ನಾಳೆ ಬಬಲೇಶ್ವರದಲ್ಲಿ ಪ್ರಜಾಧ್ವನಿ ಯಾತ್ರೆ: 75 ಸಾವಿರ ಜನ ಸೇರುವ ನಿರೀಕ್ಷೆ

ವಿಜಯಪುರ: ಬಬಲೇಶ್ವರದಲ್ಲಿ ನಾಳೆ ಗುರುವಾರ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆಯಲಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಬಬಲೇಶ್ವರ ಕ್ಷೇತ್ರದ 75 ಸಾವಿರ ಜನರು ಪಾಲ್ಗೊಳ್ಳುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆ ರಣಕಹಳೆ ಮೊಳಗಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ತಿಳಿಸಿದ್ದಾರೆ.

ಬಬಲೇಶ್ವರ ಬಸ್‍ಸ್ಟ್ಯಾಂಡ್ ಹತ್ತಿರದ ನಿಡೋಣಿ ರಸ್ತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 50 ಸಾವಿರ ಜನ ಕುಳಿತುಕೊಂಡು ನೋಡುವ ಬೃಹತ್ ಪೆಂಡಾಲ್ ನಿರ್ಮಿಸಲಾಗುತ್ತಿದೆ. ವೇದಿಕೆಯಲ್ಲಿ ಹಾಗೂ ದೂರದಲ್ಲಿ 9 ಬೃಹತ್ ಎಲ್.ಇ.ಡಿ ಪರದೆಗಳನ್ನು ಹಾಕುತ್ತಿದ್ದು, ದೂರದಿಂದ ನಿಂತುಕೊಂಡು ಕಾರ್ಯಕ್ರಮದ ವಿಕ್ಷೀಸಬಹುದು. ಎದುರಿಗಿನ ಗುರುಪಾದೇಶ್ವರ ಮಠದ ರಸ್ತೆಯಲ್ಲಿ ಊಟದ ವ್ಯವಸ್ಥೆಗೆ ಶಾಮಿಯಾನ ಹಾಕಲಾಗುತ್ತಿದ್ದು, ಎಲ್ಲರಿಗೂ ಬಬಲೇಶ್ವರದ ಬಾಣಸಿಗ ಶಾಂತುಗೌಡ ಬಿರಾದಾರ ವಿಶೇಷ ಭಕ್ಷವಾದ ಬೆಲ್ಲದ ಸಿಹಿ ಮಾದಲಿಯನ್ನು ತಯಾರಿಸಲಾಗುತ್ತಿದ್ದು, ಜೊತೆಗೆ ಅನ್ನ, ಸಾಂಬಾರ್ ಬಡಿಸಲಾಗುವುದು.

ಯುವಮುಖಂಡ ಶಿವರಾಜ ಕೋಟ್ಯಾಳ ನೇತೃತ್ವದಲ್ಲಿ 30 ಯುವಕ, ಯುವತಿಯರ ತಂಡ “ಹನಿ ನೀರು ಕೊಡುವಂತೆ ಕೇಳಿದರು ಜನರು, ಹೊಳೆಯನ್ನೇ ತಂದರು ನಮ್ಮ ಎಂ.ಬಿ.ಪಾಟೀಲರು” ಎಂಬ ಗೀತೆಯ ಸಮೂಹ ನೃತ್ಯದ ಪ್ರದರ್ಶನ ವೇದಿಕೆಯಲ್ಲಿ ಜರುಗಲಿದೆ.

ತಿಕೋಟಾದ ಉದ್ಯಮಿ, ಕಾಂಗ್ರೆಸ್ ಮುಖಂಡ ಹಾಜಿಲಾಲ್ ಬಾಗವಾನ ಅವರು ತಿಕೋಟಾ ಭಾಗದ ರೈತರು ಬೆಳೆದ ಒಣದ್ರಾಕ್ಷಿಯಿಂದ ತಯಾರಿಸಿದ ಹಾರಗಳಿಂದ ಸಿದ್ದರಾಮಯ್ಯನವರನ್ನು ಹಾಗೂ ಎಂ.ಬಿ.ಪಾಟೀಲರನ್ನು ಸ್ವಾಗತಿಸಲಿದ್ದಾರೆ.

ಸಮೀಪದ ಹಳ್ಳಿಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಯುವಮುಖಂಡ ಹಣಮಂತ ಬಡಚಿ ನೇತೃತ್ವದ ಕಾರ್ಯಕರ್ತರ ತಂಡ ಬಬಲೇಶ್ವರ ಸುತ್ತಲಿನ ಪ್ರತಿ ಹಳ್ಳಿಗಳಿಗೂ ಸಮೂಹ ಸಾರಿಗೆ ವ್ಯವಸ್ಥೆ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಬಬಲೇಶ್ವರವನ್ನು ಸಂಪರ್ಕಿಸುವ ವಿಜಯಪುರ ರಸ್ತೆ, ಕಾಖಂಡಕಿ ರಸ್ತೆ, ಜಮಖಂಡಿ ರಸ್ತೆ, ನಿಡೋಣಿ ರಸ್ತೆಗಳಲ್ಲಿಯೇ ಊರ ಹೊರವಲಯದಲ್ಲಿ ಪಾರ್ಕಿಂಗ್ ಮಾಡಿ, ನಡೆದುಕೊಂಡು ಕಾರ್ಯಕ್ರಮ ಸ್ಥಳಕ್ಕೆ ಬರಬೇಕು. ಸಮೀಪದ ಹಳ್ಳಿಯ ಟ್ರಿಪ್ ಮಾಡುವ ವಾಹನಗಳು ಮಾತ್ರ ಬಸ್‍ಸ್ಟ್ಯಾಂಡ್ ಹತ್ತಿರ ಬರಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ತಿಳಿಸಿದ್ದಾರೆ.

Latest Indian news

Popular Stories