ನಾನು ಲೀಡರ್‌‌ಗಳ ಜೊತೆ ಇಲ್ಲ ಬಡವರ ಜೊತೆ ಇರುವೆ: ಸಂಸದ ಜಿಗಜಿಣಗಿ

ವಿಜಯಪುರ : ಮೊನ್ನೆ ನಡೆದ ಕೆಲವು ಕಿಡಿಗೇಡಿಗಳ ಗಲಾಟೆಯಿಂದಾಗಿ ಮನಸ್ಸಿಗೆ ನೋವಾಗಿದೆ, ಪ್ರಧಾನಿ ಮೋದಿಜಿ ಅವರ ಸಾಧನೆ ಹೇಳುವ ಅವಕಾಶವನ್ನು ಕೆಲವು ಕಿಡಿಗೇಡಿಗಳು ನೀಡಲಿಲ್ಲ, ಆದರೆ ಈ ಘಟನೆಯಿಂದ ನಾನು ಹೆದರಲ್ಲ, ಐ ಡೋಂಟ್ ಕೇರ್, ಪುನ: ಈ ಸಮಾವೇಶ ಸಂಘಟಿಸುವೆ ಎಂದು ಸಂಸದ ರಮೇಶ ಜಿಗಜಿಣಗಿ ಗುಡುಗಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ನಡೆದ ಕಾರ್ಯಕರ್ತರ ಗಲಾಟೆಯಿಂದಾಗಿ ನನ್ನ ಮನಸ್ಸಿಗೆ ನೋವಾಗಿದೆ, ಮೋದಿಜಿ ಅವರ ಸಾಧನೆ ವಿಜಯಪುರ ಜನತೆಗೆ ತಿಳಿಸಬಾರದು ಎಂಬ ದುರುದ್ದೇಶದಿಂದ ಕೆಲವು ಕಿಡಗೇಡಿಗಳು ಆ ಸಮಾವೇಶವನ್ನು ಕೆಡಿಸಿದರು.


ಆದರೆ ನಾನು ಇದಕ್ಕೆ ಹೆದರುವುದಿಲ್ಲ. ಈ ಹಿಂದೆಯೂ ನನಗೆ ವಿರೋಧ ಮಾಡಲಾಗಿದೆ, ನಾನು ಎಂದೂ ಸಹ ಜಾತಿ ರಾಜಕಾರಣ ಮಾಡಿಲ್ಲ, ಜಾತಿ ಬಾಂಧವರನ್ನು ಕಾರಲ್ಲಿ ಕೂರಿಸಿಕೊಂಡು ಓಡಾಡಿಲ್ಲ, ಕೇವಲ ಬಡವರ ಕೆಲಸ ಮಾಡಿದ್ದೇನೆ, ನಾನು ಲೀಡರ್‌‌ಗಳ ಜೊತೆ ಇಲ್ಲ ಬಡವರ ಜೊತೆ ಇರುವೆ ಎಂದರು.


40 ವರ್ಷ ರಾಜಕಾರಣ ಮಾಡಿದ್ದೇನೆ, ನಾನಾಯ್ತು, ನನ್ನ ಕೆಲಸವಾಯ್ತು, ಲಕ್ಷ ಕೋಟಿ ಸನಿಹ ಅನುದಾನ ತಂದಿದ್ದೇನೆ, ಎಲ್ಲಿಯೂ ಭೂಮಿ ಪೂಜೆ ಮಾಡಿಲ್ಲ, ಬಡಜನತೆ ಸೇವೆ ಮಾಡಿದ್ದೇನೆ, ಬಡವರೇ ನನ್ನ ಮತದಾರರು ಎಂದರು.


ರಾಜಿ-ಸಂಧಾನ ಎನ್ನುವ ಪ್ರಶ್ನೆ ಇಲ್ಲ, ಅವರು ಛಂದ ಮಾತನಾಡಿದರೆ ಛಂದ ಮಾತನಾಡುವೆ, ಕೊಳಕು ಮಾತನಾಡಿದರೆ ಕೊಳಕು ಮಾತನಾಡಬೇಕಾಗುತ್ತದೆ ಎಂದು ಯತ್ನಾಳ ವಿರುದ್ಧ ಗುಡುಗಿದರು.
ಪತ್ರಿಕಾಗೋಷ್ಠಿಯಲ್ಲಿ ಅನುಪಸ್ಥಿತಿಯಾಗಿದ್ದರೂ ಸಹ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಫೋನ್ ಮೂಲಕ ಪತ್ರಿಕಾಗೋಷ್ಠಿಗೆ ಸಂಪರ್ಕ ಸಾಧಿಸಿ ತಮ್ಮ ನಿಲುವು ವ್ಯಕ್ತಪಡಿಸಿದರು. ನಗರ ಶಾಸಕರು ಈ ರೀತಿ ರಾಜಕಾರಣ ನಿಲ್ಲಿಸಬೇಕು, ನಾವೆಲ್ಲರೂ ಒಂದಾಗಿ ಪಕ್ಷ ಕಟ್ಟೋಣ, ಇಂದ್ರ ಚಂದ್ರ ಎಂದು ತಿಳಿದುಕೊಳ್ಳುವುದು ತಪ್ಪು, ನೀವು ಈ ಹಿಂದೆ ಸೋತಿದ್ದೀರಿ ಎನ್ನುವುದು ನೆನಪಿರಲಿ ಎಂದರು.

Latest Indian news

Popular Stories