ವಿಜಯಪುರ: ತೀವ್ರ ಕುತೂಹಲ ಕೆರಳಿಸಿದ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ಮತದಾರ ಅನೇಕ ಹಾಲಿ ಶಾಸಕರಿಗೆ ಸೋಲಿನ ರುಚಿ ತೋರಿದರೆ, ಅನೇಕ ಹೊಸ ಮುಖಗಳಿಗೆ ಗೆಲುವಿನ ಸಿಹಿ ಉಣಬಡಿಸಿದ್ದಾನೆ.
ಶಾಸಕರಾಗಿದ್ದ ಬಿಜೆಪಿಯ ಎ.ಎಸ್. ಪಾಟೀಲ ನಡಹಳ್ಳಿ, ರಮೇಶ ಭೂಸನೂರ, ಜೆಡಿಎಸ್ ಪಕ್ಷದ ಡಾ.ದೇವಾನಂದ ಚವ್ಹಾಣ ಸೋಲು ಅನುಭವಿಸುವಂತಾಗಿದೆ.
ಹಾಲಿ ಶಾಸಕರಾಗಿದ್ದ ಬಸನಗೌಡ ಪಾಟೀಲ ಯತ್ನಾಳ, ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಶಾಸಕರಾಗಿದ್ದ ವಿಠ್ಠಲ ಕಟಕದೊಂಡ, ಸಿ.ಎಸ್. ನಾಡಗೌಡರು ಈಗ ಪುನ: ಆಯ್ಕೆಯಾಗಿ ಶಾಸನಸಭೆ ಪ್ರವೇಶಿಸುವಂತಾಗಿದೆ.
ಏತನ್ಮಧ್ಯೆ ಹೊಸಮುಖಗಳಿಗೂ ಸಹ ವಿಜಯಪುರ ಮತದಾರ ಮಣೆ ಹಾಕಿದ್ದು ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಅಶೋಕ ಮನಗೂಳಿ, ದೇವರಹಿಪ್ಪರಗಿಯಿಂದ ರಾಜುಗೌಡ ಪಾಟೀಲ ಕುದರಿ ಸಾಲೋಡಗಿ ಪ್ರಥಮ ಬಾರಿಗೆ ಶಾಸನ ಸಭೆ ಪ್ರವೇಶಿಸುತ್ತಿದ್ದಾರೆ.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಬಸವನ ಬಾಗೇವಾಡಿ ಕ್ಷೇತ್ರದಿಂದ ಸೋಲು ಅನುಭವಿಸಿದ್ದಾರೆ, ಅದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಮಜಿ ಸಚಿವ ದಿ.ಬಿ.ಎಸ್. ಪಾಟೀಲ ಮನಗೂಳಿ ಅವರ ಪುತ್ರ ಅಪ್ಪುಗೌಡ ಪಾಟೀಲ ಅವರು ಸೋಲು ಅನುಭವಿಸಿದರೆ, ದೇವರಹಿಪ್ಪರಗಿ ಕ್ಷೇತ್ರದ ಶಾಸಕರಾಗಿದ್ದ ಹಾಗೂ ಮಾಜಿ ಸಚಿವ ದಿ.ಬಿ.ಎಸ್. ಪಾಟೀಲ ಮನಗೂಳಿ ಅವರ ಪುತ್ರ ಸೋಮನಗೌಡ ಪಾಟೀಲ ಸಾಸನೂರ ಸೋಲು ಅನುಭವಿಸಿದ್ದಾರೆ. ಆ ಮೂಲಕ ಇಬ್ಬರು ಮಾಜಿ ಸಚಿವರ ಪುತ್ರರಿಗೆ ಮತದಾರ ಸೋಲಿನ ರುಚಿ ತೋರಿಸಿದರೆ, ಮಾಜಿ ಸಚಿವ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಆಯ್ಕೆಯಾಗಿ ಮತದಾರರ ಕೃಪಾಶೀರ್ವಾದಕ್ಕೆ ಪಾತ್ರರಾಗಿದ್ದಾರೆ.
