ಹಳೆಯ ಪಿಂಚಣಿ ಪದ್ಧತಿ ಜಾರಿಗೆ ಆಗ್ರಹಿಸಿ ಮಾಧ್ಯಮಿಕ ಶಾಲಾ ನೌಕರರಿಂದ ಪ್ರತಿಭಟನೆ : ಸಿ.ಎಂ. ಗೆ ಮನವಿ ಅರ್ಪಣೆ

ಕಾರವಾರ: ಹಳೆಯ ಪಿಂಚಣಿ ಪದ್ಧತಿ ಜಾರಿಗೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರಿಂದ ಕಾರವಾರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ಜಿಲ್ಲೆಯ ಕರಾವಳಿ ತಾಲೂಕುಗಳಿಂದ ಬಂದಿದ್ದ ಪ್ರೌಢಶಾಲಾ ಶಿಕ್ಷಕರು ಸಾಂಕೇತಿಕ ಪ್ರತಿಭಟನೆ ಮಾಡಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಅರ್ಪಣೆ ಮಾಡಿದರು .ಈ ವೇಳೆ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ ಬಂಟ ಮಾತನಾಡಿ , 2006 ರ ನಂತರ ನೇಮಕವಾದ ಅನುದಾನಿತ ಪ್ರೌಢಶಾಲೆ ಹಾಗೂ ಸರ್ಕಾರಿ ನೌಕರರಿಗೆ ಯಾವುದೇ ಪಿಂಚಣಿ ಸೌಲಭ್ಯ ಇರುವುದಿಲ್ಲ.
ಈ ಸಂಬಂಧ ಹಲವು ಹೋರಾಟಗಳಾಗಿವೆ. ಹಿಂದೆ ಇದ್ದ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಈಗಿನ ಸರಕಾರವಾದರೂ ನಮ್ಮ ಬೇಡಿಕೆಗಳಿಗೆ ಕಿವಿಗೊಡುವ ನಂಬಿಕೆಯಿದೆ ಎಂದರು. ಅದಕ್ಕಾಗಿ ಈಗ ಮನವಿ ನೀಡುತ್ತಿದ್ದೇವೆ. ಹಳೆಯ ಪಿಂಚಣಿ ನಮಗೆ ನೀಡಬೇಕು. 2006 ಕ್ಕಿಂತ ಪೂರ್ವದಲ್ಲಿ ಇಲಾಖೆಯಿಂದ ಅನುಮತಿ ಪಡೆದು ನೇಮಕವಾದ ಅನುದಾನಿತ ಪ್ರೌಢಶಾಲಾ ಶಿಕ್ಷಕರಿಗೆ ,ಸರ್ಕಾರಿ ನೌಕರರಿಗೆ ಪಿಂಚಣಿ ನೀಡಬೇಕು. 2015 ರಿಂದ ಖಾಲಿ ಇರುವ ಪ್ರಾಥಮಿಕ, ಫ್ರೌಢ ಶಾಲೆಗಳ ಖಾಲಿ ಹುದ್ದೆ ಭರ್ತಿ ಮಾಡಬೇಕು. ಜ್ಯೋತಿ ಸಂಜೀವಿನಿ ಯೋಜನೆಯನ್ನು ನಮಗೂ ಅನ್ವಯಿಸಬೇಕು. ಬಸವರಾಜ ಹೊರಟ್ಟಿ ಅವರು ಸರ್ಕಾರಕ್ಕೆ ನೀಡಿದ ಕಾಲ್ಪನಿಕ ವೇತನ ವರದಿ ಜಾರಿಗೊಳಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಸಂಚಾಲಕ ಎಂ.ಟಿ.ಗೌಡ ಮಾತನಾಡಿ 1995 ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಬೇಕು. ಅನುದಾನಿತ ಶಾಲೆಗಳಲ್ಲಿ ಡಿ ದರ್ಜೆ ಹುದ್ದೆ ಭರ್ತಿಗೆ ಕ್ರಮಕೈಗೊಳ್ಳಬೇಕು. 7 ನೇ ವೇತನ ಆಯೋಗದ ವರದಿ ಜಾರಿ ಮಾಡಬೇಕು ಎಂದು ಹೇಳಿದರು. ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ರಾಜು ಮನವಿ ಸ್ವೀಕರಿಸಿ, ಬೇಡಿಕೆಗಳನ್ನು ಸರ್ಕಾರಕ್ಕೆ ಕಳಿಸುವುದಾಗಿ ಹೇಳಿದರು. ಪ್ರತಿಭಟನೆಯು ಜಿಲ್ಲಾ ಕೇಂದ್ರ ಕಾರವಾರದ ಪ್ರಮುಖ ರಸ್ತೆಗಳಲ್ಲಿ ಹಾದು ಜಿಲ್ಲಾಧಿಕಾರಿ ಕಚೇರಿ ತಲುಪುವತನಕ ಬಿಗಿ ಬಂದೋಬಸ್ತ ಏರ್ಪಡಿಸಲಾಗಿತ್ತು. ಪ್ರತಿಭಟನೆಯ ನೇತೃತ್ವವನ್ನು ಜಿ.ಆರ್.ನಾಯಕ, ಅನಿಲ ರೋಡ್ರಿಗಸ್, ಸಂತೋಷ ನಾಯ್ಕ, ಶಬ್ಬೀರ್ ದಫೇದಾರ್, ಎಲ್.ಎಂ.ಹೆಗಡೆ, ಜೈರಂಗನಾಥ, ಎಂ.ಟಿ.ಗೌಡ, ಪ್ರಭಾಕರ ಬಂಟ ವಹಿಸಿದ್ದರು.