ರಾಜ್ಯ ಸರ್ಕಾರಿ ನೌಕರರ ಪ್ರತಿಭಟನೆ: ಬಿಕೋ ಎನ್ನುತ್ತಿರುವ ಸರ್ಕಾರಿ ಕಚೇರಿಗಳು

ವಿಜಯಪುರ : ವೇತನ ಪರಿಷ್ಕರಣೆ, ಹೊಸ ಪಿಂಚಣಿ ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ನೌಕರರು ಕರ್ತವ್ಯದಿಂದ ದೂರ ಉಳಿದು ಮುಷ್ಕರ ನಡೆಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನೀಡಿದ್ದ ಕರೆಗೆ ವಿಜಯಪುರ ಜಿಲ್ಲೆಯ ಸರ್ಕಾರಿ ನೌಕರರಿಂದ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ನೌಕರರು ಕಚೇರಿಗೆ ಹಾಜರಾಗಲಿಲ್ಲ. ಕೇಂದ್ರ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಎಂದಿನAತೆ ಕಾರ್ಯನಿರ್ವಹಿಸಿದವು. ಬಸ್ ಸಂಚಾರವೂ ಎಂದಿನAತೆ ಇತ್ತು. ಜನ ಸಂಚಾರ ಯಥಾ ಪ್ರಕಾರ ಇದ್ದ ಕಾರಣ ಜನಜೀವನ ಸಹಜವಾಗಿತ್ತು.


ಆದರೆ ಸದಾ ಜನರಿಂದ ಗೀಜಗುಡುತ್ತಿದ್ದ ಕಂದಾಯ ಇಲಾಖೆ, ತಹಶೀಲ್ದಾರ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ ಕಚೇರಿಗಳು ಇಂದು ಜನರಿಲ್ಲದೇ, ಅಧಿಕಾರಿ, ಸಿಬ್ಬಂದಿಗಳಿಲ್ಲದೇ ಬಿಕೋ ಎನ್ನುತ್ತಿರುವ ದೃಶ್ಯ ಗೋಚರಿಸಿತು.


ಜಿಲ್ಲಾ ಆಸ್ಪತ್ರೆ, ಎಲ್ಲ ತಾಲ್ಲೂಕು ಆಸ್ಪತ್ರೆಗಳು, ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯರು, ಸಿಬ್ಬಂದಿ, ನರ್ಸ್ಗಳು ಸಹ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿAದ ರೋಗಿಗಳು ಚಿಕಿತ್ಸೆ ಲಭಿಸಿದೇ ತೊಂದರೆ ಅನುಭವಿಸಿದರು. ತುರ್ತು ಸೇವೆಗಳಿಗೆ ಮಾತ್ರ ಅವಕಾಶವಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಇಲ್ಲದ ಕಾರಣ ಬಹುತೇಕರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ್ದರು. ಕೆಲವು ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿ ಮಾನವೀಯತೆ ಮೆರೆಯುವ ಮೂಲಕ ಮುಷ್ಕರದ ಜೊತೆಗೆ ಮಾನವೀಯತೆಯ ಕರ್ತವ್ಯವನ್ನು ನಿಭಾಯಿಸಿದ್ದು ವಿಶೇಷವಾಗಿತ್ತು.


ಶಿಕ್ಷಕರು, ಉಪನ್ಯಾಸಕರು ಸಹ ಮುಷ್ಕರದಲ್ಲಿ ಭಾಗವಹಿಸಿದ್ದ ಕಾರಣ ಸರ್ಕಾರಿ ಶಾಲಾ, ಕಾಲೇಜುಗಳಿಗೆ ಬೀಗ ಹಾಕಲಾಗಿತ್ತು. ವಿದ್ಯಾರ್ಥಿಗಳಿಗೆ ಶಿಕ್ಷಕರು ಬುಧವಾರ ಶಾಲೆಗೆ ಬರದಂತೆ ತಿಳಿಸಿದ್ದ ಕಾರಣ ಮಕ್ಕಳು ಶಾಲೆಯತ್ತ ಮುಖ ಮಾಡಿರಲಿಲ್ಲ. ಎಸ್‌ಎಸ್‌ಎಲ್‌ಸಿ ಪೂರ್ವಭಾವಿ ಪರೀಕ್ಷೆಗಳು ಸಹ ನಡೆಯಲಿಲ್ಲ


ಅದೇ ತೆರನಾಗಿ ಜಿಲ್ಲೆಯಾದ್ಯಂತ ಬುಧವಾರ ಪ್ರಥಮ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಯಬೇಕಾಗಿತ್ತು. ಆದರೆ, ಉಪನ್ಯಾಸಕರ ಮುಷ್ಕರದಿಂದ ಪರೀಕ್ಷೆ ನಡೆಯಲಿಲ್ಲ. ಬಹುತೇಕ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಪರೀಕ್ಷೆ ಬರೆಯಲಾಗದೇ ಮರಳಿದರು. ಮುಷ್ಕರದ ಹಿನ್ನೆಯಲ್ಲಿ ಪರೀಕ್ಷೆ ನಡೆದಿಲ್ಲ, ಮಾರ್ಚ್ 4ಕ್ಕೆ ಇಂಗ್ಲಿಷ್ ಪರೀಕ್ಷೆ ಮುಂದೂಡಲಾಗಿದೆ. ಉಳಿದಂತೆ ಪೂರ್ವ ನಿಗದಿತ ವೇಳಾಪಟ್ಟಿಗೆ ಅನುಗುಣವಾಗಿ ಪರೀಕ್ಷೆಗಳು ನಡೆಯಲಿವೆ ಎಂದು ಹೇಳಿದರು.


ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳ ಪದಾಧಿಕಾರಿಗಳು ನಗರದಲ್ಲಿ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ, ಪ್ರತಿಭಟನೆ ನಡೆಸಿ, ಎನ್‌ಪಿಎಸ್ ರದ್ದುಗೊಳಿಸಲು ಹಾಗೂ ವೇತನ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ‘ತೊಲಗಲಿ ತೊಗಲಿ ಎನ್‌ಪಿಎಸ್ ತೊಲಗಲಿ, ಬೇಕೇಬೇಕು ನ್ಯಾಯ ಬೇಕು’, 7ನೇ ವೇತನ ಆಯೋಗ ಜಾರಿಯಾಗಬೇಕು ಎಂದು ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ ಕಚೇರಿ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳ ಎದುರು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಸರ್ಕಾರದ ಜೊತೆ ಮಾತುಕತೆ ಸಫಲವಾದ ಬಳಿಕ ಮಧ್ಯಾಹ್ನದ ನಂತರ ಕೆಲಸಕ್ಕೆ ಹಾಜರಾಗುವಂತೆ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಷಡಕ್ಷರಿ ಅವರು ನೌಕರರಿಗೆ ಕರೆ ನೀಡಿದ್ದರು.ಆದರೆ, ಬಹುತೇಕ ನೌಕರರು ಕಚೇರಿಗೆ ಹಾಜರಾಗದೇ ದಿನಪೂರ್ತಿ ಗೈರಾಗಿದ್ದರು. ಮಧ್ಯಾಹ್ನದ ಬಳಿಕ ಯಾವುದೇ ಕಚೇರಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಲಿಲ್ಲ. ಕೆಲವು ನೌಕರರು ಕಚೇರಿಗೆ ತೆರಳಿ ಹಾಜರಿ ಹಾಕಿ ಮನೆಗೆ ಮರಳಿದರು.

Latest Indian news

Popular Stories