ಉ.ಕ | ಲಂಚ ಪಡೆದ ಇಬ್ಬರು ತೆರಿಗೆ ವಸೂಲಿ ಸಹಾಯಕರಿಗೆ ಒಂದು ವರ್ಷ ಆರು ತಿಂಗಳು ಕಾರಾಗೃಹ ಶಿಕ್ಷೆ

ಕಾರವಾರ : ಮನೆಯ ಉತಾರು ಪತ್ರ ವಿತರಿಸಲು ಲಂಚ ಪಡೆದಿದ್ದ ತೆರಿಗೆ ವಸೂಲಿ ಸಹಾಯಕರಾದ ಇಬ್ಬರೂ ನೌಕರರಿಗೂ ಒಂದುವೊರೆ ವರ್ಷ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ಎಸ್.ವಿಜಯ ಕುಮಾರ್ ತೀರ್ಪು ನೀಡಿದ್ದಾರೆ.

ಭ್ರಷ್ಠಾಚಾರ ಪ್ರತಿಬಂಧಕ ಕಾಯ್ದೆ -1988 ರ ಕಲಂ 7, ರಡಿ 6 ತಿಂಗಳ ಸಾಧಾರಣ ಕಾರಾಗೃಹವಾಸದ ಶಿಕ್ಷೆ ಹಾಗೂ ರೂ. 1000 ದಂಡ ಮತ್ತು ಕಲಂ 13(2) ರಡಿಯಲ್ಲಿ 1 ವರ್ಷ ಸಾಧಾರಣ ಕಾರಾಗೃಹ ವಾಸದ ಶಿಕ್ಷೆ ಹಾಗೂ ರೂ 1000 ದಂಡ ವಿಧಿಸಿ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 1 ತಿಂಗಳು ಸಾಧಾರಣ ಕಾರಾವಾಸ ಶಿಕ್ಷೆ ವಿಧಿಸಿ, ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ಎಸ್.ವಿಜಯ ಕುಮಾರ್ ತೀರ್ಪು ನೀಡಿದ್ದಾರೆ.

ಪ್ರಕರಣ ಹಿನ್ನಲೆ:
ಯಲ್ಲಾಪುರ ತಾಲೂಕಿನ ಉದ್ಯಮ ನಗರ ನಿವಾಸಿ ಮಂಜುನಾಥ ವಿಶ್ವೇಶ್ವರ ಹೆಗಡೆ ತನ್ನ ತಾಯಿ ಹೆಸರಿನಲ್ಲಿದ್ದ ಮನೆಗೆ ಹೊಸದಾಗಿ ವಿದ್ಯುತ್ ಸಂಪರ್ಕ ಅಳವಡಿಸಿಕೊಳ್ಳುವುದಕ್ಕಾಗಿ ವಿದ್ಯುತ್ ಸರಬರಾಜು ಇಲಾಖೆಗೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಮನೆಯ ಉತಾರು ಸಲ್ಲಿಸಬೇಕಾಗಿರುವುದರಿಂದ ಯಲ್ಲಾಪುರ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಸಕಾಲದಡಿ ಮನೆಯ ಉತಾರಿಗಾಗಿ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಗೆ ಸಂಬಂಧ 4-5 ದಿನ ಬಿಟ್ಟು ಪಟ್ಟಣ ಪಂಚಾಯತ ತೆರಿಗೆ ವಸೂಲಿ ಸಹಾಯಕನಿಗೆ ವಿಚಾರಿಸಿದಾಗ, ಪ್ರಕಾಶ್ ನಾಯ್ಕ ಹಣದ ಬೇಡಿಕೆ‌ ಇಟ್ಟಿದ್ದ.

ಯಲ್ಲಾಪುರ ಪಟ್ಟಣ ಪಂಚಾಯತ್ ಕಾರ್ಯಾಲಯದ ತೆರಿಗೆ ವಸೂಲಿ ಸಹಾಯಕ ಪ್ರಕಾಶ ಕೃಷ್ಣ ನಾಯ್ಕ , ಸೈಟ್ ನೋಡಿ ಉತಾರು ನೀಡಬೇಕಾಗುತ್ತದೆ ಹಾಗೂ ಚೀಫ್ ಆಫೀಸರ್ ಅವರ ಸಹಿ ಮಾಡಿಸಿ ನಾಳೆ ಕೊಡುವುದಾಗಿ ತಿಳಿಸಿದ್ದು, ಮಾರನೇ ದಿನ ತೆರಿಗೆ ವಸೂಲಿ ಸಹಾಯಕನಿಗೆ ಭೇಟಿ ಮಾಡಿದಾಗ ಉತಾರು ಬೇಕಾದರೆ ಅಧಿಕಾರಿಗೆ ಹಣ
ಕೊಡಬೇಕಾಗುತ್ತದೆ ಅದಕ್ಕೆ ರೂ. 6000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ. ನಂತರದಲ್ಲಿ 4000 ಲಂಚ ಪಡೆಯಲು ಒಪ್ಪಿಕೊಂಡು, ಹಣವನ್ನು ಮತ್ತೊಬ್ಬ ತೆರಿಗೆ ವಸೂಲಿ ಸಹಾಯಕ ಪ್ರತಾಪ ಸಿಂಗ್ ಭವಾನಿಸಿಂಗ್ ರಜಪೂತ್ ಇವರಿಗೆ ನೀಡಲು ತಿಳಿಸಿದ್ದು, ಅದರಂತೆ ತೆರಿಗೆ ವಸೂಲಿ ಸಹಾಯಕ ಪ್ರತಾಪ ಸಿಂಗ್ ಭವಾನಿಸಿಂಗ್ ರಜಪೂತ್ ರೂ 4000 ಲಂಚ ಪಡೆಯುವಾಗ ಟ್ರಾಪ್ ಕಾರ್ಯಚರಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಆಪಾದಿತ ನೌಕರರ ವಿರುದ್ದ ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ದೋಷಾರೋಪಣ ಪತ್ರ ಸಲ್ಲಿಕೆಯಾಗಿ, ವಿಚಾರಣೆ ನಡೆಸಲಾಗಿತ್ತು.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ಲಕ್ಷ್ಮಿಕಾಂತ. ಎಮ್. ಪ್ರಭು ವಾದ ಮಂಡಿಸಿದ್ದರು.

Latest Indian news

Popular Stories