ಜಿದ್ದಾಜಿದ್ದಿನ ಚುನಾವಣಾ ಕಣ ನಾಗಠಾಣ

ವರದಿ: ಸಮೀವುಲ್ಲಾ ಉಸ್ತಾದ


ವಿಜಯಪುರ : ರಾಜ್ಯದಲ್ಲಿಯೇ ವಿಸ್ತಾರವಾದ ವಿಸ್ತ್ರೀರ್ಣವುಳ್ಳ ಎಂಬ ಕೀರ್ತಿಗೆ ಪಾತ್ರವಾಗಿರುವ ನಾಗಠಾಣ ಮೀಸಲು ಮತಕ್ಷೇತ್ರ ಪ್ರತಿ ಬಾರಿ ತ್ರಿಕೋನ ರಣಕಣಕ್ಕೆ ಸಜ್ಜಾಗುವುದು ಸಂಪ್ರದಾಯ. ಪ್ರತಿ ಬಾರಿ‌ ಮೂರು ರಾಜಕೀಯ ಪಕ್ಷಗಳ ನಡುವೆ ಬಿರುಸಿನ ಹಾಗೂ ತುರುಸಿನ ಸ್ಪರ್ಧೆ ನಡೆಯುವುದು ಈ ಕ್ಷೇತ್ರದ ವಾಡಿಕೆ.

ನಾಗಠಾಣದಲ್ಲಿ ಜಿದ್ದಾಜಿದ್ದಿನಿಂದ ಕೂಡಿದ ಅಖಾಡ ಪ್ರತಿವರ್ಷವೂ ಜಿಲ್ಲೆಯ ಮತದಾರರ ಗಮನ ಕೇಂದ್ರಿಕರಿಸುತ್ತಲೇ ಇದೆ.

1957 ರಲ್ಲಿ ಈ ಕ್ಷೇತ್ರವು ಇಂಡಿ (ಮೀಸಲು), ಇಂಡಿ (ಸಾಮಾನ್ಯ) ಕ್ಷೇತ್ರವಾಗಿತ್ತು. ಮತದಾರರು ಮೀಸಲು ಹಾಗೂ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳಿಗೆ ಮತ ಚಲಾಯಿಸುತ್ತಿದ್ದರು. 1962 ರಲ್ಲಿ ಪ್ರತ್ಯೇಕವಾಗಿ ಬರಡೋಲ ಮೀಸಲು ಮತಕ್ಷೇತ್ರವಾಗಿ ಪರಿವರ್ತನೆಯಾಯಿತು, ತದನಂತ 1967 ರಿಂದ 2004 ರವರೆಗೆ ಬಳ್ಳೊಳ್ಳಿ ಮೀಸಲು ಮತಕ್ಷೇತ್ರವಾಯಿತು, 2008 ರಲ್ಲಿ ಕ್ಷೇತ್ರ ಪುನರ್‌ವಿಂಗಡನೆ ಸಂದರ್ಭದಲ್ಲಿ ನಾಗಠಾಣ ಮೀಸಲು ಕ್ಷೇತ್ರವಾಗಿ ಬದಲಾಗಿದೆ.

ಪ್ರತಿ ಬಾರಿ ತ್ರಿಕೋನ ಕದನ


ತ್ರಿಕೋನ ರಣಕಣಕ್ಕೆ ಇಲ್ಲಿ ಖಾಯಂ ಅಖಾಡ ಸಿದ್ಧವಾಗುತ್ತಲೇ ಇದೆ. 1994 ರಿಂದ 2018ರ ಎಲ್ಲ ಚುನಾವಣೆಗಳಲ್ಲಿಯೂ ತ್ರಿಕೋನ ರಣಕಣಕ್ಕೆ ನಾಗಠಾಣ ಕುತೂಹಲಕಾರಿಯಾದ ಕ್ಷೇತ್ರ.

