ವಿಜಯಪುರ : ಬಿಜೆಪಿಯನ್ನು ಕಟ್ಟಿದ ಬಿ.ಬಿ. ಶಿವಪ್ಪ, ನಂತರ ಪಕ್ಷವನ್ನು ಬೇರುಮಟ್ಟದಿಂದ ಕಟ್ಟಿದ ಯಡಿಯೂರಪ್ಪ ಅವರನ್ನು ಅವಧಿ ಪೂರ್ವವಾಗಿ ಅಧಿಕಾರದಿಂದ ಕೆಳಗಿಳಿಸಿದ್ದು ಬಿಜೆಪಿ, ಇದು ಲಿಂಗಾಯತರ ಅವಹೇಳನವಲ್ಲವೇ? ಬಿ.ಎಸ್. ಯಡಿಯೂರಪ್ಪನವರಿಗೆ ಕಣ್ಣೀರು ಹಾಕಿಸಿದ್ದು ಲಿಂಗಾಯತರಿಗೆ ಮಾಡಿದ ಅವಮಾನವಲ್ಲವೇ ಎಂದು ಕಾಂಗ್ರೆಸ್ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತರ ಬಗ್ಗೆ ಬಿಜೆಪಿ ಮೊಸಳೆ ಕಣ್ಣೀರು ಸುರಿಸುತ್ತಿದೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಪ್ರಹ್ಲಾದ ಜೋಶಿ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರತಿಷ್ಠಾಪಿಸಲು ಬಿಜೆಪಿ ಎಲ್ಲ ಕರ್ಯಯೋಜನೆ ರೂಪಿಸಿತ್ತು, ಅನೇಕರು ಜೋಶಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಆದರೆ ಲಿಂಗಾಯತ ಮಠಾಧೀಶರ ವಿರೋಧದಿಂಧಾಗಿ ಹೆದರಿ ಬೊಮ್ಮಾಯಿ ಅವರಿಗೆ ಬಿಜೆಪಿ ಮುಖ್ಯಮಂತ್ರಿ ಹುದ್ದೆ ನೀಡಿತು ಎಂದರು.
ಬೇರೆ ಪಕ್ಷದ ಶಾಸಕರನ್ನು ಸೆಳೆದು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆದರು, ಅಧಿಕಾರಕ್ಕೆ ಬರುವವರೆಗೂ ಅವರನ್ನು ಮುಖ್ಯಮಂತ್ರಿಯಾಗಿಸಿ, ನಂತರ ಅವರನ್ನು ಕೆಳಗಳಿಸಿದ್ದು ಅನ್ಯಾಯವಲ್ಲವೇ? ಕಾರಣವಿಲ್ಲದೇ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಕುರಿತು ಇಲ್ಲಿಯವರೆಗೂ ಬಿಜೆಪಿ ಹೈಕಮಾಂಡ್ ಸ್ಪಷ್ಟೀಕರಣ ನೀಡಿಲ್ಲವೇಕೆ ಎಂದು ಪ್ರಶ್ನಿಸಿದರು. ಕಣ್ಣೀರು ಹಾಕಿದಾಗ ಲಿಂಗಾಯತರಿಗೆ ಅನ್ಯಾಯವಾಗಲಿಲ್ಲವೇ? ಪಕ್ಷ ಕಟ್ಟಿದ ಜಗದೀಶ ಶೆಟ್ಟರ್, ಡಿಸಿಎಂ ಆಗಿದ್ದ ಲಕ್ಷ್ಮಣ ಸವದಿ ಅವರಿಗೆ ಪಕ್ಷ ಬಿಡುವ ವಾತಾವರಣ ನರ್ಮಿಸಿದ್ದು ಲಿಂಗಾಯತರ ಕಡೆಗಣನೆ ಅಲ್ಲವೇ? ಪ್ರಹ್ಲಾದ ಜೋಶಿ ಅವರಿಗೆ ಪಟ್ಟ ಕಟ್ಟುವ ಉದ್ದೇಶದಿಂದ ಲಿಂಗಾಯತರನ್ನು ಬಿಜೆಪಿ ಕಡೆಗಣಿಸುತ್ತಿದೆ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೇಲೆ ಬಿಜೆಪಿ ನಾಯಕರು ಲಿಂಗಾಯತ ವಿರೋಧಿ ಎಂದು ಟೀಕಾಸ್ತ್ರಗಳ ಪ್ರಹಾರ ಮಾಡುತ್ತಿದ್ದಾರೆ, ಸಿದ್ಧರಾಮಯ್ಯ ಅವರು ಬಸವಣ್ಣನವರ ಆದ್ಯ ಭಕ್ತರು, ಬಸವ ತತ್ವದ ಮೇಲೆ ಆಡಳಿತ ನಡೆಸಿದ ಮಹಾನ್ ನಾಯಕ ಎಂದರು.
