ಕೆಲವರು ಗೋರಿಗೆ ಹೋಗುವವರೆಗೂ ಎಂಎಲ್‌ಎ ಆಗಿರಲು ಬಯಸುತ್ತಾರೆ: ಶಾಸಕ ಯತ್ನಾಳ

ವಿಜಯಪುರ : ಕೆಲವೊಬ್ಬರು ಗೋರಿಗೆ ಹೋಗುವವರೆಗೂ ಹಾಲಿ ಶಾಸಕನಾಗಿಯೇ ಇರಲು ಬಯಸುತ್ತಾರೆ, ಬಿಜೆಪಿ ಚುನಾವಣಾ ರಾಜಕಾರಣಕ್ಕೆ 75 ವರ್ಷ ವಯಸ್ಸು ನಿಗದಿಗೊಳಿಸಿದೆ, ಇದನ್ನು ನಾವು ಗೌರವಿಸಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಗೋರಿಗೆ ಹೋಗುವವರೆಗೂ ಎಂಎಲ್‌ಎ ಆಗಿಯೇ ಇರಬೇಕು ಎಂದು ಬಯಸುತ್ತಾರೆ, ಪಕ್ಷದ ನಿಯಮಗಳನ್ನು ಬಯಸಬೇಕು, ಕೇವಲ ಚುನಾವಣಾ ರಾಜಕಾರಣಕ್ಕೆ ಮಾತ್ರ ಅವಕಾಶವಿಲ್ಲ, ಆದರೆ ರಾಜ್ಯಪಾಲರಾಗಬಹುದು ಅಥವಾ ಇನ್ನಾವುದೋ ಜವಾಬ್ದಾರಿ ಪಕ್ಷ ಕೊಡಬಹುದು ಎಂದರು.

ಲಕ್ಷ್ಮಣ ಸವದಿ ನನ್ನ ಸ್ನೇಹಿತ, ನನ್ನ ಬಗ್ಗೆ ಅವರು ಎಂದೂ ಟೀಕೆ ಮಾಡಿಲ್ಲ, ಅವರ ಬಗ್ಗೆ ನಾನು ಟೀಕೆ ಮಾಡಿಲ್ಲ, ಆತುರದ ನಿರ್ಧಾರ ಕೈಗೊಂಡಿದ್ದಾರೆ, ನನಗೂ ಸಹ ಅವಮಾನ ಆಗಿದೆ ಅದರೆ ನಾನು ಪಕ್ಷದ ಬಗ್ಗೆ ಎಂದೂ ಅಗೌರವ ತೋರಿಲ್ಲ, ನನ್ನ ಜಗಳ ಇರುವುದು ಕೆಲವೊಂದು ನಾಯಕರ ಜೊತೆ ಹೊರತು ಪಕ್ಷದ ಜೊತೆ ಅಲ್ಲ. ಕೇವಲ ಕೆಎಂಎಫ್ ನಿರ್ದೇಶಕ ಸ್ಥಾನ ದೊರೆತರೆ ಸಾಕು ಎನ್ನುತ್ತಿದ್ದ ಡಿ.ವಿ. ಸದಾನಂದಗೌಡರಿಗೆ ಪಕ್ಷ ಮುಖ್ಯಮಂತ್ರಿ ಮಾಡಿತು, ಸಾಮಾನ್ಯ ಸಂಸದನಾಗಿದ್ದ ನನಗೆ ಕೇಂದ್ರ ಸಚಿವನನ್ನಾಗಿ ಮಾಡಿತು ಎಂದರು.

ಕೇಂದ್ರ ನಾಯಕರ ದಂಡು
ವಿಜಯಪುರಕ್ಕೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ನಾಯಕರ ದಂಡು ಬರಲಿದೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮೀತ್ ಷಹಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಹಲವಾರು ರಾಷ್ಟ್ರನಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು ಈ ಎಲ್ಲ ಕಾರ್ಯಕ್ರಮಗಳ ಬಗ್ಗೆ ಸಿದ್ಧತೆ ಮಾಡಿಕೊಳ್ಳುವಂತೆ ಪಕ್ಷದಿಂದ ನಿರ್ದೇಶನ ಸಹ ಬಂದಿದೆ ಎಂದರು.

ಈ ಬಾರಿ ಅಬ್ಬರದ ಪ್ರಚಾರ ಮಾಡಿ ಹಣ ವ್ಯರ್ಥ ಮಡುವುದಿಲ್ಲ, ಮನೆ-ಮನೆಗೆ ತೆರಳಿ ನಮ್ಮ ಸರ್ಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಮತಯಾಚಿಸಲಾಗುವುದು ಎಂದರು.

Latest Indian news

Popular Stories