ಸಾಗರ ಮಾಲಿನ್ಯ ತಡೆಯುವುದು ಇಂದಿನ ತುರ್ತು ಅಗತ್ಯ : ಡಿಎಫ್ ಓ ರವಿ ಶಂಕರ್‌

ಕಾರವಾರ : ಸಾಗರ ಮಾಲಿನ್ಯ ತಡೆಯುವುದು ಇಂದಿನ ತುರ್ತು ಅಗತ್ಯ ಎಂದು ಕಾರವಾರ ಅರಣ್ಯ ಉಪ ವಿಭಾಗದ ಡಿಎಫ್ ಓ ರವಿ ಶಂಕರ್‌ ಅಭಿಪ್ರಾಯಪಟ್ಟರು.


ಕಾರವಾರ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ 2024 ರ ವಿಶ್ವಸಾಗರ ದಿನಾಚರಣೆಯ ಅಂಗವಾಗಿ ಕೊಚ್ಚಿನ್ ಓಸಿಯನ್‌ ಸೋಸೈಟಿ ಆಫ್, ಇಂಡಿಯಾ , ಕಡಲತೀರದ ಅರಣ್ಯ ರಕ್ಷಣಾ ವಿಭಾಗ , ಕಡಲ ಜೀವಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಶನಿವಾರ ಬೆಳಿಗ್ಗೆ ಏರ್ಪಟ್ಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಕಾರವಾರ ಸೇರಿದಂತೆ ದೇಶದ ಸುಮಾರು 21 ಕಡಲ ತೀರಗಳಲ್ಲಿ ಏಕಕಾಲದಲ್ಲಿ ವಿಶ್ವ ಸಾಗರ ದಿನಾಚರಣೆ
ಆಚರಿಸಲಾಗುತ್ತಿದೆ. ಸಾಗರಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ಸೇರಬಾರದು. ಅಪಾಯಕಾರಿ ತೈಲ ಸೇರದಂತೆ ನೋಡಿಕೊಳ್ಳಬೇಕು. ಮನುಷ್ಯನ ಆರೋಗ್ಯದಂತೆ ಸಮುದ್ರಗಳ ಆರೋಗ್ಯ ಮುಖ್ಯ. ಸಮುದ್ರ ಅನೇಕ ಜೀವಿಗಳ ಆಶ್ರಯತಾಣ. ಸಮುದ್ರ ಸಂಪತ್ತು ರಕ್ಷಣೆ ನಮ್ಮ ಕರ್ತವ್ಯ. ಸಮುದ್ರ ತ್ಯಾಜ್ಯ ದಿಂದ ಕೂಡಿ, ಕಲುಷಿತವಾದರೆ,‌ಮೀನು ಸಂತತಿ ನಾಶ ವಾಗಲಿದೆ ಎಂದು ಎಚ್ಚರಿಸಿದರು.

ವಿಶ್ವ ಸಾಗರ ದಿನದ ಪ್ರಯುಕ್ತ ಸ್ವಚ್ಚತಾ ಕಾರ್ಯವನ್ನು ಅಲಿಗದ್ದಾ ಬೀಚಿನಲ್ಲಿ ಆಚರಿಸಲಾಯಿತು. ಸುಮಾರು 500 ಮೀಟರ ಅಲಿಗದ್ದಾ ಕಡಲತೀರದಲ್ಲಿ 397 ಕೆ.ಜಿ. ಯಷ್ಟು ತ್ಯಾಜ್ಯವನ್ನು ಸಂಗ್ರಹಿಸಿದರು. 135 ಕೆ.ಜಿ. ಪ್ಲಾಸ್ಟಿಕ್‌ ಬ್ಯಾಗ್ಸ್‌, 39 ಕಿ.ಜಿ. ಮೀನಿನ ಬಲೆಗಳು, 31 ಕೆ.ಜಿ. ಪ್ಲಾಸ್ಟಿಕ್‌ ಬಾಟಲ್‌ , 25 ಕೆ.ಜಿ. ಪಾದರಕ್ಷೆಗಳು, 20 ಕೆ.ಜಿ ಗಾಜಿನ ಬಾಟಲಿಗಳು, 9 ಕೆ.ಜಿ. ಪ್ಲಾಸ್ಟಿಕ್‌ ಡಬ್ಬಗಳು, 9 ಕೆ.ಜಿ. ಥರ್ಮೊಕೊಲ, 8 ಕೆ.ಜಿ ಬಟ್ಟೆಗಳು, ಹಾಗೂ 119 ಕೆ.ಜಿ. ಇತರೆ ತ್ಯಾಜ್ಯಗಳು, ಸ್ಯಾನಿಟರಿ, ಎಲೆಕ್ಟ್ರೀಕ್‌ ವಸ್ತುಗಳು, ವೈದ್ಯಕೀಯ ತ್ಯಾಜ್ಯಗಳು, ಲೋಹಗಳು, ಆಟಿಕೆಗಳು ಸಂಗ್ರಹಿಸಲಾಯಿತು.


ಈ ಕಾರ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕಾರವಾರ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಕಾರವಾರ ವಿಭಾಗದ 15 ಜನ ಸಿಬ್ಬಂದಿಗಳು ಹಾಗೂ ಕೋಸ್ಟಲ್‌ ಸೆಕ್ಯೂರಿಟಿ ಪೋಲಿಸ್‌ ಇಲಾಖೆಯ 10 ಜನ ಸಿಬ್ಬಂದಿಗಳು ಒಟ್ಟು 100 ಜನರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

……

Latest Indian news

Popular Stories