ಉ.ಕ | ಮಾದರಿ ನೀತಿ ಸಂಹಿತೆ ಉಲ್ಲಂಘಿಸಬೇಡಿ : ಚುನಾವಣಾ ವೀಕ್ಷಕ ರಾಜೀವ್ ರತನ್ ಸೂಚನೆ

ಕಾರವಾರ : ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘಿಸದಂತೆ ಚುನಾವಣಾ ಪ್ರಚಾರ ಕೈಗೊಳ್ಳುವಂತೆ ಜಿಲ್ಲೆಗೆ ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನೇಮಕಗೊಂಡಿರುವ ರಾಜೀವ್ ರತನ್ ತಿಳಿಸಿದರು.


ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ, ರಾಜಕೀಯ ಪಕ್ಷಗಳು ಮತ್ತು ಅಂತಿಮ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಚುನಾವಣಾ ಆಯೋಗ ರೂಪಿಸಿರುವ ಮಾದರಿ ನೀತಿ ಸಂಹಿತೆ ನಿಯಮಗಳನ್ನು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಪಾಲಿಸುವಂತೆ ತಿಳಿಸಿದ ಅವರು, ಚುನಾವಣಾ ಆಯೋಗವು ಪ್ರತಿಯೊಬ್ಬ ಅಭ್ಯರ್ಥಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಸಮಾನ ಅವಕಾಶಗಳನ್ನು ನೀಡಿದ್ದು, ಈ ಕುರಿತಂತೆ ಯಾವುದೇ ದೂರುಗಳಿದ್ದಲ್ಲಿ ನೇರವಾಗಿ ತಮಗೆ ಸಲ್ಲಿಸುವಂತೆ ತಿಳಿಸಿದರು.
ಯಾವುದೇ ಚುನಾವಣಾ ಪ್ರಚಾರ ಸಭೆಗಳು, ಕಾರ್ಯಕ್ರಮಗಳು, ರ‍್ಯಾಲಿಗಳನ್ನು ನಡೆಸುವ ಪೂರ್ವದಲ್ಲಿ ಸೂಕ್ತ ಅನುಮತಿಯನ್ನು ಪಡೆದು ಕಾರ್ಯಕ್ರಮ ಆಯೋಜಿಸಿ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಕೋರುವ ಎಲ್ಲಾ ಅನುಮತಿಗಳನ್ನು ನಿಗಧಿತ ಅವಧಿಯಲ್ಲಿ ನೀಡಲಾಗುವುದು ಎಂದು ರಾಜೀವ್ ರತನ್ ಹೇಳಿದರು.
ಧಾರ್ಮಿಕ ಸ್ಥಳಗಳು, ಶಾಲಾ ಆವರಣಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸಬೇಡಿ, ಮಕ್ಕಳನ್ನು ಪ್ರಚಾರ ಕಾರ್ಯದಲ್ಲಿ ಬಳಸಿಕೊಳ್ಳಬೇಡಿ, ಚುನಾವಣಾ ಆಯೋಗವು ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ನು ತಮಗೆ ತಿಳಿಸಲಾಗುವುದು ಆ ನಿರ್ದೇಶನಗಳನ್ನು ತಪ್ಪದೇ ಪಾಲಿಸುವಂತೆ ತಿಳಿಸಿದರು.
ಚುನಾವಣಾ ವೆಚ್ಚ ವೀಕ್ಷಕ ಪ್ರಶಾಂತ್ ಸಿಂಗ್ ಮಾತನಾಡಿ, ಚುನಾವಣಾ ಆಯೋಗ ಸೂಚಿಸಿರುವ ವೆಚ್ಚದ ಮಿತಿಯಲ್ಲಿಯೇ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುವಂತೆ ಹಾಗೂ ಕಾಲ ಕಾಲಕ್ಕೆ ವೆಚ್ಚ ವೀಕ್ಷಕರ ಕಚೇರಿಯನ್ನು ಸಂಪರ್ಕಿಸಿ ತಮ್ಮ ಲೆಕ್ಕಗಳ ಬಗ್ಗೆ ಪರಿಶೀಲನೆ ಮಾಡಿಕೊಳ್ಳುವಂತೆ ಚುನಾವಣಾ ವೀಕ್ಷಕ ರಾಜೀವ್ ತಿಳಿಸಿದರು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾತನಾಡಿ, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಯಾವುದೇ ದೂರುಗಳನ್ನು ನೇರವಾಗಿ ಅಥವಾ ಸೀ ವಿಜಿಲ್ ಮೂಲಕ ಹಾಗೂ ಉಚಿತ ಸಹಾಯವಾಣಿ ಸಂಖ್ಯೆ 1950 ಗೆ ಕರೆ ಮಾಡಿ ತಿಳಿಸಬಹುದಾಗಿದ್ದು, ದೂರುಗಳಿಗೆ ತಕ್ಷಣದಲ್ಲಿ ಸ್ಪಂದಿಸುವುದಾಗಿ ಹಾಗೂ ಎಲ್ಲಾ ರೀತಿಯ ಅನುಮತಿಗಳನ್ನು ನಿಗಧಿತ ಅವಧಿಯೊಳಗೆ ನೀಡಲಾಗುವುದು ಎಂದರು.
……

Latest Indian news

Popular Stories