ಕಾರವಾರ : ಉತ್ತರ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳೆದ 30 ವರ್ಷದಲ್ಲಿ 6 ಸಲ ಸೋತಿದೆ. ಆಗ ಯಾವ ಸಚಿವರು ರಾಜೀನಾಮೆ ಕೊಟ್ಟ ಉದಾಹರಣೆ ಇಲ್ಲ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.
ಕಾರವಾರದಲ್ಲಿ ಕೆಡಿಪಿ ಸಭೆಗೆ ಬಂದಿದ್ದ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಈ ಹಿಂದೆಯೂ ನಡೆದ ಲೋಕಸಭಾ ಚುನಾವಣೆಯಲ್ಲಿ ಎರಡು ಲಕ್ಷ, ಮೂರು ಲಕ್ಷ ಅಂತರದಲ್ಲಿ ಕಾಂಗ್ರೆಸ್ ಸೋತಿದೆ. ಈ ಹಿಂದೆ ಇದ್ದ ಯಾವ ಸಚಿವರ ತಲೆದಂಡವೂ ಆಗಿಲ್ಲ. ಹಾಗಾಗಿ ಈ ಬಾರಿ ನನ್ನ ತಲೆ ದಂಡ ಆಗುವ ಪ್ರಶ್ನೇಯೇ ಇಲ್ಲ ಎಂದರು.
ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಗೆ ಒಂದು ಸಾವಿರ ಕೋಟಿ ರೂ.ಬಂದಿದೆ. ಆದರೂ ಜನ ಕಾಂಗ್ರೆಸ್ ಕೈ ಹಿಡಿಯಲಿಲ್ಲ ಎಂಬ ಪ್ರಶ್ನೆಗೆ ಗ್ಯಾರಂಟಿಗಳನ್ನು ನಮಗೆ ಮತ ಹಾಕಿ ಎಂದು ನಾವು ಕೊಟ್ಟಿರಲಿಲ್ಲ. ಬಡವರಿಗೆ ನೆರವು ಸಿಗಲಿ ಎಂದು ನಾವು ಗ್ಯಾರಂಟಿ ಕೊಟ್ಟಿದ್ದೇವೆ. ಸಾಮಾಜಿಕ ನ್ಯಾಯ ಸಿಗಲಿ ಎಂದು ಕೊಟ್ಟಿದ್ದೇವೆ. ಅನುಕೂಲ ಇದ್ದವರು ಗ್ಯಾರಂಟಿಗಳನ್ನು ಸ್ವಯಂ ಪ್ರೇರಣೆಯಿಂದ ಬಿಡಬೇಕು ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೂ ಚುನಾವಣೆ ಹಿನ್ನಡೆಗೂ ಸಂಬಂಧ ಇಲ್ಲ. ನಮ್ಮ ಯೋಜನೆಯಿಂದ ಕೋಟ್ಯಾಂತರ ಬಡವರಿಗೆ ಅನಕೂಲ ಆಗಿರುವ ಸಂತಸ ಇದೆ. ಹಾಗೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿರುವ ಅಸಮಾಧಾನವೂ ಇದೆ. ಇಷ್ಟು ಸಹಾಯ ಮಾಡಿದ್ರು ಜನ ನಮಗೆ ಮತ ಹಾಕದಿರುವುದರ ಬಗ್ಗೆ ನೋವು ಇದೆ ಎಂದು ಸಚಿವ ವೈದ್ಯ ಹೇಳಿದರು. ಆದರೆ ಏನ್ ಮಾಡೊಕೆ ಆಗುತ್ತೆ , ಇನ್ನಷ್ಟು ಕೆಲಸ ಮಾಡಿ ಜನರ ಮನ ,ಮತ ಸೆಳೆಯುವ ಕೆಲಸ ಮಾಡುತ್ತೆವೆ ಎಂದರು.
ಜನರ ಮನದಲ್ಲಿ ಏನಿದೆ ಅಂತ ಹೇಳಲು ಬರಲ್ಲ :
ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಕೇಳಿದ ಪ್ರಶ್ನೆಗೆ , ಜನರ ಮನದಲ್ಲಿ ಏನಿದೆ ಅಂತ ಹೇಳಲು ಬರಲ್ಲ. ಇದು ಸಂಘಟಿತ ಪ್ರಯತ್ನ. ಆಯಾ ಕ್ಷೇತ್ರದಲ್ಲಿ ಶಾಸಕರು ಕೆಲಸ ಮಾಡ್ತಾರೆ. 20 ಸಾವಿರ ಮತದಾರರಿಗೆ ಒಂದು ಕ್ಷೇತ್ರ ಇರುತ್ತದೆ. ಈ ಸಲ ಕ್ಷೇತ್ರಗಳ ಸಂಖ್ಯೆ ಸಹ ಹೆಚ್ಚಲಿದೆ. ಜನರ ಪರ ಇದ್ದವರು ಗೆಲ್ಲುತ್ತಾರೆ. ನಾನು ಎಂದೂ ವಿಶ್ವಾಸ ಕಳೆದುಕೊಂಡಿಲ್ಲ. ಮುಂದೆ ಸಹ ಜನರ ವಿಶ್ವಾಸ ದಿಂದ ಗೆಲ್ಲುತ್ತೇನೆ ಎಂದರು.
ದೇಶಪಾಂಡೆ ಸಚಿವರಾಗಲಿ:
ಆರ್ .ವಿ. ದೇಶಪಾಂಡೆ ಸಚಿವರಾಗ ಬೇಕೆಂದು ನಾನು ಆಶಿಸುತ್ತೇನೆ. ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಕ್ಕರೆ ಖುಷಿ. ಅವರು ಹಿರಿಯರು. ಅವರ ಮಾತು ಎಂದೂ ಕಡೆಗಣಿಸಿಲ್ಲ. ಅವರ ಮಾತನ್ನು ಜಿಲ್ಲಾಧಿಕಾರಿ ಕೇಳುತ್ತಿಲ್ಲ ಎಂಬ ದೂರು ನನಗೆ ಬಂದಿಲ್ಲ. ಹಾಗೆ ಏನಾದರೂ ಸಮಸ್ಯೆ ಇದ್ದರೆ ನಾನೇ ಖುದ್ದು ಪರಿಶೀಲಿಸುವೆ ಎಂದರು.
ದೇಶಪಾಂಡೆ ನಮ್ಮ ಪಕ್ಷದ ಈ ಜಿಲ್ಲೆಯ ಹಿರಿಯ ನಾಯಕರು.ದೇಶಪಾಂಡೆ ಸಚಿವ ಸಂಪುಟಕ್ಕೆ ಸೇರುವುದಕ್ಕೆ ಅರ್ಹ ವ್ಯಕ್ತಿ.ಉತ್ತರ ಕನ್ನಡ ಜಿಲ್ಲಾ ಉಸ್ತುವರಿ ಸಚಿವ ಸ್ಥಾನ ಅವರಿಗೆ ಕೊಡಬೇಕೆ ಅಥವಾ ನಾನೇ ಮುಂದುವರೆಯಬೇಕೊ? ಎಂಬುವುದನ್ನು ಪಕ್ಷದ ಹೈಕಮಾಂಡ್ ತಿರ್ಮಾನಿಸುತ್ತದೆ ಎಂದರು.
ದೇಶಪಾಂಡೆ ಮಂತ್ರಿ ಆಗಲಿ ಎಂದು ಮುಕ್ತ ಮನಸ್ಸಿನಿಂದ ಆಶಿಸುತ್ತೇನೆ ಎಂದರು.
……..