ಕಾರವಾರ: ಅರಬ್ಬೀ ಸಮುದ್ರದ ಕಾರವಾರ ಲೈಟ್ ಹೌಸ್ ಸಮೀಪ ಹವಾಮಾನ ಮುನ್ಸೂಚನೆ , ಸಮುದ್ರದ ಅಲೆಯ ವೇಗ, ಗಾಳಿಯ ವೇಗ ಅರಿಯಲು ಅಳವಡಿಸಲಾಗಿದ್ದ ಆಧುನಿಕ ತಂತ್ರಜ್ಞಾನದ ವೇವ್ ರೈಡಾರ್ ಬೊಯ್ ಕಳ್ಳತನ ಆಗಿರುವುದು ಇದೀಗ ಬೆಳಕಿಗೆ ಬಂದಿದೆ.
ಒಂದು ಕೋಟಿ ರೂ.ಗಳಿಗೂ ಅಧಿಕ ಮೊತ್ತ ಆಧುನಿಕ ವೇವ್ ರೈಡರ್ ನ್ನು ಕಡಲಜೀವಶಾಸ್ತ್ರ ಸಂಶೋಧನಾ ಸ್ನಾತಕೋತ್ತರ ಕೇಂದ್ರ , ಭಾರತ ಸರ್ಕಾರದ ನೆರವಿನಲ್ಲಿ ಸ್ಥಾಪಿಸಿತ್ತು.
ವೇವ್ ರೈಡರ್ ಸಮುದ್ರದಲ್ಲಿ ತೇಲುವ ವೈಜ್ಞಾನಿಕ ಮಾಹಿತಿ ನೀಡುವ ಯಂತ್ರ. ಇದಕ್ಕೆ ಬಲವಾದ ರೂಫ್ ಕಟ್ಟಿ ಸಮುದ್ರ ಆಳಕ್ಕೆ 800 ಕೆ.ಜಿ.ಭಾರದ ವಸ್ತು ಕಟ್ಟಿ, ರೇಡಾರ್ ಬಾಯ್ ಎಲ್ಲೂ ಹೋಗದಂತೆ ತಾಂತ್ರಿಕತೆ ಬಳಸಲಾಗಿತ್ತು. ಕಾರವಾರದಿಂದ ಸಮುದ್ರದಲ್ಲಿ 8 ನಾಟಿಕಲ್ ಮೈಲು ದೂರದ ಲೈಟ್ ಹೌಸ್ ಸಮೀಪದ ಸಮುದ್ರದಲ್ಲಿ ತೇಲುವ ಸ್ಥಿತಿಯಲ್ಲಿ ವೇವ್ ರೈಡರ್ ಬೊಯ್ ಅಳವಡಿಸಲಾಗಿತ್ತು .
ಅತ್ಯಂತ ಸೂಕ್ಷ್ಮ ಸಂವೇದಿಯಾದ ಈ ಯಂತ್ರವನ್ನು ರೂಫ್ ಕತ್ತರಿಸಿ, ಬೇರೆಡೆಗೆ ಸಾಗಿಸಿರುವ ಶಂಕೆ ಇದೆ. ಐದು ದಿನದ ಹಿಂದೆ ವೇವ್ ರೈಡರ್ ಬಾಯ್ ಕಾರ್ಯವೈಖರಿ ಪರಿಶೀಲನೆಗೆ ಹೋದಾಗ ಅದು ಕಳುವಾಗಿರುವುದು ಬೆಳಕಿಗೆ ಬಂತು. ಸಮುದ್ರದಲ್ಲಿ ಅದನ್ನು ಹುಡುಕಿದರೂ ಪ್ರಯೋಜನ ಆಗಲಿಲ್ಲ. ಜಿಪಿಎಸ್ ಮೂಲಕ ಪರಿಶೀಲನೆ ಮಾಡಿದಾಗ ಮಹಾರಾಷ್ಟ್ರದ ಮಹಾಬಲೇಶ್ವರ ವ್ಯಾಪ್ತಿಯ ಆಳ ಸಮುದ್ರದತನಕ ವೇವ್ ರೈಡರ್ ಕುರಿಹು ಕಾಣಿಸುತ್ತದೆ. ಅದರ ನಂತರ ಏನಾಯಿತು ಎಂಬುದು ತಿಳಿಯುತ್ತಿಲ್ಲ ಎಂದು ಕಡಲಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಿ.ಎಲ್.ರಾಠೋಡ್ ಆತಂಕ ವ್ಯಕ್ತಪಡಿಸಿದರು. ಈ ಯಂತ್ರದ ಮಾಹಿತಿ ಮೀನುಗಾರರಿಗೆ ಹೆಚ್ಚು ಅನುಕೂಲ ಕಲ್ಪಿಸುತ್ತಿತ್ತು. ಮಳೆಗಾಲದಲ್ಲಿ ಹಲವು ಸೂಚನೆ ಮೊದಲೇ ಗೊತ್ತಾಗುತ್ತಿತ್ತು ಎಂದರು . ಯಾರಿಗಾದರೂ ವೇವ್ ರೈಡರ್ ಸಮುದ್ರದಲ್ಲಿ ಕಂಡಲ್ಲಿ ಅದನ್ನು ಮರಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
……