ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗಳಲ್ಲಿ ಸ್ಟ್ಯಾಂಡರ್ಡ್ ಇಲ್ಲ: ಸಚಿವ ವೈದ್ಯ ತೀವ್ರ ಅಸಮಾಧಾನ

ಕಾರವಾರ : ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಯಾವುದೇ ಸ್ಟ್ಯಾಂಡರ್ಡ್ ಕಂಡುಬರುತ್ತಿಲ್ಲ, ಇದರಿಂದಾಗಿ ಅಪಘಾತಗಳು ಸಂಭವಿಸಿ ಸಾರ್ವಜನಿಕರು ಸಾವಿಗೀಡಾಗುತ್ತಿದ್ದಾರೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ತೀವ್ರ ಕಳವಳ ವ್ಯಕ್ತಪಡಿಸಿದರು.

ಜಿ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿಯಲ್ಲಿ ದಾರಿ ದೀಪ ಅಳವಡಿಸುವ ಕುರಿತಂತೆ ಹಲವು ಬಾರಿ ಸೂಚನೆಗಳನ್ನು ನೀಡಿದ್ದರು ಸಹ ಯಾವುದೇ ಪ್ರಗತಿ ಕಂಡು ಬರುವುದಿಲ್ಲ. ಹಲವು ಮಂದಿ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ. ಈ ಎಲ್ಲಾ ಅನಾಹುತಗಳಿಗೆ ನೀವೇ ಜವಾಬ್ದಾರರು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳಲ್ಲಿ ಸರಿಯಾದ ಸ್ಟ್ಯಾಂಡರ್ಡ್ ನ್ನು ಪಾಲನೆ ಮಾಡುತ್ತಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸಚಿವರು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾಜಿಕ ಭದ್ರತಾ ಯೋಜನೆಗಳ ನೆರವು :
ಜಿಲ್ಲೆಯಲ್ಲಿ ಮಂಗನ ಖಾಯಿಲೆಯ 57 ಪ್ರಕರಣಗಳು ವರದಿಯಾಗಿದ್ದು ಒಟ್ಟು 5 ಸಾವು ಸಂಭವಿಸಿವೆ. ಮಂಗನ ಕಾಯಿಲೆಯಿಂದ ಮೃತಪಟ್ಟ ಕುಟುಂಬಗಳಿಗೆ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ನೆರವು ಸೇರಿದಂತೆ ಎಲ್ಲಾ ರೀತಿಯ ನೆರವು ದೊರಕಿಸುವಂತೆ ಆರೋಗ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಕ್ರಿಮ್ಸ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ನೇಮಕಾತಿ ಕುರಿತಂತೆ ವಿಳಂಬ ಧೋರಣೆ ಮಾಡಬೇಡಿ. ತಕ್ಷಣದಲ್ಲಿ ತಜ್ಞ ವೈದ್ಯರ ಸೇವೆ ರೋಗಿಗಳಿಗೆ ದೊರೆಯುವಂತೆ ನೋಡಿಕೊಳ್ಳಿ ಎಂದರು.

ವಿಳಂಬಬೇಡ :
ಮೀನುಗಾರಿಕೆ ಇಲಾಖೆ ವತಿಯಿಂದ ಮೀನುಗಾರರಿಗೆ ನೀಡುವ ವಿವಿಧ ಪರಿಹಾರ ಯೋಜನೆಗಳ ಮೊತ್ತವನ್ನು ಹೆಚ್ಜಿಸಲಾಗಿದ್ದು, ಪರಿಷ್ಕ್ರತ ಮೊತ್ತವನ್ನು ಫಲಾನುಭವಿಗಳಿಗೆ ನೀಡುವ ಬಗ್ಗೆ ಅಧಿಕಾರಿಗಳು ಗಮನ ಹರಿಸಿ, ಯಾವುದೇ ಅರ್ಜಿಗಳ ವಿಳಂಬ ವಿಲೇವಾರಿಗೆ ಆಸ್ಪದ ನೀಡಬೇಡಿ ಎಂದರು.

ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿ :
ಮಂಜುಗುಣಿ- ಗಂಗಾವಳಿ ಸೇತುವೆ ನಿರ್ಮಾಣ ಕುರಿತಂತೆ ವಿಳಂಬ ಧೋರಣೆ ಅನುಸರಿಸುತ್ತಿರುವ ಕೆ.ಆರ್.ಡಿ.ಸಿ.ಎಲ್. ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವರು , ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿ ಎಂದು ಸೂಚನೆ ನೀಡಿದರು.

ಜಾನುವಾರುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಮೇವು ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಸಭೆಯಲ್ಲಿ ಎಂ.ಸಿ.ಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಜಿ.ಪಂ. ಸಿಇಒ ಈಶ್ವರ ಕಾಂದೂ, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಗಳ ಅನುಷ್ಠಾನಧಿಕಾರಿಗಳು ಉಪಸ್ಥಿತರಿದ್ದರು.
…………

Latest Indian news

Popular Stories