ವಿಜಯಪುರ : ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿ ಕಾರ್ಯನಿರ್ವಹಿಸುವ ಸಂಸ್ಥೆ, ಕಾರ್ಖಾನೆಯ ಸಿಬ್ಬಂದಿಗಳು ತಂಡೋಪತಂಡವಾಗಿ ಬಂದು ಮತದಾನ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಭೂತನಾಳದಲ್ಲಿ ಚಿಂಚೋಳಿಯಿಂದ ಬಂದ ತಂಡವನ್ನು ತಡೆದು ನಿಲ್ಲಿಸಿ ಪೊಲೀಸರ ಸುಪರ್ದಿಗೆ ಒಪ್ಪಿಸಿದ ಘಟನೆ ನಡೆದಿದೆ.
ಮುಶ್ರೀಫ್ ಹಾಗೂ ಬೆಂಬಲಿಗರು ಭೂತನಾಳ ರಸ್ತೆಯಲ್ಲಿ ಚಿಂಚೋಳಿ ಭಾಗದಿಂದ ಬಂದ ತಂಡವನ್ನು ತಡೆದು ಪೊಲೀಸ್ ಹಾಗೂ ಚುನಾವಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಚಿಂಚೋಳಿ ಭಾಗದಿಂದ ಸಾವಿರಾರು ಮತದಾರರನ್ನು ಬಿಜೆಪಿ ಅಭ್ಯರ್ಥಿ ಕರೆ ತಂದಿದ್ದಾರೆ. ಅವರ ಅಧ್ಯಕ್ಷತೆಯ ಶಿಕ್ಷಣ ಸಂಸ್ಥೆಯಲ್ಲಿ ಅನೇಕ ನೌಕರರು ಉಳಿದುಕೊಂಡಿದ್ದಾರೆ. ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿದೆ. ಸಾವಿರಾರು ಜನ ಈಗಾಗಲೇ ನಗರ ಪ್ರವೇಶಿಸಿದ್ದಾರೆ, ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು, ಈ ರೀತಿ ಚುನಾವಣೆ ಅಕ್ರಮ ಎಸಗಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.