ವರದಿ: ಸಮಿಯುಲ್ಲಾ ಉಸ್ತಾದ
ವಿಜಯಪುರ: ಕಾರು ಚಾಲಕನ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ ಚಾಲಕನ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
ನಿನ್ನೆಯಷ್ಟೆ ಸಚಿವ ನೀರಾಣಿ ಶಾಸಕ ಯತ್ನಾಳರ ಕಾರ್ ಚಾಲಕನ ಸಾವಿನ ಕುರಿತು ಯತ್ನಾಳರಿಗೆ ಸವಾಲುಹಾಕಿದ್ದರು ಅದಕ್ಕೆ ಪ್ರತಿಯಾಗಿ ಇಂದು ಶಾಸಕ ಯತ್ನಾಳ ಸಿಬಿಐ ತನಿಖೆ ನಡೆಸಲು ಸಿಎಂಗೆ ಪತ್ರ ಬರೆದಿದ್ದಾರೆ.
ಇನ್ನು ಸಂಪುಟದ ಸದಸ್ಯರು ಈ ರೀತಿ ಆರೋಪ ಮಾಡಿರುವ ಬಗ್ಗೆ ಸತ್ಯಾಸತ್ಯತೆ ತಿಳಿಯಲಿ. ಇಂತಹ ಆರೋಪದಿಂದ ಸರ್ಕಾರದ ಬಗ್ಗೆ ತಪ್ಪು ಸಂದೇಶ ಬರುತ್ತದೆ. ದೇಶದ ಜನತೆಗೆ ಇದರ ಬಗ್ಗೆ ಸತ್ಯಾಸತ್ಯತೇ ಗೊತ್ತಾಗಬೇಕಿದೆ ಎಂದರು.
24 ಗಂಟೆ ಒಳಗಾಗಿ ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕು. ಇಲ್ಲವೇ, ಸುಳ್ಳು ಆರೋಪ ಮಾಡಿದ ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದರು.
ಯಾವುದೇ ವಿವಾದಾತ್ಮಕ ಹೇಳಿಕೆ ನೀಡದಂತೆ ಕೇಂದ್ರ ನಾಯಕರು, ಬಿಜೆಪಿ ವರಿಷ್ಠರು ಫೋನ್ ಮಾಡಿ ತಿಳಿಸಿದ್ದಾರೆ. ಅಲ್ಲದೇ, ಪಂಚಮಸಾಲಿ ಮೀಸಲಾತಿ ಬಗ್ಗೆ ಚರ್ಚಿಸುವ ಸಂಬಂಧ ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಶೀಘ್ರದಲ್ಲೇ ದೆಹಲಿಗೆ ಹೋಗುತ್ತೇನೆ. ಕೇಂದ್ರದಿಂದ ಸಿಹಿ ಸುದ್ದಿ ಸಿಗುವ ಆಶಾಭಾವ ಇದೆ ಎಂದು ಹೇಳಿದರು.