ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕೃಷ್ಣೆ : ಯಶವಂತರಾಯ ಆಶಯ

ವಿಜಯಪುರ : ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳು ರಾಷ್ಟ್ರೀಕರಣವಾಗಬೇಕು, ಆಗ ಮಾತ್ರ ಈ ಯೋಜನೆಗಳು ಪೂರ್ಣಗೊಳ್ಳಲು ಸಾಧ್ಯ, ಇಲ್ಲವಾದರೆ ಈ ಯೋಜನೆ ಎಂದಿಗೂ ಪೂರ್ಣಗೊಳ್ಳುವುದಿಲ್ಲ, ಕೃಷ್ಣಾ ಕೊಳ್ಳದ ನೀರಾವರಿ ಯೋಜನೆ ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಭಾಗವಾಗಬೇಕು ಎಂಬ ಆಶಯವನ್ನು ಕಾಂಗ್ರೆಸ್ ನಾಯಕರ ಮುಂದೆ ವ್ಯಕ್ತಪಡಿಸಿದ್ದೇನೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ಕೊಳ್ಳದ ಯೋಜನೆಯೇ ಪ್ರಣಾಳಿಕೆಯ ಪ್ರಮುಖ ಭಾಗವಾಗಬೇಕು ಎಂದು ಕಾಂಗ್ರೆಸ್ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.

ರಾಜ್ಯದ ನೀರಾವರಿ ಯೋಜನೆಗೆ ಸಿದ್ದರಾಮಯ್ಯ ಸರ್ಕಾರ ಸಾಕಷ್ಟು ಕೊಡುಗೆ ನೀಡಿದೆ. ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗೆ ಸಾಕಷ್ಟು ಅನುದಾನ ನೀಡಲಾಗಿದೆ. ಮತ್ತೆ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದರು.
ಕೃಷ್ಣೆಯಂತೆ ಭೀಮೆಗೂ ಆದ್ಯತೆ ನೀಡಬೇಕು. ಪ್ರವಾಸೋದ್ಯಮ ಅಭಿವೃದ್ದಿಗೆ ಆದ್ಯತೆ ನೀಡಬೇಕು.

ತೊಗರಿ ಬೆಳೆ ಹಾನಿಯಾಗಿದ್ದು ಪರಿಹಾರ ನೀಡಬೇಕು. ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ರೈತರು ಮೊದಲೇ ಸಂಕಷ್ಟದಲ್ಲಿದ್ದು ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.

ಹೊಸ ತಾಲೂಕುಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ಮಹಾನಗರ ಪಾಲಿಕೆ ಚುನಾವಣೆ ಮುಗಿದರೂ ಮೇಯರ್ – ಉಪಮೇಯರ್ ಚುನಾವಣೆ ನಡೆದಿಲ್ಲ. ಸ್ಥಳೀಯ ಸಂಸ್ಥೆಗಳ ಕಡೆಗಣನೆ ಸಲ್ಲದು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗೆ ಚುನಾವಣೆಯೇ ನಡೆದಿಲ್ಲ, ಈ ರೀತಿಯ ಸಮಸ್ಯೆಗಳ ದೊಡ್ಡ ಸರಮಾಲೆಯೇ ಇದೆ ಎಂದರು.

ಇಂಡಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ಟ್ಯಾಂಕರ್ ಮೂಲಕ ನೀರುಣಿಸುವ ಸ್ಥಿತಿ ಇತ್ತು. ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಮೂಲಕ ನೀರಿನ ಸಮಸ್ಯೆ ಬಗೆಹರಿಸಲಾಗಿದೆ ಎಂದರು.

ಜಲಧಾರೆ ಯೋಜನೆ ಆಮೆಗತಿಯಲ್ಲಿ ಸಾಗಿದೆ. 2018-19 ರಲ್ಲಿ ರೂಪುಗೊಂಡ ಯೋಜನೆ 2023 ಬಂದರೂ ಮುಗಿದಿಲ್ಲ. ಸಾಕಷ್ಟು ವಿಳಂಬವಾಗಿ ನಡೆಯುತ್ತಿದೆ. ಹೀಗಾಗಿ ಆ ಯೋಜನೆ ತ್ವರಿತವಾಗಿ ಪೂರ್ಣಗೊಳ್ಳಬೇಕೆಂದು ಶಾಸಕ ಯಶವಂತರಾಯಗೌಡ ಪಾಟೀಲ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಪ್ರಜಾಧ್ವನಿ ಯಾತ್ರೆಗೆ ಸಕಲ ಸಿದ್ಧತೆ
ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಫೆ.11 ಕ್ಕೆ ವಿಜಯಪುರ ಜಿಲ್ಲೆ ಪ್ರವೇಶಿಸಲಿದೆ, ಅಂದು ಅಂದು ಬೆಳಗ್ಗೆ ಸಿಂದಗಿ, ಮಧ್ಯಾಹ್ನ ಇಂಡಿ ಹಾಗೂ ಸಂಜೆ ಚಡಚಣ ಕ್ಷೇತ್ರದಲ್ಲಿ ಯಾತ್ರೆ ನಡೆಯಲಿದ್ದು, ಮತಕ್ಷೇತ್ರದಲ್ಲಿ ಸಕಲ ಸಿದ್ಧತೆ ಭರದಿಂದ ಕೈಗೊಳ್ಳಲಾಗುತ್ತಿದೆ ಎಂದು ಯಶವಂತರಾಯಗೌಡರು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವಾರು ನಾಯಕರು ಪಾಲ್ಗೊಳ್ಳಲಿದ್ದಾರೆ. ಬೀದರನಿಂದ ಆರಂಭಗೊಂಡಿರುವ ಈ ಯಾತ್ರೆ ಕಲಬುರಗಿ ಮಾರ್ಗವಾಗಿ ವಿಜಯಪುರ ಜಿಲ್ಲೆ ಪ್ರವೇಶಿಸಲಿದೆ ಎಂದರು.

ಜನಪರವಾದ ಪ್ರಣಾಳಿಕೆ ಮುಂದಿಟ್ಟುಕೊಂಡು ಈ ಯಾತ್ರೆ ನಡೆಯುತ್ತಿದೆ. ಈ ಹಿಂದ ಸಿದ್ದರಾಮಯ್ಯ ಹಾಗೂ ಪರಮೇಶ್ವರ ಅವರ ನೇತೃತ್ವದಲ್ಲಿ ರೂಪುಗೊಂಡಿದ್ದ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆ ಪೈಕಿ 160 ಕ್ಕೂ ಅಧಿಕ ಭರವಸೆ ಈಡೇರಿಸಿದ್ದೇವೆ. ಈ ಬಾರಿಯೂ ಜನಪರ ಪ್ರಣಾಳಿಕೆ ರೂಪಿಸಿಕೊಂಡು ಚುನಾವಣೆ ಎದುರಿಸಲು ಮುಂದಾಗಿದ್ದೇವೆ ಎಂದರು.

Latest Indian news

Popular Stories