ಮುಶ್ರಿಫ್‌ಗೆ ಮತ ಹಾಕಿದರೆ ನನಗೆ ಮತ ಹಾಕಿದಂತೆ: ಎಂ.ಬಿ.ಪಾಟೀಲ

ವಿಜಯಪುರ: ಕಾಂಗ್ರೆಸ್ ಅಭ್ಯರ್ಥಿ ಹಮೀದ್ ಮುಶ್ರಿಫ್ ಅವರಿಗೆ ಮತ ಹಾಕಿದರೆ ಅದು ನನಗೆ ಮತ ಹಾಕಿದಂತೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದರು.

ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯ ನಾನಾ ಕಡೆ ಪ್ರಚಾರ ಕೈಗೊಂಡ ಅವರು ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ ಮುಶ್ರಿಫ್ ಮತಯಾಚಿಸಿ ಮಾತನಾಡಿದರು.

ತೊರವಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಯಾವಾಗಲು ಸಾಮಾಜಿಕ ನ್ಯಾಯದಡಿ ಕೆಲಸ ಮಾಡುತ್ತಿದೆ. ಎಲ್ಲ ಸಮುದಾಯದ ಜನರಿಗೆ ಟಿಕೆಟ್ ಹಂಚುವಾಗ ಆದ್ಯತೆ ನೀಡುತ್ತಿದೆ. ವಿಜಯಪುರ ನಗರ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ ಮುಶ್ರಿಫ್ ಅವರಿಗೆ ಮತ ಹಾಕಿದರೆ ಆ ಮತಗಳು ಮೊದಲು ನನಗೆ ಹಾಕಿದಂತೆ ನಂತರ ಪ್ರೊ.ರಾಜು ಆಲಗೂರ ಮತ್ತು ಹಮೀದ ಮುಶ್ರಿಫ್ ಅವರಿಗೆ ಹಾಕಿದಂತೆ ಎಂದು ಹೇಳಿದರು.

ಕಾಂಗ್ರೆಸ್ ಜನರ ಕಲ್ಯಾಣಕ್ಕಾಗಿ ನಾನಾ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದರೆ ಬಿಜೆಪಿ ಹಿಜಾಬ, ಹಲಾಲ್, ಆಜಾನ ನಂತಹ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸುತ್ತ ಭಾವನೆಗಳನ್ನು ಕೆರಳಿಸುತ್ತಿದೆ. ಜನ ವಿರೋಧಿ, ರೈತ ವಿರೋಧಿ ಮತ್ತು ದಲಿತ ವಿರೋಧಿ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ.ರಾಜು ಆಲಗೂರ ಮಾತನಾಡಿ ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ರೈತರು, ಮಹಿಳೆಯರು, ದಿನದಲಿತರು, ಯುವಕರು ಮತ್ತು ಮಕ್ಕಳ ಕಲ್ಯಾಣಕ್ಕೆ ಯೋಜನೆ ರೂಪಿಸದ ಬಿಜೆಪಿ ಸರಕಾರ ಕಾಲಹರಣ ಮಾಡುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ ಮುಶ್ರಿಫ್ ಮಾತನಾಡಿ ಈ ಬಾರಿ ತಾವೆಲ್ಲರೂ ಬಹುಮತದಿಂದ ನನ್ನನ್ನು ಆರಿಸಿ ತರಬೇಕಾಗಿ ಎಂದು ಹೇಳಿದರು.

ವಿಜಯಪುರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಎಂ. ಬಿ. ಪಾಟೀಲ ಅವರು, ಕಳೆದ ಬಾರಿ ಹಲವಾರು ಮತಗಟ್ಟೆಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದ್ದರಿಂದ ಮುಶ್ರಿಫ್ ಅವರು ಸೋಲಬೇಕಾಯಿತು. ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಬೇಕು. ಕಳೆದ ಬಾರಿ ಹಮೀದ ಮುಶ್ರಿಫ್ ಸೋತರೂ ಮನೆಯಲ್ಲಿ ಕೂಡದೇ ಐದು ವರ್ಷ ಜನಪರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಜನಸಾಮಾನ್ಯರ ಜೊತೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತ ಜನರೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ಅವರು ಯಾವುದೇ ಜಾತಿ, ಧರ್ಮಗಳಿಗೆ ಸೀಮಿತರಾಗಿಲ್ಲ. ಎಲ್ಲ ಜಾತಿ, ಸಮುದಾಯಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಅವರಿಗೆ ಒಂದು ಅವಕಾಶ ಕೊಡಬೇಕು. ಎಲ್ಲ ಧರ್ಮಿಯವರು ಅವರಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು. ವಿಜಯಪುರ ಜಿಲ್ಲೆ ಬಸವಣ್ಣನವರ ನಾಡು. ಜಾತ್ಯತೀತವಾಗಿ ಇವ ನಮ್ಮವ ಎಂದು ಹೇಳಿದರು.

ಯತ್ನಾಳ ಅವರು ರಾಹುಲ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಯಡಿಯೂರಪ್ಪ, ಪ್ರಲ್ಹಾದ ಜೋಶಿ ಸೇರಿದಂತೆ ತಮ್ಮ ಪಕ್ಷದ ನಾಯಕರ ವಿರುದ್ಧವೂ ಮಾತನಾಡಿದ್ದಾರೆ. ಸಿ.ಎಂ ಸ್ಥಾನ ರೂ.2500 ಕೋಟಿ ಮಾರಾಟಕ್ಕಿದೆ ಎಂದು ಹೇಳಿದ್ದರು. ಕಳೆದ ಐದು ವರ್ಷ ಇವರು ಏನು ಮಾತನಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಇವರನ್ನು ಗಂಭಿರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಮೀದ ಮುಶ್ರಿಫ್, ಪ್ರೊ.ರಾಜು ಆಲಗೂರ, ಡಾ.ಗಂಗಾಧರ ಸಂಬಣ್ಣಿ, ಸಂಗಮೇಶ ಬಬಲೇಶ್ವರ, ಕಾಂತಾ ನಾಯಕ, ರಾಕೇಶ ಕಲ್ಲೂರ, ಟಪಾಲ ಇಂಜನಿಯರ್, ಅಬ್ದುಲರಜಾಕ ಹೊರ್ತಿ, ಸುರೇಶ ಗೊಣಸಗಿ, ವೈಜನಾಥ ಕರ್ಪೂರಮಠ, ಸಜ್ಜಾದೆಪೀರಾ ಮುಶ್ರಿಫ್, ಅಡಿವೆಪ್ಪ ಸಾಲಗಲ್, ಜಮೀರ ಬಕ್ಷಿ, ಆರತಿ ಶಹಾಪುರ, ಸಿ.ಆರ್.ತೊರವಿ, ಚಂದ್ರಕಾಂತ ಶೆಟ್ಟಿ, ನಬಿಲಾಲ ಶಾನವಾಲೆ, ಆಶಿಫ ಶಾನವಾಲೆ, ಸುರೇಶಗೌಡ ಪಾಟೀಲ, ಆಜಾದ ಪಟೇಲ ಮುಂತಾದವರು ಉಪಸ್ಥಿತರಿದ್ದರು.

Latest Indian news

Popular Stories