ಉತ್ತರ ಕನ್ನಡ : 16.41 ಲಕ್ಷ ಮತದಾರರ ಅಂತಿಮ ಪಟ್ಟಿ ಸಿದ್ಧ : ಜ. 22 ರಿಂದ ಏ.9ರ ಅವಧಿಯಲ್ಲಿ 13,980 ಯುವ ಮತದಾರರ ಸೇರ್ಪಡೆ

ಕಾರವಾರ: ಲೋಕಸಭೆ ಚುನಾವಣೆಗೆ 14 ದಿನ ಉಳಿದಿದ್ದು, ಉತ್ತರ ಕನ್ನಡ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಸಿದ್ಧಗೊಂಡಿದೆ. ಕ್ಷೇತ್ರದಲ್ಲಿ 16.41 ಲಕ್ಷ ಮತದಾರರು ಪ್ರಸಕ್ತ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ 12,21,413 ಮತದಾರರು ಹಾಗೂ ಕಿತ್ತೂರು ,ಖಾನಾಪುರ ಕ್ಷೇತ್ರದ ಮತದಾರರು ಸೇರಿ ಒಟ್ಟು 16,41,156 ಮತದಾರರು ಮೇ 7 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಹೊಂದಿದ್ದಾರೆ. ಉತ್ತರ ಕನ್ನಡ ಲೋಕಸಭಾ ವ್ಯಾಪ್ತಿಯ ಖಾನಾಪುರ ಕ್ಷೇತ್ರದಿಂದ 2,19,442 ಹಾಗೂ ಕಿತ್ತೂರು ಕ್ಷೇತ್ರದಿಂದ 2,00,301 ಮತದಾರರು ಇದ್ದಾರೆ.

ಕಳೆದ ಜನವರಿ 22 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದ್ದ ವೇಳೆ ಜಿಲ್ಲೆಯಲ್ಲಿ ಒಟ್ಟು 12,07,433 ಮತದಾರರು ಪಟ್ಟಿಯಲ್ಲಿದ್ದರು. ಆ ಬಳಿಕವೂ ಹೊಸದಾಗಿ ಮತದಾರರ ಸೇರ್ಪಡೆ, ಹೆಸರು ರದ್ದುಪಡಿಸುವ ಪ್ರಕ್ರಿಯೆ ಮುಂದುವರೆದಿತ್ತು. ಏ.9ರ ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿತ್ತು. ಜನವರಿ 22 ರಿಂದ ಏ.9ರ ಅವಧಿಯಲ್ಲಿ 13,980 ಮಂದಿ ಮತದಾರರ ಹೆಸರು ಪಟ್ಟಿಗೆ ಸೇರ್ಪಡೆಯಾಗಿದೆ. ಈ ಪೈಕಿ 6,006 ಯುವಕರು ಮತ್ತು 7,954 ಯುವತಿಯರು ಹೊಸ ಮತದಾರರು .

ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಬೇಕೆನ್ನುವ ಬಯಕೆಯೊಂದಿಗೆ ಈ ಬಾರಿ 18 ವರ್ಷ ದಾಟಿದ ಕೂಡಲೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡಗೆ ಯುವ ಮತದಾರರು ವಿಶೇಷ ಉತ್ಸಾಹ ತೋರಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಯುವ ಮತದಾರರು (20 ವರ್ಷ ದಾಟಿದರೂ) ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅಷ್ಟಾಗಿ ಆಸಕ್ತಿ ತೋರಿಸುವುದು ವಿರಳ ವಾಗಿತ್ತು. ಏಪ್ರಿಲ್ ಆರಂಭದಲ್ಲಿ 18 ವರ್ಷ ತುಂಬಿದವರೂ ಕೊನೆಯ ದಿನವಾಗಿದ್ದ ಏ.9 ರಂದು ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದರು ಎಂದು ಚುನಾವಣಾ ಶಾಖೆ ಹೇಳಿತ್ತು.

ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಈ ಮೂರು ತಿಂಗಳಲ್ಲಿ ಹೆಸರು ರದ್ದುಗೊಂಡಿದ್ದು ಕಡಿಮೆ. ಆದರೆ, ಪಟ್ಟಿಗೆ ಸೇರಿದ ಯುವ ಮತದಾರರ ಸಂಖ್ಯೆಯೇ ಅಧಿಕ. ಚುನಾವಣೆ ಮುಗಿಯುವವರೆಗೆ ಹೊಸದಾಗಿ ಹೆಸರು ಸೇರ್ಪಡೆಗೆ ಅವಕಾಶ ಇರದು’ ಎಂದು ಚುನಾವಣಾ ಶಾಖೆಯ ಅಧಿಕಾರಿ ಸ್ಪಷ್ಟಪಡಿಸಿದರು.

4565 ಸೈನಿಕ ಮತದಾರರು :

ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ 4,565 ಸೈನಿಕ ಮತದಾರರಿದ್ದು ಅವರನ್ನು ಸೇವಾ ಮತದಾರರು ಎಂದು ಪರಿಗಣಿಸಲಾಗುತ್ತದೆ. ಈ ಪೈಕಿ ಖಾನಾಪುರ, ಕಿತ್ತೂರು ಭಾಗದವರೇ ಹೆಚ್ಚಿದ್ದಾರೆ. 4,433 ಪುರುಷರು ಮತ್ತು 132 ಮಹಿಳಾ ಮತದಾರರು ಇದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರೆಲ್ಲ ವಿದ್ಯುನ್ಮಾನವಾಗಿ ರವಾನೆಯಾಗುವ ಮತಯಂತ್ರ ವ್ಯವಸ್ಥೆ ಮೂಲಕ ಮತದಾನ ಮಾಡಲಿದ್ದಾರೆ.
……..

Latest Indian news

Popular Stories