ಅತೀ ಹೆಚ್ಚು ಮತ ಪಡೆದ ಯತ್ನಾಳ
ತೀವ್ರ ಕೂತೂಹಲ ಕೆರಳಿಸಿದ್ದ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಸನಗೌಡ ಪಾಟೀಲ ಯತ್ನಾಳರು ಅತೀ ಹೆಚ್ಚು ಮತಗಳನ್ನು ಪಡೆದಿದ್ದಾರೆ 93,316. ಮತಗಳನ್ನು ಪಡೆಯುವ ಮೂಲಕ ಜಿಲ್ಲೆಯಲ್ಲಿಯೇ ಈ ಚುನಾವಣೆಯಲ್ಲಿ ಅತೀ ಹೆಚ್ಚು ಮತ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ, ಆದರೆ ಅವರು ಸಹ ಎಂ.ಬಿ. ಪಾಟೀಲರ 98,339 ಮತಗಳ ದಾಖಲೆಯನ್ನು ಮುರಿಯಲಿಲ್ಲ.
ಮನಗೂಳಿ ದಾಖಲೆ ಸರಿಗಟ್ಟಿದ ನಾಡಗೌಡ – ಎಂಬಿಪಿ
ಬಸವನ ಬಾಗೇವಾಡಿ ಕ್ಷೇತ್ರದಿಂದ ಆರು ಬಾರಿ ಆಯ್ಕೆಯಾಗುವ ದಾಖಲೆ ಬರೆದಿರುವ ದಿ.ಬಿ.ಎಸ್. ಪಾಟೀಲ ಮನಗೂಳಿ ಅವರ ದಾಖಲೆಯನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಮಾಜಿ ಸಚಿವ ಸಿ.ಎಸ್. ನಾಡಗೌಡ ಸರಿಗಟ್ಟಿದ್ದಾರೆ.
1967, 1972, 1978, 1983, 1989 ಹಾಗೂ 1994ರಲ್ಲಿ ದಿ.ಬಿ.ಎಸ್. ಪಾಟೀಲ ಮನಗೂಳಿ ಗೆಲುವು ಸಾಧಿಸುವ ಮೂಲಕ ಆರು ಬಾರಿ ಶಾಸನ ಸಭೆ ಪ್ರವೇಶಿಸಿದ್ದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಒಟ್ಟು ಆರು ಬಾರಿ ಶಾಸಕರಾಗುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿದ್ದು, 1993 ರಲ್ಲಿ ನಡೆದ ಉಪಚುನಾವಣೆ, 2004, 2008, 2013, 2018 ಹಾಗೂ ಪ್ರಸಕ್ತ ಚುನಾವಣೆಯಲ್ಲೂ ಜಯ ಸಾಧಿಸುವ ಮೂಲಕ ಆರು ಬಾರಿ ಶಾಸನಸಭೆ ಪ್ರವೇಶ ಮಾಡಿದಂತಾಗಿದೆ.
ಅದೇ ತೆರನಾಗಿ ಮಾಜಿ ಸಚಿವ ಅಪ್ಪಾಜಿ ನಾಡಗೌಡ ಸಹ ಆರು ಬಾರಿ ಶಾಸನಸಭೆ ಪ್ರವೇಶಮಾಡಿದಂತಾಗಿದ್ದು, 1989, 1999, 2004, 2008, 2013, ಪ್ರಸಕ್ತ 2023 ರಲ್ಲಿ ಆಯ್ಕೆಯಾಗುವ ಮೂಲಕ ಆರು ಬಾರಿ ಗೆಲುವು ದಾಖಲಿಸಿದ ಸಾಧಣೆ ತೋರುವ ಮೂಲಕ ಮನಗೂಳಿ ಅವರ ದಾಖಲೆಯನ್ನು ಸರಗಟ್ಟಿದ್ದಾರೆ.
