ಕುಂಟೋಜಿ ಗ್ರಾಪಂ ಉಪ ಚುನಾವಣೆ: ಒಂದು ಸ್ಥಾನಕ್ಕೆ ಶೇ.76.84 ಮತದಾನ

ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಪಂನ 2ನೇ ವಾರ್ಡ ಪ್ರತಿನಿಧಿಸುವ ಸಾಮಾನ್ಯ ಮೀಸಲಾತಿಯ ಒಂದು ಸದಸ್ಯ ಸ್ಥಾನಕ್ಕೆ ರವಿವಾರ ಪೊಲೀಸ್ ಬಂದೋಬಸ್ತ್ನಲ್ಲಿ ನಡೆದ ಚುನಾವಣೆ ಶಾಂತಿಯುತವಾಗಿದ್ದು ಶೇ.76.84ರಷ್ಟು ಮತದಾನವಾಗಿದೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಒಟ್ಟು 812 ಮತದಾರರ ಪೈಕಿ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆದ ಮತದಾನದಲ್ಲಿ ಮಳೆಯನ್ನೂ ಲೆಕ್ಕಿಸದೆ 308 ಪುರುಷ ಮತ್ತು 316 ಮಹಿಳೆ ಸೇರಿ ಒಟ್ಟು 624 ಮತದಾರರು ಉತ್ದಾಹದಿಂದ ಮತ ಚಲಾಯಿಸಿದರು.


ರಿಟರ್ನಿಂಗ್ ಆಫೀಸರ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಉಮೇಶ ಮಾಟೂರ, ಅಸಿಸ್ಟಂಟ್ ರಿಟರ್ನಿಂಗ್ ಆಫೀಸರ್ ಮುದ್ದೇಬಿಹಾಳ ಪುರಸಭೆಯ ಕಚೇರಿ ಸಿಬ್ಬಂದಿ ವಿನೋದ ಝಿಂಗಾಡೆ ನೇತೃತ್ವದಲ್ಲಿ ಒಟ್ಟಾರೆ ಪ್ರಕ್ರಿಯೆ ನಡೆಯಿತು. ಮತಗಟ್ಟೆ ಅಧ್ಯಕ್ಷಾಧಿಕಾರಿಯಾಗಿ ನಾಗರಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಎಸ್.ಆರ್.ಪಾಟೀಲ, ಮತದಾನ ಅಧಿಕಾರಿಗಳಾಗಿ ಹಡಲಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಬಿ.ಗುಡಗುಂಟಿ, ನೆರಬೆಂಚಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎ.ಎಸ್.ಬಿರಾದಾರ, ಆಲಕೊಪ್ಪರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್.ಎನ್.ಕುಂಬಾರ ಕಾರ್ಯನಿರ್ವಹಿಸಿದರು. ಪಿಎಸೈ ಆರೀಫ್ ಮುಷಾಪುರಿ ನೇತೃತ್ವದಲ್ಲಿ 6 ಜನ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿರುವಾಗ ತಹಶೀಲ್ದಾರ್ ಟಿ.ರೇಖಾ ಅವರು ಕಂದಾಯ ನಿರೀಕ್ಷಕ ಮಹಾಂತೇಶ ಮಾಗಿ ಮತ್ತು ಸಿಬ್ಬಂದಿಯೊಂದಿಗೆ ಮತದಾನ ಕೇಂದ್ರಕ್ಕೆ ಭೇಟಿ ನೀಡಿ ಪ್ರಕ್ರಿಯೆ ಪರಿಶೀಲಿಸಿ ಸಲಹೆ ಸೂಚನೆ ನೀಡಿದರು. ಈ ಚುನಾವಣೆಯಲ್ಲಿ ಮತಯಂತ್ರಗಳನ್ನು ಬಳಸದೆ ಗುಪ್ತ ಮತದಾನದ ಹಳೇಯು ಪದ್ಧತಿಯಂತೆ ಮತದಾನ ಪ್ರಕ್ರಿಯೆ ನಡೆಸಲಾಯಿತು. ಜು.26 ರಂದು ಬೆಳಿಗ್ಗೆ 8 ಗಂಟೆಗೆ ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮತ ಎಣಿಕೆ ನಡೆಯಲಿದೆ.
ಗ್ರಾಮದ 2ನೇ ವಾರ್ಡಗೆ ಶಿವಬಸಪ್ಪ ಸಜ್ಜನ ಅವರು ಆಯ್ಕೆಯಾಗಿ ಆಗಿನ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರ ಬೆಂಬಲದೊಂದಿಗೆ ಬಿಜೆಪಿ ಪ್ರತಿನಿಧಿಯಾಗಿ ಮೊದಲ ಅವಧಿಯ ಅಧ್ಯಕ್ಷ ಹುದ್ದೆ ಪಡೆದುಕೊಂಡಿದ್ದರು. ಅವಧಿ ಮುಕ್ತಾಯಕ್ಕೂ ಮುನ್ನವೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಆಗ ಚುನಾವಣೆ ನಡೆಸಲಾಗಿತ್ತು. ಆದರೆ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸಲು ಜಿಲ್ಲಾಧಿಕಾರಿಯವರು ಜು.6 ರಂದು ಅಧಿಸೂಚನೆ ಹೊರಡಿಸಿದ್ದರು. ಜು.12 ರಂದು ನಾಮಪತ್ರ ಸಲ್ಲಿಸಲು ಕೊನೇ ದಿನವಾಗಿತ್ತು. ಒಂದು ಸ್ಥಾನಕ್ಕೆ ಸ್ಪರ್ಧೆ ಕೋರಿ ಪರಶುರಾಮ ಬಿರಾದಾರ, ಬಸವರಾಜ ಹುಲಗಣ್ಣಿ, ಬಸವರಾಜ ಕೋಳೂರ, ಸಂಗಮೇಶ ಗುತ್ತೇದಾರ ಹಾಗೂ ಶಂಕ್ರಪ್ಪ ಕುರಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂತೆಗೆದುಕೊಳ್ಳುವ ಕೊನೇಯ ದಿನವಾದ ಜು.15ರಂದು ಪರಶುರಾಮ ಬಿರಾದಾರ ಮತ್ತು ಬಸವರಾಜ ಹುಲಗಣ್ಣಿ ನಾಮಪತ್ರ ಹಿಂದಕ್ಕೆ ಪಡೆದುಕೊಂಡರು. ಹೀಗಾಗಿ ಬಸವರಾಜ ಕೋಳೂರ, ಸಂಗಮೇಶ ಗುತ್ತೇದಾರ, ಶಂಕ್ರಪ್ಪ ಕುರಿ ಅಂತಿಮವಾಗಿ ಕಣದಲ್ಲಿ ಉಳಿದರು. ಸ್ಪರ್ಧೆ ಏರ್ಪಟ್ಟಿದ್ದರಿಂದ ಮತದಾನ ನಡೆಸಬೇಕಾಯಿತು.

Latest Indian news

Popular Stories