ವಿಜಯಪುರ : ನಾಗಠಾಣ ವಿಧಾನಸಭಾ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯ ಬಂಡಾಯದ ಬಾವುಟ ಹಾರುವ ಲಕ್ಷಣಗಳು ಗೋಚರಿಸುತ್ತಿವೆ. ಈ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಚಿವ ಗೋವಿಂದ ಕಾರಜೋಳ ಅವರ ಪುತ್ರ ಡಾ.ಗೋಪಾಲ್ ಕಾರಜೋಳ ಅವರಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಕಾರ್ಯಕ್ರರ್ತರು ಬಂಡಾಯದ ಬಾವುಟ ಹಾರಿಸಲು ಸಜ್ಜಾಗಿದ್ದಾರೆ.
ಬುಧವಾರ ನಗರದಲ್ಲಿ ನಡೆದ ನಾಗಠಾಣ ಕ್ಷೇತ್ರದ ತಮ್ಮ ಬೆಂಬಲಿಗರ ಸಭೆಯಲ್ಲಿ ಕಾರ್ಯಕರ್ತರು ನಾಗಠಾಣ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂದು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಬಂಡಾಯದ ಬಾವುಟ ಹಾರಾಡುವ ಲಕ್ಷಣ ಗೋಚರಿಸಿದೆ.
ಈ ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಬಿಜೆಪಿಯ ರಾಜ್ಯ ನಾಯಕತ್ವ ಹಾಗೂ ಸ್ಥಳೀಯ ಮುಖಂಡರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ಕಳೆದ ಎಂಟು ವರ್ಷಗಳಿಂದ ಗೋಪಾಲ್ ಕಾರಜೋಳ ಅವರು ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿದ್ದಾರೆ. ಜೊತೆಗೆ ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋತಿದ್ದಾರೆ, ಈ ಬಾರಿ ಅವರಿಗೆ ಟಿಕೆಟ್ ಸಿಗುತ್ತದೆ ಎನ್ನುವ ಭರವಸೆಯಿತ್ತು, ಕೊನೆ ಗಳಿಗೆಯಲ್ಲಿ ಕಾಣದ ಕೈಗಳಿಂದ ಟಿಕೆಟ್ ತಪ್ಪಿದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಬಿಜೆಪಿ ನಾಗಠಾಣ ಕ್ಷೇತ್ರದಲ್ಲಿ ಕತ್ತೆಗೆ ಟಿಕೆಟ್ ನೀಡಿದೆ, ಹೀಗಾಗಿ ಕತ್ತೆ ಪರವಾಗಿ ನಾವು ಕೆಲಸ ಮಾಡಲು ಸಿದ್ಧರಿಲ್ಲ, ಗೋಪಾಲ್ ಕಾರಜೋಳ ಅವರು ಪಕ್ಷೇತರವಾಗಿ ಸ್ಪರ್ಫ್ಹಿಸಲೇ ಬೇಕು ಎಂದು ಬಿಗಿಪಟ್ಟು ಹಿಡಿದರು. ತಾವು ಯಾವುದೇ ಕಾರಣಕ್ಕೂ ಹಿಂದೆ ಹೆಜ್ಜೆ ಇಡಬಾರದು ಎಂದು ಒತ್ತಾಯಿಸಿದರು.
ಈ ವೇಳೆ ಕಾರ್ಯಕರ್ತರು ತಮ್ಮ ಅನಿಸಿಕೆ ವ್ಯಕ್ತಪಡಿಸುವಾಗ ಕಣ್ಣೀರು ಹಾಕಿದರು. ಬಿಜೆಪಿ ಹೈಕಮಾಂಡ ಕುಟುಂಬ ರಾಜಕಾರಣ ಬೇಡ ಎನ್ನುವುದಾದರೆ ಸೊಸೆ ಮಾವ, ಗಂಡ ಹೆಂಡತಿಗೆ ಟಿಕೆಟ್ ಏಕೆ ನೀಡಿದೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಗಠಾಣ ಮಂಡಲ ಅಧ್ಯಕ್ಷ ನವೀನ್ ಅರಕೇರಿ ನಾವು ಗೋಪಾಲ್ ಕಾರಜೋಳ ಅವರಿಕೆ ಟಿಕೆಟ್ ಸಿಗತ್ತದೆ ಎನ್ನುವ ಭಾರವಸೆಯಲ್ಲಿದ್ದೆವು, ಆ ಕಾರಣದಿಂದಾಗಿಯೇ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆವು, ಆದರೆ ಕೊನೆ ಗಳಿಗೆಯಲ್ಲಿ ಟಿಕೆಟ್ ತಪ್ಪಿದ್ದು ನಿರಾಶೆ ಮೂಡಿಸಿದೆ ಎಂದರು.
