ವೈಭವದ ಕದಂಬೋತ್ಸವ ಆಚರಣಿಗೆ ಸಿದ್ಧತೆ ; ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಕನ್ನಡದ ಮೊದಲ ಸಾಮ್ರಾಜ್ಯ ಸ್ಥಾಪಕರು , ಕದಂಬರ ಅರಸರ ನೆನಪಿಗಾಗಿ ಆಚರಿಸುವ ಕದಂಬೋತ್ಸವನ್ನು ಫೆಬ್ರವರಿ 24 ಮತ್ತು 25 ರಂದು ವೈಭವ ದಿಂದ ಆಚರಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಶಿರಸಿಯ ತಾಲೂಕು ಕಚೇರಿಯಲ್ಲಿ, ಕದಂಬೋತ್ಸವ ಸಿದ್ಧತೆ ಕುರಿತು ಬುಧುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕದಂಬೋತ್ಸವ ಆಚರಣಿಯಲ್ಲಿ ಯಾವುದೇ ಲೋಪಗಳಾಗದಂತೆ ಅತ್ಯಂತ ವ್ಯವಸ್ಥಿತವಾಗಿ ನಡೆಸಲು 15 ಸಮಿತಿಗಳನ್ನು ರಚಿಸಿದ್ದು, ಎಲ್ಲಾ ಸಮಿತಿಗಳು ತಮ್ಮ ಕಾರ್ಯ ಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ತಿಳಿಸಿದರು.

ಕದಂಬೋತ್ಸವದ ವೇದಿಕೆಗಳಲ್ಲಿ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಸ್ಥಳೀಯ ಪ್ರತಿಭಾನ್ವಿತ ಕಲಾವಿದರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿ, ಕಾರ್ಯಕ್ರಮ ನೀಡಲು ಇಚ್ಛಿಸುವ ಕಲಾವಿದರು ತಮ್ಮ ಅರ್ಜಿಗಳನ್ನು ಸಲ್ಲಿಸುವಂತೆ ತಿಳಿಸಿದರು.

ಕಾರ್ಯಕ್ರಮಕ್ಕೆ ಆಗಮಿಸುವ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಗತ್ಯಕನುಗುಣವಾಗಿ ಹೆಚ್ಚಿನ ಬಸ್ ಸೌಲಭ್ಯ ಒದಗಿಸುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಗಳು ರಾತ್ರಿ ವೇಳೆಯಲ್ಲಿ ಸಾರ್ವಜನಿಕರಿಗೆ ವಾಹನ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ ಎಂದು ಸೂಚಿಸಿದರು.

ಕದಂಬೋತ್ಸವ ಸಂದರ್ಭದಲ್ಲಿ ಸೂಕ್ತ ಭದ್ರತೆ ಒದಗಿಸಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಕದಂಬೋತ್ಸವದಲ್ಲಿ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮಗಳನ್ನು ವೀಕ್ಷಿಸಿ ಸಂಭ್ರಮಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವ ಮೂಲಕ ಕದಂಬೋತ್ಸವವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಶಿರಸಿ ಉಪ ವಿಭಾಗಾಧಿಕಾರಿ ಅಪರ್ಣಾ ರಮೇಶ್, ತಹಶೀಲ್ದಾರ್ ಶ್ರೀಧರ್, ಕದಂಬೋತ್ಸವ ಆಚರಣೆ ಕುರಿತು ರಚಿಸಲಾಗಿರುವ ವಿವಿಧ ಸಮಿತಿಗಳ ಅಧಿಕಾರಿಗಳು, ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Latest Indian news

Popular Stories