ವಿಜಯಪುರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಫೆ.11 ರಂದು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದ್ದು, ಲೋಕ ಅದಾಲತ್ನಲ್ಲಿ ಒಟ್ಟು 7,124 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ ಅವರು ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಜರುಗಿದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವಿಶೇಷವಾಗಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ವಿಜಯಪುರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಚ್.ಪಿ.ಸಂದೇಶ ಅವರು ಭಾಗವಹಿಸಿದ್ದರು.
ವಿಚ್ಛೇಧನ ಕೋರಿ ಅರ್ಜಿ ಸಲ್ಲಿಸಿದ ದಂಪತಿಗಳಿಗೆ ತಿಳಿವಳಿಕೆ ನೀಡಿ, ಮನವೊಲಿಸುವ ಮೂಲಕ ವಿಚ್ಛೇದನದಿಂದ ಹಿಂದೆ ಸರಿದು, ಪರಸ್ಪರ ಉತ್ತಮ ಸಮನ್ವಯತೆಯಿಂದ ಜೀವನ ಸಾಗಿಸುವಂತೆ ತಿಳಿಹೇಳುವ ಮೂಲಕ ವ್ಯಾಜ್ಯವನ್ನು ಇತ್ಯರ್ಥಪಡಿಸಿದ್ದಲ್ಲದೇ, ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತದಲ್ಲಿ ತೀವ್ರ ಸ್ವರೂಪದಲ್ಲಿ ಗಾಯಗೊಂಡ ವ್ಯಕ್ತಿಗೆ ರಾಜಿ ಸಂಧಾನದ ಮೂಲಕ 22 ಲಕ್ಷ ರೂ.ಗಳ ವಿಮೆ ಕಂಪನಿ ಪರಿಹಾರದ ಚೆಕ್ಕನ್ನು ಜನತಾ ನ್ಯಾಯಾಲಯದಲ್ಲಿ ನೀಡಲಾಯಿತು.
ಲೋಕ ಅದಾಲತ್ನಲ್ಲಿ ಒಟ್ಟು ವಿಚಾರಣೆಗೆ ಬಾಕಿ ಇದ್ದ ಪ್ರಕರಣಗಳಲ್ಲಿ ಆಸ್ತಿ ವಿಭಾಗದ 129, ಮೋಟಾರು ಅಪಘಾತ ಪರಿಹಾರ ಕೋರಿದ್ದ 135 ಒಳಗೊಂಡಂತೆ 7,124 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ವ್ಯಾಜ್ಯ ಪೂರ್ವ 1,02,635 ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಿ, ಕಕ್ಷಿದಾರರಿಗೆ ಬರಬೇಕಾಗಿದ್ದ ಪರಿಹಾರ ಹಾಗೂ ಸರಕಾರಕ್ಕೆ ಜಮೆ ಆಗಬೇಕಾಗಿದ್ದ ದಂಡ ಸೇರಿದಂತೆ 80,56,40,113 ರೂ.ಗಳ ಇತ್ಯರ್ಥಪಡಿಸಲಾಗಿದೆ.
ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಾಜಿ ನಲವಡೆ, ನ್ಯಾಯಿಕ ಸಂಧಾನಕಾರ ಶಿವಾನಂದ ಜೀಪರೆ, ವಕೀಲ ಸಂಧಾನಕಾರ ಪಿ.ಬಿ.ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಈರಣ್ಣ ಚಾಗಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಲೋಕ್ ಅದಾಲತ್ ಕಾರ್ಯಕ್ರಮಕ್ಕೆ ಸಹಕರಿಸಿದ ಜಿಲ್ಲೆಯ ಕಕ್ಷಿದಾರರು, ನ್ಯಾಯವಾದಿಗಳು, ಪೋಲಿಸ್ ಅಧಿಕಾರಿ, ಮಹಾನಗರ ಪಾಲಿಕೆ, ಕಂದಾಯ ಇಲಾಖೆ, ನೀರು ಸರಬರಾಜು ಇಲಾಖೆ, ಕಾರ್ಯಕ್ರಮದ ಜಾಗೃತಿ ಮೂಡಿಸಲು ಸಹಕರಿಸಿದ ಎಲ್ಲ ಮಾಧ್ಯಮದವರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಅಭಿನಂದನೆ ಸಲ್ಲಿಸಿದ್ದಾರೆ.