ಪ್ಲಾನ್-ಬಿ ಸಿದ್ಧವಾಗಿರಲಿ: ಅಧಿಕಾರಿಗಳಿಗೆ ಸಚಿವ ಎಂ ಬಿ ಪಾಟೀಲ ಸಲಹೆ

ವಿಜಯಪುರ : ಮಳೆ ಸುರಿಯಲಿ ಎನ್ನುವುದು ನಮ್ಮೆಲ್ಲರ ಆಶಯ ಕೂಡಾ ಹೌದು, ಆದರೆ ಮಳೆ ಬಾರದೇ ಮುಂಗಾರು ಸಂಪೂರ್ಣವಾಗಿ ವಿಫಲವಾದರೆ ಅದಕ್ಕೂ ಅಧಿಕಾರಿಗಳು ಸಿದ್ಧವಾಗಿರಬೇಕು, ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪ್ಲಾನ್ -ಬಿ ಸಿದ್ಧವಾಗಿರಿಸಿಕೊಳ್ಳಬೇಕು ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಸೂಚಿಸಿದರು.
ವಿಜಯಪುರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ ಬಾರದೇ ಹೋದ ಪಕ್ಷದಲ್ಲಿ ಹಿಂಗಾರು ಹಂಗಾಮಿನಲ್ಲಿ ಸೂರ್ಯಪಾನ, ಕಡಲೆ, ಗೋದಿ, ಜೋಳ ಮೊದಲಾದ ಬೆಳೆ ಬೆಳೆಯುವ ನಿಟ್ಟಿನಲ್ಲಿ ಪೂರಕವಾದ ಸಿದ್ಧತೆ ನಡೆಸಬೇಕು, ಮಳೆ ಬಂದೇ ಇಲ್ಲ ಎಂದು ತಿಳಿದುಕೊಂಡು ಈ ಬಗ್ಗೆ ಕಾರ್ಯಯೋಜನೆ ಸಿದ್ಧವಾಗಿರಿಸಿಕೊಳ್ಳಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಈ ವಿಷಯದಲ್ಲಿ ಗಂಭೀರವಾಗದೇ ಹೋದರೆ ಕೃಷಿ ಇಲಾಖೆಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಾಕೀತು ಮಾಡಿದರು.
ಹಿಂಗಾರು ಹಂಗಾಮಿನಲ್ಲಿ ಯಾವ ರೀತಿ ಬೆಳೆ ಬೆಳೆಯಬೇಕು ಎಂಬಿತ್ಯಾದಿ ಚರ್ಚೆಗೆ ಜಿಲ್ಲಾಧಿಕಾರಿ, ಕೃಷಿ ಇಲಾಖೆ ಹಾಗು ಕೃಷಿ ಮಹಾವಿದ್ಯಾಲಯದ ಅಧಿಕಾರಿಗಳು ಒಂದೆಡೆ ಕುಳಿತು ಕಾರ್ಯಯೋಜನೆ ರೂಪಿಸಿ ಎಂದು ಸೂಚಿಸಿದರು.
ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಲ್ಲಿ ವೈಜ್ಞಾನಿಕವಾಗಿ ಮಾಡಬೇಕು, ಒಂದೇ ಕಡೆ ಅದನ್ನು ಕೇಂದ್ರಿಕರಿಸುವುದರಿಂದ ರೈತರು ದೊಡ್ಡ ಮಟ್ಟದಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ, ಹೀಗಾಗಿ ರೈತ ಸಂಪರ್ಕ ಕೇಂದ್ರಗಳ ಜೊತೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮೊದಲಾದವುಗಳಲ್ಲಿಯೂ ಸಹ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಈ ಸಮಸ್ಯೆಯನ್ನು ಸಭೆಯ ಗಮನಕ್ಕೆ ತಂದ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಕಲಕೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಹೆಚ್ಚುವರಿಯಾಗಿ ವಿತರಣಾ ಕೇಂದ್ರ ಆರಂಭಿಸಿ ಎಂದು ಸಲಹೆ ನೀಡಿದರು.