ನಾವು ಯಾವಾಗಲೂ ರಾಜೀನಾಮೆ ಪತ್ರವನ್ನು ಜೇಬಿನಲ್ಲಿಯೇ ಇಟ್ಟುಕೊಂಡು ಓಡಾಡುತ್ತಿದ್ದೇನೆ, ನಾಳೆ ಒಳಗಾಗಿ ಗೋಪಾಲ್ ಕಾರಜೋಳ ಅವರಿಗೆ ಟಿಕೆಟ್ ಸಿಗುತ್ತದೆ ಎನ್ನುವ ಭರವಸೆಯಿದೆ, ಒಂದು ವೇಳೆ ಸಿಗದಿದ್ರೆ ನಾವು ನಮ್ಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೈಕಮಾಂಡ್ ಗೆ ಎಚ್ಚರಿಕೆ ನೀಡಿದರು.
ಗೋಪಾಲ್ ಕಾರಜೋಳ ಅವರು ಸೂಚಿಸಿದ್ರೆ ಇಂದೇ ರಾಜೀನಾಮೆ ಸಲ್ಲಿಸುತ್ತೇನೆ ಎಂದು ನವೀನ್ ಭಾವುಕರಾದರು.
ಸಭೆಯ ಬಳಿಕ ಮಾತನಾಡಿದ ಗೋಪಾಲ್ ಕಾರಜೋಳ ಅವರು, ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಒಬ್ಬ ಅಭ್ಯರ್ಥಿಗೆ ಟಿಕೆಟ್ ನೀಡಿದೆ, ಪಕ್ಷದ ತೀರ್ಮಾನದಂತೆ ನಾವೆಲ್ಲರೂ ಅಭ್ಯರ್ಥಿಯ ಪರವಾಗಿ ಕೆಲಸ ಮಾಡೋಣ ಅಂತ ಹೇಳುತ್ತಿದ್ದಂತೆಯೇ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು, ಈ ಹೇಳಿಕೆಯಿಂದ ಅಸಮಾಧಾನಗೊಂಡ ಕಾರ್ಯಕರ್ತರು ಸ್ಟೇಜ್ ಏರಿ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.
ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಘೋಷಣೆ ಕೂಗಿದರು, ಈ ವೇಳೆ ಮದ್ಯ ಪ್ರವೇಶಿಸಿದ ಗೋಪಾಲ್ ಕಾರಜೋಳ ಅವರು, ಸಂಜೆಯವರೆಗೆ ಕಾಯೋಣ, ಹೈಕಮಾಂಡ್ ಮಟ್ಟದಲ್ಲಿ ಸಭೆ ನಡೆಯುತ್ತಿದೆ, ಸಿಹಿ ಸುದ್ದಿಯ ನಿರೀಕ್ಷೆಯಿದೆ ಎಂದು ಕಾರುಕರ್ತರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಇದಕ್ಕೂ ಕಾರ್ಯಕರ್ತರು ಜಗ್ಗದಿದ್ದಾಗ, ಕೊನೆಗೆ ಕಾರ್ಯಕರ್ತರ ತೀರ್ಮಾನಕ್ಕೆ ಬದ್ಧವಿರುವುದಾಗಿ ಹೇಳುವ ಮೂಲಕ ಸಮಾಧಾನ ಪಡಿಸಿದರು.
ನಮಗೆ ಕಾರ್ಯಕರ್ತರ ಹಿತ ಮುಖ್ಯ, ಕಾರ್ಯಕರ್ತರ ತೀರ್ಮಾನ ಆಲಿಸಿದ್ದೇನೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆ. ಹೈಕಮಾಂಡ್ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆಯಿದೆ. ಮುಂದಿನ ನಿರ್ಧಾರ ಶೀಘ್ರದಲ್ಲಿಯೇ ತಿಳಿಸುತ್ತೇನೆ ಎಂದು ನಾಗಠಾಣ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಗೋಪಾಲ್ ಕಾರಜೋಳ ಹೇಳಿದರು.