ಇಂಡಿಯಲ್ಲಿ ಪಕ್ಷೇತರರಿಗೆ ಹ್ಯಾಟ್ರಿಕ್ ಗೆಲುವಿನ ಯೋಗ

ವರದಿ: ಸಮೀವುಲ್ಲಾ ಉಸ್ತಾದ
ವಿಜಯಪುರ : ಪಕ್ಷೇತರರ ಅಭ್ಯರ್ಥಿಯೊಬ್ಬರು ಹ್ಯಾಟ್ರಿಕ್ ಗೆಲುವು ದಾಖಲಿಸುವುದು ಅಪರೂಪ. ಈ ದಾಖಲೆ ಬರೆದದ್ದು ಇಂಡಿ ವಿಧಾನಸಭಾ ಕ್ಷೇತ್ರ.


ಒಂದು ಬಾರಿ ಪಕ್ಷೇತರರು ಆಯ್ಕೆಯಾಗುವ ಉದಾಹರಣೆ ಅನೇಕ ಕಡೆ ಇವೆ. ಮೂರು ಬಾರಿಯೂ ಪಕ್ಷೇತರರಿಗೆ ಮಣೆ ಹಾಕುವ ಮೂಲಕ ವಿಶಿಷ್ಟ ಇತಿಹಾಸ ಬರೆದಿದ್ದು ಮಾತ್ರ ಇಂಡಿ ಮತದಾರ.
ಪಕ್ಷೇತರರಾಗಿ ಸ್ಪರ್ಧಿಸಿದ ರವಿಕಾಂತ ಪಾಟೀಲರಿಗೆ ಮೂರು ಬಾರಿ ಅವಕಾಶ ನೀಡುವ ಮೂಲಕ ಇಂಡಿ ಮತದಾರರ ಪಕ್ಷೇತರರನ್ನು ಅತೀ ಹೆಚ್ಚು ಬಾರಿ ಜಿಲ್ಲೆಯಿಂದ ಆಯ್ಕೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂಬ ತತ್ವ ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲವಾಗಿ ಮೊಳಗಿದ್ದಂತೂ ಸತ್ಯ.

ಸಚಿವ ಸ್ಥಾನದ ಕಾಲ ಕೂಡಿ ಬಂದಿಲ್ಲ
ಈ ಕ್ಷೇತ್ರವನ್ನು ಪ್ರತಿನಿಧಿಸಿದ ಯಾರೊಬ್ಬ ಶಾಸಕರು ಇಲ್ಲಿಯವರೆಗೆ ಸಚಿವ ಸ್ಥಾನ ಅಲಂಕರಿಸಿಲ್ಲ.
ಈ ಕ್ಷೇತ್ರದಿಂದ ಆಯ್ಕೆಯಾದ ಅನೇಕ ಘಟಾನುಘಟಿ ನಾಯಕರು ರಾಜ್ಯದಲ್ಲಿಯೇ ಪ್ರಭಾವ ಬೀರಿದ್ದರೂ ಸಹ ಸಚಿವ ಸ್ಥಾನ ಅಲಂಕರಿಸುವ ಯೋಗ ಮಾತ್ರ ಬರಲಿಲ್ಲ. ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರಿಗೆ ಬೆಳ್ಳಿ ಪಂಪಸೆಟ್ ಕೊಡುಗೆಯಾಗಿ ನೀಡಿದ ಆರ್.ಆರ್. ಕಲ್ಲೂರ ರಾಜ್ಯ ರಾಜಕರಣದಲ್ಲಿ ಪ್ರಭಾವಿ ನಾಯಕರಾದವರು, ಈ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾದವರು. ಆದರೆ ಅವರಿಗೆ ಒಲಿದಿದ್ದು ಕರ್ನಾಟಕ ಭೂಸೇನಾ ನಿಗಮದ ಅಧ್ಯಕ್ಷ ಸ್ಥಾನ ಮಾತ್ರ. ಅದೇ ತೆರನಾಗಿ ಯಶವಂತರಾಯಗೌಡರು ಸಹ ಕರ್ನಾಟಕ ನಗರ ನೀರು-ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದು ಬಿಟ್ಟರೆ ಸಚಿವ ಸ್ಥಾನದ ಯೋಗ ಅವರಿಗೂ ಕೂಡಿಬಂದಿರಲಿಲ್ಲ.