ಒಣ ದ್ರಾಕ್ಷಿ ಬೆಲೆ ಧೀಡಿರ್ ಕುಸಿತ ಕಂಡಿರುವ ವಿಷಯದ ಕುರಿತು ಸಚಿವ ಎಂ.ಬಿ. ಪಾಟೀಲ ಸುದೀರ್ಘವಾಗಿ ಮಾಹಿತಿ ಸಂಗ್ರಹಿಸಿದರು. ಬೆಲೆ ಕುಸಿತದ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಿ ಮಟ್ಟದಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಸಹಾಯವಾಗುವ ನಿಟ್ಟಿನಲ್ಲಿ ಅಗತ್ಯ ಹೆಜ್ಜೆ ಇರಿಸಲಾಗುವುದು, ಕೋಲ್ಡ್ ಸ್ಟೋರೇಜ್ ನಿರ್ಮಾಣ, ಕೊಬ್ಬರಿ ಮಾದರಿಯಲ್ಲಿ ಬೆಂಬಲ ಬೆಲೆ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿಯೂ ಸಹ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ತಾಸಗಾಂವ ಗ್ರಾಮದಲ್ಲಿ ಒಣದ್ರಾಕ್ಷಿ ಸಂಗ್ರಹ ಹಾಗೂ ಮಾರಾಟ ಸಹ ನಡೆಯುತ್ತಿದೆ, ಆದರೆ ವಿಜಯಪುರದಲ್ಲಿ ಒಣದ್ರಾಕ್ಷಿ ಮಾರಾಟ ಕೆಲವೇ ಜನರ ಕಪಿಮುಷ್ಠಿಯಲ್ಲಿದೆ, ಹೀಗಾಗಿ ತಾಸಗಾಂವ ಮಾದರಿಯನ್ನು ಅನುಸರಿಸಿ ವಿಜಯಪುರದಲ್ಲಿ ದ್ರಾಕ್ಷಿ ಬೆಳೆ ಮಾರಾಟಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪಾಟೀಲ ತಿಳಿಸಿದರು.


ಇದಕ್ಕೆ ವಿವರಣೆ ನೀಡಿದ ತೋಟಗಾರಿಕಾ ಇಲಾಖೆ ಉಪನಿರ್ದೇಶಕರು, ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ದ್ರಾಕ್ಷಿ ಬೆಳೆ ಮೂರುವರೆ ಸಾವಿರ ಹೆಕ್ಟೇರ್ ಪ್ರದೇಶ ಹೆಚ್ಚಳವಾಗಿದೆ, ರಾಜ್ಯದಲ್ಲಿ ಶೇ.75 ರಷ್ಟು ದ್ರಾಕ್ಷಿ ವಿಜಯಪುರದಲ್ಲಿಯೇ ಬೆಳೆಯಲಾಗುತ್ತಿದ್ದು, ರೈತರು ಒಣದ್ರಾಕ್ಷಿ ಮಾರಾಟದ ಮೇಲೆ ಹೆಚ್ಚಾಗಿ ಅವಲಂಬನೆಯಾಗಿದ್ದಾರೆ, ಆದರೆ ಕೋಲ್ಡ್ ಸ್ಟೋರೇಜ್ ಕೊರತೆಯಿಂದಾಗಿ ಸಂಗ್ರಹಣೆ ಸಾಧ್ಯವಾಗುತ್ತಿಲ್ಲ, ಪ್ರಸ್ತುತ 1.20 ಸಾವಿರ ಮೆಟ್ರಿಕ್ ಟನ್ ಒಣದ್ರಾಕ್ಷಿ ಉತ್ಪಾದನೆಯಾಗುತ್ತಿದೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲರು, ಜಿಲ್ಲೆಯಲ್ಲಿ ಕಬ್ಬಿನ ಪರಿಸ್ಥಿತಿ ಏನು? ನಿರಿಲ್ಲದೇ ಕಬ್ಬು ಒಣಗುತ್ತಿದೆಯೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಕಬ್ಬು ಬೆಳೆ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದರೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಹ ಕಬ್ಬು ಬೆಳೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಮಜಾಯಿಷಿ ನೀಡಿದರು.


ಇದರಿಂದ ಅಸಮಾಧಾನಗೊಂಡ ಸಚಿವ ಪಾಟೀಲ, ಈ ಬಗ್ಗೆ ಯಾರಿಗೂ ಗೊತ್ತಿಲ್ಲ, ಇದನ್ನು ಯಾರು ಮಾನಿಟರ್ ಮಾಡುವುದಿಲ್ಲ ಎಂದರೆ ಹೇಗೆ? ಎಂದರು.


ಆಗ ಉತ್ತರ ನೀಡಲು ಮುಂದಾದ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ಅವರು, ಜಿಲ್ಲೆಯಲ್ಲಿ 82 ಸಾವಿರ ಹೆಕ್ಟೇರ್ ಕಬ್ಬು ಬೆಳೆಯಲಾಗುತ್ತಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಪಾಟೀಲ, ಜಿಲ್ಲೆಯಲ್ಲಿ 2 ರಿಂದ 3 ಲಕ್ಷ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ, ಈ ಬಗ್ಗೆ ಒಬ್ಬರು ಅಪಡೇಟ್ ಮಾಹಿತಿ ಇರಿಸಿಲ್ಲ, ಒಬ್ಬರಿಗೊಬ್ಬರು ಹೆಗಲಿಗೆ ಹಾಕಿದರೆ ಹೇಗೆ? ಯಾವ ಡಾಟಾ ಸಹ ಸರಿಯಾಗಿಲ್ಲ, ಇದು ಸರಿ ಅನಿಸಲ್ಲ ಎಂದರು.

Latest Indian news

Popular Stories