ಎಂಬಿಪಿ ಹೊಸ ದಾಖಲೆ
ಒಂದೇ ಕ್ಷೇತ್ರದಿಂದ ಸತತ ಐದು ಬಾರಿ ಆಯ್ಕೆಯಾಗುವ ಮೂಲಕ ಎಂ.ಬಿ. ಪಾಟೀಲ ಹೊಸ ದಾಖಲೆ ಬರೆದಿದ್ದಾರೆ. ಜಿಲ್ಲೆಯಲ್ಲಿ ಅನೇಕ ಹಿರಿಯ ನಾಯಕರು ಐದು ಬಾರಿ, ಆರು ಬಾರಿ ಶಾಸಕರಾಗಿದ್ದಾರೆ ಆದರೆ ಅವರಲ್ಲಿ ಯಾರೊಬ್ಬರು ಸಹ ಸತತವಾಗಿ ಒಂದೇ ಕ್ಷೇತ್ರದಿಂದ ಆಯ್ಕೆಯಾಗಿಲ್ಲ, ಈ ಬಾರಿ ಎಂ.ಬಿ. ಪಾಟೀಲ ಸತತ ಐದನೇಯ ಬಾರಿಗೆ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾರೆ.
ಈ ಬಾರಿಯ ಚುನಾಣೆಯಲ್ಲಿಯೂ ಎಂ.ಬಿ. ಪಾಟೀಲರ ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಾಗಲಿಲ್ಲ. ಕಳೆದ ಬಾರಿ ಅಂದರೆ 2018 ರ ಚುನಾವಣೆಯಲ್ಲಿ ಎಂ.ಬಿ. ಪಾಟೀಲರು 98,339 ಮತಗಳನ್ನು ಪಡೆಯುವ ಮೂಲಕ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮತಗಳನ್ನು ಪಡೆಯುವ ಮೂಲಕ ದಾಖಲೆ ತೋರಿದ್ದಾರೆ, ಈ ಬಾರಿಯೂ ಈ ದಾಖಲೆಯನ್ನು ಯಾರೂ ಮುರಿಯಲಿಲ್ಲ.
ಶಿವಾನಂದ – ಯಶವಂತರಾಯರ ಹ್ಯಾಟ್ರಿಕ್ ಸಾಧನೆ
ಬಸವನ ಬಾಗೇವಾಡಿ ಕ್ಷೇತ್ರದಿಂದ ಶಿವಾನಂದ ಪಾಟೀಲ, ಇಂಡಿಯಿAದ ಯಶವಂತರಾಯಗೌಡರು ಈ ಬಾರಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ್ದಾರೆ.
ಶಿವಾನಂದ ಪಾಟೀಲರು 2013, 2018 ಹಾಗೂ ಪ್ರಸಕ್ತ 2023 ರ ಚುನಾವಣೆಯಲ್ಲಿ ಜಯ ಸಾಧಿಸಿದ್ದರೆ, ಇಂಡಿಯಿಂದ ಯಶವಂತರಾಯಗೌಡರು ಸಹ 2013, 2018, 2023ರ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ತೋರಿದ್ದಾರೆ.
ಅತೀ ಹೆಚ್ಚಿನ ಅಂತರದಿಂದ ಕಟಕದೊಂಡ ಗೆಲುವು
ಪ್ರಸಕ್ತ ಚುನಾವಣೆಯಲ್ಲಿ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ವಿಠ್ಠಲ ಕಟಕದೊಂಡ ಅತೀ ಹೆಚ್ಚು ಅಂದರೆ 30,814 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. ವಿಠ್ಠಲ ಕಟಕದೊಂಡ ಅವರು ಒಟ್ಟು 78,985 ಮತಗಳನ್ನು ಪಡೆದುಕೊಂಡರೆ ಅವರ ಸಮೀಪದ ಪ್ರತಿಸ್ಪರ್ಧಿ ಸಂಜೀವ ಐಹೊಳಿ 48,171 ಮತಗಳನ್ನು ಪಡೆದುಕೊಂಡರು. ಅದೇ ತೆರನಾಗಿ ಮುದ್ದೇಬಿಹಾಳ ಕ್ಷೇತ್ರದಿಂದ ಎ.ಎಸ್. ಪಾಟೀಲ ನಡಹಳ್ಳಿ ಅತೀ ಕಡಿಮೆ ಅಂತರದಿAದ ಸೋಲು ಅನುಭವಿಸಿದ್ದು, 7844 ಮತಗಳ ಅಂತರದಿಂದ ಪರಾಭವಗೊಳ್ಳುವಂತಾಗಿದೆ.