ಕಾರವಾರ : ದೇಶದ ಅಭಿವೃದ್ಧಿ ರಾಜಕಾರಣಿಗಳಿಂದ, ಬೇರೆ ಬೇರೆ ವ್ಯವಸ್ಥೆಯಿಂದ ಆಗಿದೆ ಎಂದು ಅಂದುಕೊಂಡಿದ್ದರೆ ಅದು ತಪ್ಪು, ದೇಶದ ಅಭಿವೃದ್ಧಿಗೆ ನಿಜವಾಗಿಯೂ ಕಾರಣರಾದವರು ಶಿಕ್ಷಕರು ಎಂದು ಮೀನುಗಾರಿಕೆ, ಬಂದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ಎಸ್ ವೈದ್ಯ ಹೇಳಿದರು.
ಅವರು ಗುರುವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಹೊನ್ನಾವರದ ಮೂಡಗಣಪತಿ ಸಬಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ವ್ಯಕ್ತಿ ಎಷ್ಟೇ ಎತ್ತರಕ್ಕೆ ಏರಿದರು, ತನಗೆ ವಿದ್ಯೆ ಕಲಿಸಿದ ಶಿಕ್ಷಕರಿಗೆ ತಲೆ ಬಾಗುತ್ತಾನೆ, ಕೈ ಮುಗಿಯುತ್ತಾನೆ. ಶಿಕ್ಷಕರಿಗೆ ದೇಶದ ಮೂಲೆ ಮೂಲೆಯಲ್ಲಿಯು ಆಸ್ತಿ ಇದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳೆಲ್ಲಾ ಅವರಿಗೆ ವಿದ್ಯಾರ್ಥಿಗಳಾಗಿದ್ದು, ಅವರದೇ ಆಸ್ತಿಯಾಗಿದ್ದಾರೆ. ಶಿಕ್ಷಕರು ಯಾವಾಗಲು ಗುರುಗಳೇ ಆಗಿದ್ದು, ನಿವೃತ್ತಿ ನಂತರವು ಗುರುಗಳೇ ಆಗಿರುತ್ತಾರೆ. ಶಿಕ್ಷಣದಂತಹ ಪುಣ್ಯದ ಕೆಲಸದಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, ಇದು ಮರೆಯಲಾಗದ ಕ್ಷೇತ್ರ. ಶಿಕ್ಷಕರ ವೃತ್ತಿಯಲ್ಲಿ ಗೌರವವಿದೆ, ಶಕ್ತಿ ಇದೆ ಎಂದರು.
ಜಿಲ್ಲೆಯಲ್ಲಿ ತಮ್ಮ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇನೆ. ಮುಂದೆ ಕೂಡ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ಕೊಡುತ್ತೇನೆ. ಶಿಕ್ಷಕರ ಸಲಹೆ ಸೂಚನೆ ಮಾರ್ಗದರ್ಶನ ಸದಾ ಬೇಕು. ದೇಶ, ರಾಜ್ಯ, ಊರು ಸಮೃದ್ಧಿಯಾಗಿ ಬೆಳೆಯಲು ಶಿಕ್ಷಕರು ಕಾರಣ, ನಾವು ಇಂದು ಇಷ್ಟು ಎತ್ತರಕ್ಕೆ ಬೆಳೆಯಲು, ಇಲ್ಲಿ ನಿಂತು ಮಾತನಾಡಲು ಶಿಕ್ಷಕರೆ ಕಾರಣಿಕರ್ತರಾಗಿದ್ದಾರೆ ಎಂದು ಸಚಿವರು ಹೇಳಿದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಮಾತನಾಡಿ, ಸಮಾಜದಲ್ಲಿ ಶಿಕ್ಷಕರಿಗೆ ಬಹು ದೊಡ್ಡ ಜವಾಬ್ದಾರಿ ಇದೆ. ಮಕ್ಕಳು ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವ ರೀತಿ ಅವರನ್ನು ವಿದ್ಯಾಭ್ಯಾಸದ ಸಮಯದಲ್ಲೇ ಶಿಕ್ಷಕರು ಮಾರ್ಪಡಿಸಬೇಕು. ಯಾವುದೇ ಸಮಸ್ಯೆಗಳನ್ನು ಎದುರಿಸುವ ರೀತಿಯಲ್ಲಿ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡುವಂತಾಗಬೇಕು, ಮಕ್ಕಳು ಪಾಲಕರಿಗಿಂತ ಶಿಕ್ಷಕರ ಮಾತನ್ನು ತಪ್ಪದೇ ಪಾಲಿಸುತ್ತಾರೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪ್ರಾರಂಭದಲ್ಲಿಯೇ ಸಂಸ್ಕಾರಯುತ ವಿದ್ಯಾರ್ಥಿಗಳಾದರೆ, ಮುಂದೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದರು.
ಪ.ಪಂ.ಅಧ್ಯಕ್ಷ ನಾಗರಾಜ್ ಭಟ್ಟ ಅಧ್ಯಕ್ಷತೆ ವಹಿಸಿದ್ದರು.
ಪ್ರಶಸ್ತಿ ವಿಜೇತರಿಗೆ ಸನ್ಮಾನ :
ಕಾರವಾರ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಅತ್ತ್ಯುತ್ತಮ ಪ್ರಶಸ್ತಿ ಪಡೆದ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಕರಿಗೆ, ನಿವೃತ್ತ ಶಿಕ್ಷಕರಿಗೆ ಮತ್ತು ಕಳೆದ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ಪಡೆದವರನ್ನು ಸನ್ಮಾನಿಸಲಾಯಿತು.