1994 ರಲ್ಲಿ ಈ ಜನತಾ ದಳದಿಂದ ರಮೇಶ ಜಿಗಜಿಣಗಿ, ಕಾಂಗ್ರೆಸ್ ಪಕ್ಷದಿಂದ ಫೂಲಸಿಂಗ ಚವ್ಹಾಣ, ಕೆಆರ್‌ಆರ್‌ಎಸ್ ಪಕ್ಷದ ಸುರೇಶ ಘೋಣಸಗಿ ಸ್ಪರ್ಧೆ ಮಾಡಿದ್ದರು. ತ್ರಿಕೋನ ಸ್ಪರ್ಧೆ ಕ್ಷೇತ್ರದಲ್ಲಿ ಏರ್ಪಟ್ಟಿತ್ತು. 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಈಗಾಗಲೇ ಘೋಷಿತವಾಗಿರುವ ವಿಠ್ಠಲ ಕಟಕದೊಂಡ 1994 ರ ಚುನಾವಣೆಯಲ್ಲಿ ಸ್ಫರ್ಧಿಸಿ 9090 ಮತಗಳನ್ನು ಪಡೆದಿದ್ದರು. ಕೊನೆಗೂ ಈ ಚುನಾವಣೆಯಲ್ಲಿ ರಮೇಶ ಜಿಗಜಿಣಗಿ ಗೆದ್ದು ಬಂದರು. ನಂತರ ನಡೆದ ಉಪಚುನಾವಣೆಯಲ್ಲಿ ವಿಲಾಸಬಾಬು ಆಲಮೇಲಕರ ಆಯ್ಕೆಯಾದರು.

1999 ರಲ್ಲಿ ಕಾಂಗ್ರೆಸ್ ಪಕ್ಷದ ರಾಜು ಆಲಗೂರ, ಜೆಡಿಎಸ್ ಪಕ್ಷದ ಆರ್.ಕೆ. ರಾಠೋಡ ಜೆಡಿಯು ಪಕ್ಷದ ವಿಲಾಸಬಾಬು ಆಲಮೇಲಕರ ಅವರ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿತ್ತು. ರಾಜು ಆಲಗೂರ ಅವರು 27194 ಮತ ಪಡೆದರೆ, ಆರ್.ಕೆ. ರಾಠೋಡ 24667, ಆಲಮೇಲಕರ ಅವರು 23668 ಮತ ಪಡೆದುಕೊಂಡಿದ್ದು ಕೊನೆಗೆ ವಿಜಯಮಾಲೆ ಪ್ರೊ.ಆಲಗೂರ ಮುಡಿಗೇರಿತು.

2004 ರಲ್ಲೂ ಸಹ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು, ಕಾಂಗ್ರೆಸ್‌ನ ಪ್ರೊ.ರಾಜು ಆಲಗೂರ 28873, ಬಿಜೆಪಿ ವಿಠ್ಠಲ ಕಟಕದೊಂಡ 27448 ಮತ ಪಡೆದುಕೊಂಡರೆ ಜೆಡಿಎಸ್ ಆರ್.ಕೆ. ರಾಠೋಡ 39915 ಮತ ಪಡೆದು ಗೆಲುವು ದಾಖಲಿಸಿದರು. ಅದೇ ತೆರನಾಗಿ 2008ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ ವಿಠ್ಠಲ ಕಟಕದೊಂಡ 40225 ಮತ ಪಡೆಯುವ ಮೂಲಕ ಆಯ್ಕೆಯಾದರು, ತೀವ್ರ ಸ್ಪರ್ಧೆ ಒಡ್ಡಿದ ಪ್ರೊ.ರಾಜು ಆಲಗೂರ 36018, ಆರ್.ಕೆ. ರಾಠೋಡ 21815 ಮತ ಪಡೆದುಕೊಂಡರು.

2013 ರಲ್ಲೂ ತ್ರಿಕೋನ ಸ್ಪರ್ಧೆ ನಡೆದು, ಕಾಂಗ್ರೆಸ್‌ದಿಂದ ಪ್ರೊ.ರಾಜು ಆಲಗೂರ 45570 ಮತ ಪಡೆದು ಅಯ್ಕೆಯಾದರು, ಜೆಡಿಎಸ್‌ನ ಡಾ.ದೇವಾನಂದ ಚವ್ಹಾಣ 44903 ಮತ ಪಡೆದು ಪ್ರಬಲ ಪೈಪೋಟಿ ನಿಡಿದರು ಅಷ್ಟೇ ಅಲ್ಲದೇ ಕೆಜೆಪಿಯಿಂದ ಸ್ಪರ್ಧೆ ಮಡಿದ ವಿಠ್ಠಲ ಕಟಕದೊಂಢ 24104 ಮತ ಪಡೆದು ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. 2018 ರ ಚುನಾವಣೆಯಲ್ಲೂ ತ್ರಿಕೋನ ಸ್ಪರ್ಧೆ ನಡೆಯಿತು. ಜೆಡಿಎಸ್‌ನ ಡಾ.ದೇವಾನಂದ ಚವ್ಹಾಣ ಅವರು 59,709 ಮತ, ವಿಠ್ಠಲ ಕಟಕದೊಂಡ ಕಾಂಗ್ರೆಸ್ ವತಿಯಿಂದ ಸ್ಪರ್ಧಿಸಿ 54108, ಡಾ.ಗೋಪಾಲ ಕಾರಜೋಳ 53562 ಮತ ಪಡೆದುಕೊಂಡರು. ಹೀಗಾಗಿ ನಾಗಠಾಣ ಸದಾ ತ್ರಿಕೋನ ರಣಕಣಕ್ಕೆ ಹೆಸರುವಾಸಿ.