ಲಿಂಗಾಯತರನ್ನು ಕಡೆಗಣಿಸಿದ್ದು ಬಿಜೆಪಿ ಎಂದು ಘಂಟಾಘೋಷವಾಗಿ ಹೇಳಬಲ್ಲೆ, ಆದರೆ ಕಾಂಗ್ರೆಸ್ ಪಕ್ಷ ಲಿಂಗಾಯತರನ್ನು ಅತ್ಯಂತ ಗೌರವದಿಂದ ಕಂಡಿದೆ, ಅಧಿಕಾರ ನೀಡಿ ಗೌರವಿಸಿದೆ. ಕಾಂಗ್ರೆಸ್ ಕಟ್ಟುವಲ್ಲಿ ಲಿಂಗಾಯತ, ಒಕ್ಕಲಿಗ, ಅಲ್ಪಸಂಖ್ಯಾತ, ದಲಿತರ ಒಕ್ಕಟ್ಟಿನ ಹೋರಾಟವಿದೆ, ಲಿಂಗಾಯತರ ಸಹಭಾಗಿತ್ವ ಪಕ್ಷದಲ್ಲಿ ಪ್ರಮುಖವಾಗಿದೆ ಎಂದು ಪಾಟೀಲ ಹೇಳಿದರು.
ಇರುವ ಲಿಂಗಾಯತ ಮುಖ್ಯಮಂತ್ರಿ ಭ್ರಷ್ಟರು ಇದ್ದಾರೆ ಎಂದು ಬೊಮ್ಮಾಯಿ ಅವರನ್ನುದ್ದೇಶಿಸಿ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು. ಹೊರತು ಲಿಂಗಾಯತ ಸಮುದಾಯಕ್ಕೆ ಎಲ್ಲಿಯೂ ಅವಹೇಳನ ಮಾಡಿಲ್ಲ ಎಂದರು.
ಬಿ.ಎಲ್. ಸಂತೋಷ ಕೇವಲ ಮತೀಯ ಭಾವನೆ ಕೆರಳಿಸುವುದು ಮಾತ್ರ ಗೊತ್ತಿದೆ ಹೊರತು ಜನರ ಮಧ್ಯೆ ಅವರು ಬೆಳೆದು ಬಂದಿಲ್ಲ ಎಂದರು.
ಕಾಂಗ್ರೆಸ್ ಮುಖಂಡ ಡಾ.ರವಿ ಬಿರಾದಾರ ಮಾತನಾಡಿ, ಸಿದ್ಧರಾಮಯ್ಯ ಅವರು ಕುರುಬ ಗೊಲ್ಲಾಳರ ವಂಶಸ್ಥರು, ಹೀಗಾಗಿ ಸಿದ್ಧರಾಮಯ್ಯ ಅವರು ಲಿಂಗಾಯತರು, ಲಿಂಗಾಯತರ ನಡೆ-ನುಡಿ ಅನುಸರಿಸುವ ಸಿದ್ಧರಾಮಯ್ಯ ಅವರು ಬಸವಾದಿ ಶರಣರ ತತ್ವಗಳನ್ನು ಆಧರಿಸಿ ಆಡಳಿತ ನಡೆಸಿದ್ದಾರೆ ಎಂದರು. ಮೀಸಲಾತಿ ಹೆಸರಿನಲ್ಲಿ ಒಕ್ಕಲಿಗ, ಲಿಂಗಾಯತ, ಮುಸ್ಲಿಂರಿಗೆ ಬಿಜೆಪಿ ಮೋಸ ಮಾಡುವ ಕರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.
ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಜಕ್ಕಪ್ಪ ಯಡವೆ, ಅಹಿಂದ ಮುಖಂಡರಾದ ಅಡಿವೆಪ್ಪ ಸಾಲಗಲ್ಲ, ನಾಗರಾಜ ಲಂಬು, ಫಯಾಜ್ ಕಲಾದಗಿ, ಡಾ.ರವಿ ಬಿರಾದಾರ, ವಸಂತ ಹೊನಮೋಡೆ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.