ವಿಜಯಪುರ: ಮೊಹರಂ ಭಾವೈಕತೆಯ ಹಬ್ಬವಾಗಿದ್ದು, ಎಲ್ಲರೂ ಒಗ್ಗೂಡಿ ಆಚರಿಸುತ್ತಿರುವುದು ಕೋಮು ಸೌಹಾರ್ದತೆ ಸಾಕ್ಷಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದಲ್ಲಿ ಮೊಹರಂ ಹಬ್ಬದ ಅಂಗವಾಗಿ ಲಾಲಸಾಹೇಬ ದೇವರ ದರ್ಶನ ಮಾಡಿದ ಬಳಿಕ ಅವರು ಮಾತನಾಡಿದರು.
ಮೊಹರಂ ಭಾವೈಕತೆಯ ಸಂಕೇತವಾಗಿದೆ. ದೇವರು ಜಿಲ್ಲೆ, ನಾಡು ಹಾಗೂ ದೇಶಕ್ಕೆ ಒಳಿತನ್ನು ಮಾಡಲಿ. ಎಲ್ಲಡೆ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ದಿ ನೆಲಸಲಿ ಎಂದು ಪ್ರಾರ್ಥಿಸುತ್ತೆನೆ. ತಿಗಣಿಬಿದರಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಮೊಹರಂ ಆಚರಣೆ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ. ಲಾಲಸಾಹೇಬ ದೇವರು ಗ್ರಾಮಸ್ಥರಿಗೆ ಉತ್ತಮ ಆಯುಷ್ಯ, ಆರೋಗ್ಯ ನೀಡಲಿ ಎಂದು ಶುಭ ಕೋರಿದರು.
ತಾವೆಲ್ಲರು ನನಗೆ ಆಶೀರ್ವಾದ ಮಾಡಿರುವುದರಿಂದ 2013- 2018ರ ಅವಧಿಯಲ್ಲಿ ಈ ಭಾಗದಲ್ಲಿ ನೀರಾವರಿ ಮಾಡಲು ಅನುಕೂಲವಾಗಿದೆ. ಈಗ ತಮ್ಮೆಲರ ಆಶೀರ್ವಾದದಿಂದ ಮತ್ತೊಮ್ಮೆ ಸಚಿವನಾಗಿದ್ದು ಶ್ರದ್ಧೆ ಮತ್ತು ಬದ್ದತೆಯಿಂದ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಆಧ್ಯಕ್ಷ ವಿ.ಎಸ್.ಪಾಟೀಲ, ತಿಗಣಿಬಿದರಿ ಗ್ರಾಮದ ಮುಖಂಡರಾದ ಮಹೇಶ ಮಾಳಿ, ಬುಡ್ಡಾಸಾಬ ದಳವಾಯಿ, ಲಾಲಸಾಬ ಕಮಟೆ, ರಾಜು ಗಲಗಲಿ, ಶಂಕರಗೌಡ ಹಲಗಣಿ, ಲಕ್ಷ್ಮಣ ಅಡಳ್ಳಿ, ಶಿವಗೊಂಡ ಅಥಣಿ, ಗ್ರಾಮದ ಹಿರಿಯರು, ಯುವಕರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.