ಸೋತವರಿಗೆ ಗೆಲುವಿನ ಉಡುಗೊರೆ
ನಾಗಠಾಣ ಮತಕ್ಷೇತ್ರದ ಜನತೆ ಉದಾರವಾದಿಗಳು, ಈ ಕ್ಷೇತ್ರದಿಂದ ಸೋತವರು ಶಾಸನಸಭೆ ಪ್ರವೇಶಿಸಿದ್ದಂತೂ ಖಾತ್ರಿ. 1994 ರಲ್ಲಿಯೇ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ವಿಠ್ಠಲ ಕಟಕದೋಂಢ ಅವರು 2008 ರಲ್ಲಿ ಗೆಲುವಿನ ನಗೆ ಬೀರಿದರು. 1999 ರ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಆರ್.ಕೆ. ರಾಠೋಡ 2004 ರಲ್ಲಿ ಶಾಸನಸಭೆ ಪ್ರವೇಶಿಸಿದರು. 2008 ರ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಪ್ರೊ.ರಾಜು ಆಲಗೂರ ಅವರು 2013 ರ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದರು. 2013 ರಲ್ಲಿ ಕೂದಲೆಳೆ ಮತಗಳ ಅಂತರದಿಂದ ಸೋತಿದ್ದ ಡಾ.ದೇವಾನಂದ ಚವ್ಹಾಣ ಅವರು 2018 ರಲ್ಲಿ ಗೆಲುವಿನ ನಗೆ ಬೀರಿದರು. ಆ ಮೂಲಕ ಈ ಕ್ಷೇತ್ರದಿಂದ ಸೋತ ಅನೇಕರಿಗೆ ಗೆಲುವಿನ ಉಡುಗೊರೆ ನೀಡಿದ್ದು ಈ ಮತಕ್ಷೇತ್ರದ ವಿಶೇಷ.

ಕ್ಷೇತ್ರ ಪ್ರತಿನಿಧಿಸಿದ ಶಾಸಕರು
1957 – ಜಟ್ಟೆಪ್ಪ ಲಕ್ಷ್ಮಣ ಕಬಾಡೆ (ಪಕ್ಷೇತರ)
1962 – ಜಟ್ಟೆಪ್ಪ ಲಕ್ಷ್ಮಣ ಕಬಾಡೆ (ಕಾಂಗ್ರೆಸ್)
1967 – ಸಿದ್ಧಾರ್ಥ ಅರಕೇರಿ (ಆರ್‌ಪಿಐ)
1972 – ಜಟ್ಟೆಪ್ಪ ಲಕ್ಷ್ಮಣ ಕಬಾಡೆ (ಎನ್‌ಸಿಓ)
1978 – ಸಿದ್ದಾರ್ಥ ಅರಕೇರಿ (ಜೆಎನ್‌ಪಿ)
1983 – ರಮೇಶ ಜಿಗಜಿಣಗಿ (ಜೆಎನ್‌ಪಿ)
1985 – ರಮೇಶ ಜಿಗಜಿಣಗಿ (ಜೆಎನ್‌ಪಿ)
1989 – ಮನೋಹರ ಐನಾಪೂರ (ಕಾಂಗ್ರೆಸ್)
1994 – ರಮೇಶ ಜಿಗಜಿಣಗಿ (ಜನತಾದಳ)
1998 – ವಿಲಾಸಬಾಬು ಆಲಮೇಲಕರ (ಜನತಾದಳ)
1999 – ಪ್ರೊ.ರಾಜು ಆಲಗೂರ (ಕಾಂಗ್ರೆಸ್)
2004 – ಆರ್.ಕೆ. ರಾಠೋಡ (ಜೆಡಿಎಸ್)
2008 – ವಿಠ್ಠಲ ಕಟಕದೊಂಡ (ಬಿಜೆಪಿ)
2013 – ಪ್ರೊ.ರಾಜು ಆಲಗೂರ (ಕಾಂಗ್ರೆಸ್)
2018 – ಡಾ.ದೇವಾನಂದ ಚವ್ಹಾಣ (ಜೆಡಿಎಸ್)

Latest Indian news

Popular Stories