಸ್ಕರಾಗಿದ್ದಾರೆ, ಮತ್ತು ಅವರೊಂದಿಗಿನ ನ್ಯಾಯಾಲಯದ ಸಂವಾದವು ಅವರು ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗಿದ್ದಾರೆ ಅನ್ನಿಸಿಲ್ಲ ಮತ್ತು ಅವರ ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸಿ ಅವರು ಸಂತೋಷವಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟಿದೆ.
2019 ರ ನವೆಂಬರ್‌ನಲ್ಲಿ ಜನಾರ್ದನ ಶರ್ಮಾ ಅವರು ಸಲ್ಲಿಸಿದ ಅರ್ಜಿಯಲ್ಲಿ ಅವರ ಪುತ್ರಿಯರಾದ ಲೋಪಾಮುದ್ರ ಅಲಿಯಾಸ್ ತತ್ವಪ್ರಿಯಾ ಮತ್ತು ನಂದಿತಾ ಅಲಿಯಾಸ್ ನಿತ್ಯಾನಂದಿತಾ ಅವರನ್ನು ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಅಹಮದಾಬಾದ್ ಆಶ್ರಮದಲ್ಲಿ ಅಕ್ರಮ ಬಂಧನದಲ್ಲಿ ಇರಿಸಲಾಗಿತ್ತು ಮತ್ತು ನಿತ್ಯಾನಂದ ಪಲಾಯನ ಮಾಡಿದ ನಂತರ ಇಬ್ಬರನ್ನು ದೇಶದಿಂದ ಅಪಹರಿಸಲಾಗಿದೆ ಎಂದು ಆರೋಪಿಸಲಾಗಿದೆ. ಇಬ್ಬರು ಜಮೈಕಾದಲ್ಲಿ ನೆಲೆಸಿದ್ದಾರೆ ಮತ್ತು ಅವರ ತಂದೆ ಅವರ ಕಸ್ಟಡಿಗೆ ಕೋರಿದ್ದರು.
ಹೈಕೋರ್ಟ್ ನಡಾವಳಿಗಳ ಪ್ರಕಾರ, ಇಬ್ಬರೂ ಜನವರಿ 10 ರಂದು ನ್ಯಾಯಮೂರ್ತಿಗಳಾದ ಎ ವೈ ಕೊಗ್ಜೆ ಮತ್ತು ಆರ್ ಎಂ ಸರೀನ್ ಅವರ ಪೀಠದ ಮುಂದೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಹಾಜರಾಗಿದ್ದರು.