ವಿಜಯಪುರ: ರಾಜ್ಯ ವಿಧಾನ ಸಭೆ ಚುನಾವಣೆ ಪೂರ್ಣ ಪ್ರಮಾಣದ ತಯಾರಿ ದೃಷ್ಠಿಯಿಂದ ಕಾರ್ಯಕರ್ತರನ್ನು ಅಣಿಗೊಳಿಸಲು ಬೂತ್ ಮಟ್ಟದ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಜ. 21 ರಂದು ರಾಷ್ಟ್ರೀಯ ನಾಯಕ ಜೆ.ಪಿ ನಡ್ಡಾ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9.30 ಕ್ಕೆ ಜ್ಞಾನಯೋಗಾಶ್ರಮದಲ್ಲಿ ದರ್ಶನ ಮುಗಿಸಿ ನಾಗಠಾಣ ಕ್ಷೇತ್ರದಲ್ಲಿ ಮನೆ ಮನೆಗೆ ಭೇಟಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ನಾಗಠಾಣದ ವಾರ್ಡ್ ನಂ. 10 ರಲ್ಲಿ ಫಲಾನುಭವಿಗಳ ಕಾರ್ಯಕ್ರಮ ನಡೆಯಲಿದೆ. ಮತ್ತು ಗೋಡೆ ಬರಹ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಅಶ್ವತ್ಥ ನಾರಾಯಣ, ಸಚಿವ ಗೋವಿಂದ ಕಾರಜೋಳ, ಮಾಜಿ ವಿಪ ಸದಸ್ಯ ಸಿದ್ದರಾಜು ಕೂಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅಂದು ಮಧ್ಯಾಹ್ನ 12 ಕ್ಕೆ ಸಿಂದಗಿಯಲ್ಲಿ ಸುಮಾರು ಐವತ್ತು ಸಾವಿರ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲಾಗುವುದು. ಇಂಡಿ, ನಾಗಠಾಣ, ದೇವರಹಿಪ್ಪರಗಿ ಮತ್ತು ಸಿಂದಗಿ ಕ್ಷೇತ್ರಗಳ ಜನ ಭಾಗವಹಿಸಲಿದ್ದಾರೆ.
ಈಗಾಗಲೇ ಎಲ್ಲ ಹಳ್ಳಿಗಳಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ರಾಜ್ಯದಲ್ಲಿ ಎರಡು ಹಂತದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಈಗಾಗಲೇ ಬೂತ್ ಮಟ್ಟದ ವಿಜಯ ಅಭಿಯಾನ ಹಮ್ಮಿಕೊಳ್ಳಾಗಿದೆ. ಎರಡನೇ ಹಂತದಲ್ಲಿ ಬೂತ್ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಒಂಬತ್ತು ಮಂಡಲಗಳಲ್ಲಿ ಪೂರ್ವಭಾವಿ ಅಭಿಯಾನ ನಡೆಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಬೂತ್ ಗಳಿದ್ದು ಎಲ್ಲ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಕರಪತ್ರ, ಸ್ಟಿಕ್ಕರ್ ಹಂಚಲಾಗುವುದು ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಸಂಪರ್ಕಿಸಲಾಗುವುದು. ಮಿಸ್ ಕಾಲ್ ಮೂಲಕ ಹೊಸ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಜ. 29 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಇದ್ದು ಎಲ್ಲ ಬೂತ್ ಗಳಲ್ಲಿ ಸಾರ್ವಜನಿಕರಿಗೆ ಈ ಕಾರ್ಯಕ್ರಮದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಶಿವರುದ್ರ ಬಾಗಲಕೋಟ, ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ಅಶೋಕ ಅಲ್ಲಾಪುರ, ವಿವೇಕಾನಂದ ಡಬ್ಬಿ, ಕೃಷ್ಣಾ ಗುನ್ಹಾಳಕರ ಮತ್ತಿತರರಿದ್ದರು.