ಸಂಕಷ್ಟದಲ್ಲಿ ಸಿಲುಕಿದ ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ : ಠೇವಣಿ ಪಡೆಯಲು ಗ್ರಾಹಕರ ಮುತ್ತಿಗೆ

ಕಾರವಾರ : ನೂರು ವರ್ಷಕ್ಕೂ ಅಧಿಕ ಕಾಲ ಇತಿಹಾಸವಿರುವ ಪ್ರತಿಷ್ಠಿತ ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ಸಂಕಷ್ಟದಲ್ಲಿ ಸಿಲುಕಿದೆ . ನೂರಾರು ಕೋಟಿ ವ್ಯವಹಾರ ನಡೆಯುತ್ತಿದ್ದ ಬ್ಯಾಂಕ್ ಇದೀಗ ಮುಳುಗಡೆಯ ಹಾದಿಯನ್ನ ಹಿಡಿದಿದೆ. ಬ್ಯಾಂಕ್ ನಲ್ಲಿದ್ದ ಮ್ಯಾನೇಜರ್ ಒರ್ವ ಮಾಡಿದ ಎಡವಟ್ಟು ಇದೀಗ ಬ್ಯಾಂಕ್ ದಿವಾಳಿಯತ್ತ ಹೋಗುವಂತೆ ಮಾಡಿದರೆ , ಇನ್ನೊಂದೆಡೆ ಮ್ಯಾನೇಜರ್ ಅಪಘಾತದಲ್ಲಿ ಮೃತಪಟ್ಟಿರುವುದು ಆಡಳಿತ ಮಂಡಳಿಗೆ ದೊಡ್ಡ ತಲೆ ನೋವಾಗಿದೆ.

ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಹಗರಣ ಹೊರಗೆ ಬರುತ್ತಿದ್ದಂತೆ
ಬ್ಯಾಂಕ್ ನಲ್ಲಿ ಠೇವಣಿ ಇಟ್ಟ ಜನರು ಜಮಾವಣೆ ಆಗಿ ಗಲಾಟೆ ಮಾಡಲು ಪ್ರಾರಂಭಿಸಿದರು. ಇನ್ನೊಂದೆಡೆ ಬ್ಯಾಂಕ್ ಸಿಬ್ಬಂದಿಗಳ ಬಳಿ ಡಿಪಾಸಿಟ್ ಬಾಂಡ್ ಹಿಡಿದು ಹಣ ವಾಪಾಸ್ ಪಡೆಯಲು ಜನರು ಮುಗಿಬಿದ್ದರು. ಮತ್ತೊಂದೆಡೆ ಆಡಳಿತ ಮಂಡಳಿ ಆತಂಕದಲ್ಲಿ ಮುಳುಗಿತು.

ಅಷ್ಟಕ್ಕೂ ಬ್ಯಾಂಕ್ ಮುಳುಗಡೆಗೆ ಕಾರಣವಾಗಿದ್ದು ಅದೇ ಬ್ಯಾಂಕಿನ ಮ್ಯಾನೇಜರ್ ಒಬ್ಬರಿಂದ‌ . ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದ ಗುರುದಾಸ್ ಬಾಂದೇಕರ್ ಎಂಬಾತ ಕಳೆದ ಮೂರ್ನಾಲ್ಕು ವರ್ಷದಿಂದ ಗ್ರಾಹಕರು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದ ಸುಮಾರು 54 ಕೋಟಿ ಹಣವನ್ನ ತಮ್ಮ ಸಂಬಂಧಿ , ಹಾಗೂ ಪರಿಚಯಸ್ಥರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಪ್ರತಿ ಬಾರಿಯೂ ಆಡಿಟ್ ಮಾಡುವಾಗ, ವಂಚನೆ ಮಾಡಿ ಆಡಿಟ್ ಮಾಡಿಸಿದ್ದು , ಇದು ಬ್ಯಾಂಕಿನ ಆಡಳಿತ ಮಂಡಳಿಗೂ ತಿಳಿದಿರಲಿಲ್ಲವಂತೆ. ಕಳೆದ ಒಂದು ವರ್ಷದ ಹಿಂದೆ ಮ್ಯಾನೇಜರ್ ಗುರುದಾಸ್ ಅಪಘಾತದಲ್ಲಿ ಮೃತಪಟ್ಟಿದ್ದು ಸದ್ಯ ಆಡಿಟ್ ಮಾಡಲು ಮುಂದಾದ ವೇಳೆ ಸುಮಾರು 54 ಕೋಟಿ ಹಣ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ.

ಇನ್ನು ಬ್ಯಾಂಕ್ ನಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಗ್ರಾಹಕರಿದ್ದು ಕಾರವಾರದಲ್ಲಿ ಎರಡು ಶಾಖೆಗಳಲ್ಲಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿತ್ತು. ಸುಮಾರು 80 ಕೋಟಿಗೂ ಅಧಿಕ ಹಣ ಠೇವಣಿ ಇದ್ದು, 9 ಕೋಟಿ ಲೋನ್ ಹಣವನ್ನ ಬ್ಯಾಂಕಿನಿಂದ ನೀಡಿದ್ದರು ಎನ್ನಲಾಗಿದೆ. ಸದ್ಯ 54 ಕೋಟಿ ಹಣ ವಂಚನೆ ಮಾಡಿದ್ದು ಯಾರ ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದರ ಬಗ್ಗೆ ತನಿಖೆ ನಡೆಸಲು ಆಡಳಿತ ಮಂಡಳಿ ಕಾರವಾರ ನಗರ ಠಾಣೆಯಲ್ಲಿ ದೂರನ್ನ ಸಹ ದಾಖಲಿಸಿದ್ದಾರೆ. ಇನ್ನು ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದ ಹಣ ವಂಚನೆಯಾಗಿರುವ ವಿಷಯ ತಿಳಿದು ಗ್ರಾಹಕರು ಬ್ಯಾಂಕಿಗೆ ಮುಗಿಬಿದ್ದಿದ್ದು ತಾವು ಠೇವಣಿ ಇಟ್ಟಿದ್ದ ಹಣವನ್ನ ವಾಪಾಸ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಇನ್ನು ಆಡಳಿತ ಮಂಡಳಿ ವಿರುದ್ದವೂ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಸದ್ಯ ಬ್ಯಾಂಕಿನ ಆಡಳಿತ ಮಂಡಳಿಯ ಪ್ರಕಾರ ಐದು ಲಕ್ಷದ ವರೆಗೆ ಡಿಪಾಸಿಟ್ ಇರುವವರಿಗೆ ಇನ್ಸುರೆನ್ಸ್ ಇರುವುದರಿಂದ ಯಾವುದೇ ಸಮಸ್ಯೆ ಬರುವುದಿಲ್ಲ. ಜನರು ಹಣ ವಾಪಾಸ್ ಮರಳಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ ಗ್ರಾಹಕರು ಮಾತ್ರ ತಮ್ಮ ಹಣ ಹಿಂದೆ ವಾಪಾಸ್ ಸಿಗುತ್ತದೆಯೋ ಇಲ್ಲವೋ ಅನ್ನುವ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇನ್ನು ಕೇವಲ ಒರ್ವ ವ್ಯಕ್ತಿಯಿಂದ ಇಂತಹ ವಂಚನೆ ಅಸಾಧ್ಯ. ಇದರ ಹಿಂದೆ ಹಲವರು ಇದ್ದಾರೆನ್ನುವ ಆರೋಪ ಸಹ ಇದ್ದು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ಮಾಡುವ ಮೂಲಕ ಹಣ ಎಲ್ಲಿ ವಂಚನೆಯಾಗಿದೆ ಎನ್ನುವ ಮಾಹಿತಿ ಹೊರ ಹಾಕುವ ಮೂಲಕ ಗ್ರಾಹಕರ ಹಿತ ಕಾಯಬೇಕೆಂದು ಬ್ಯಾಂಕ್ ಠೇವಣಿದಾರರು ಆಗ್ರಹಿಸಿದ್ದಾರೆ‌.
….

Latest Indian news

Popular Stories