1957 ರಲ್ಲಿ ರಚನೆಯಾದ ಇಂಡಿ ವಿಧಾನಸಭಾ ಕ್ಷೇತ್ರ ಇಂಡಿ (ಮೀಸಲು), ಇಂಡಿ (ಸಾಮಾನ್ಯ) ಕ್ಷೇತ್ರವಾಗಿತ್ತು, 1962 ರಲ್ಲಿ ಇಂಡಿ ಮೀಸಲು ಮತಕ್ಷೇತ್ರ ಬರಡೋಲ (ಮೀಸಲು) ಕ್ಷೇತ್ರವಾಗಿ ಪರಿವರ್ತನೆಯಾಯಿತು, ತದನಂತರ 1962 ರಿಂದ ಇಲ್ಲಿಯವರೆಗೆ ಸಾಮಾನ್ಯ ಕ್ಷೇತ್ರವಾಗಿದೆ.
ಪ್ರಸ್ತುತ ಇಂಡಿ ಶಾಸಕರಾಗಿರುವ ಯಶವಂತರಾಯಗೌಡರು ಈಗ ಹ್ಯಾಟ್ರಿಕ್ ಹೊಸ್ತಿಲಲ್ಲಿದ್ದಾರೆ. ಒಂದು ವೇಳೆ ಪುನರಾಯ್ಕೆಯಾದರೆ ಇಂಡಿ ಕ್ಷೇತ್ರದಲ್ಲಿ ಇಬ್ಬರು ಶಾಸಕರು ಹ್ಯಾಟ್ರಿಕ್ ಯೋಗ ಗಿಟ್ಟಿಸಿಕೊಳ್ಳಲಿದ್ದಾರೆ.
ಎಸ್ಡಬ್ಲ್ಯೂಎ ಎರಡು ಬಾರಿ, ಕಾಂಗ್ರೆಸ್ ಆರು ಬಾರಿ, ಬಿಜೆಪಿ ಒಂದು ಬಾರಿ, ಜೆಎನ್ಪಿ ಎರಡು ಬಾರಿ ಈ ಕ್ಷೇತ್ರದಲ್ಲಿ ಖಾತೆ ತೆರೆದರೆ, ಬಿಜೆಪಿಯಿಂದ ಡಾ.ಸಾರ್ವಭೌಮ ಬಗಲಿ ಆಯ್ಕೆಯಾಗಿ ಬಿಜೆಪಿ ಬಾಗಿಲು ತೆರೆದರು. ರವಿಕಾಂತ ಪಾಟೀಲರು ಮೂರು ಬಾರಿ ಪಕ್ಷೇತರರಾಗಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದವರು. ಅನೇಕ ಬಾರಿ ತ್ರಿಕೋನ, ದ್ವಿಕೋನ, ಚತುಷ್ಕೋನ ಸ್ಪರ್ಧೆಗಳಿಗೂ ಸಹ ಇಂಡಿ ಕ್ಷೇತ್ರ ಹೆಸರುವಾಸಿ.


ಈ ಕ್ಷೇತ್ರವನ್ನು ಪ್ರತಿನಿಧಿಸಿದ ಮಲ್ಲಪ್ಪ ಕರಬಸಪ್ಪ ಸುರಪೂರ, ಆರ್.ಆರ್. ಕಲ್ಲೂರ, ರವಿಕಾಂತ ಪಾಟೀಲರು ಒಟ್ಟು ಮೂರು ಬಾರಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ. ಆದರೆ ಇದರಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದು ರವಿಕಾಂತ ಪಾಟೀಲರು ಮಾತ್ರ.

ಇಂಡಿ ಪ್ರತಿನಿಧಿಸಿದ ಶಾಸಕರು
1957 – ಮಲ್ಲಪ್ಪ ಕರಬಸಪ್ಪ ಸುರಪೂರ (ಕಾಂಗ್ರೆಸ್)
1962 – ಜಿ.ಡಿ. ಪಾಟೀಲ ಚಾಂದಕವಠೆ (ಎಸ್ಡಬ್ಲ್ಯೂಎ)
1967 – ಮಲ್ಲಪ್ಪ ಕರಬಸಪ್ಪ ಸುರಪೂರ (ಎಸ್ಡಬ್ಲ್ಯೂಎ)
1972 – ಮಲ್ಲಪ್ಪ ಕರಬಸಪ್ಪ ಸುರಪೂರ (ಕಾಂಗ್ರೆಸ್)
1978 – ಆರ್.ಆರ್. ಕಲ್ಲೂರ (ಜೆಎನ್ಪಿ)
1983 – ಆರ್.ಆರ್. ಕಲ್ಲೂರ (ಕಾಂಗ್ರೆಸ್)
1985 – ನಿಂಗಪ್ಪ ಸಿದ್ಧಪ್ಪ ಖೇಡ (ಜೆಎನ್ಪಿ)
1989 – ಆರ್.ಆರ್. ಕಲ್ಲೂರ (ಕಾಂಗ್ರೆಸ್)
1994 – ರವಿಕಾಂತ ಪಾಟೀಲ (ಪಕ್ಷೇತರ)
1999 – ರವಿಕಾಂತ ಪಾಟೀಲ (ಪಕ್ಷೇತರ)
2004 – ರವಿಕಾಂತ ಪಾಟೀಲ (ಪಕ್ಷೇತರ)
2008 – ಡಾ.ಸಾರ್ವಭೌಮ ಬಗಲಿ (ಬಿಜೆಪಿ)
2013 – ಯಶವಂತರಾಯಗೌಡ ಪಾಟೀಲ (ಕಾಂಗ್ರೆಸ್)
2018 – ಯಶವಂತರಾಯಗೌಡ ಪಾಟೀಲ (ಕಾಂಗ್ರೆಸ್)

Latest Indian news

Popular Stories