ವಕ್ಫ್ ಆಸ್ತಿ ಸಮಸ್ಯೆ ನಿವಾರಣೆಗೆ ಪ್ರತಿ ವಾರ ಸಭೆ: ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್

ವಿಜಯಪುರ: ವಕ್ಫ್ ಮಂಡಳಿ ಸದಸ್ಯರು ಪ್ರತಿ ವಾರ ಸಭೆ ನಡೆಸಿ, ಜಿಲ್ಲೆಯ ವಕ್ಫ್ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ಅವರು ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಸಿಖ್ ಮತ್ತು ಪಾರ್ಸಿ ಸಮುದಾಯ ಹೊರತುಪಡಿಸಿ, ಅಲ್ಪಸಂಖ್ಯಾತ ಸಮುದಾಯದ ಜನರೊಂದಿಗೆ ಕುಂದು-ಕೊರತೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ವಕ್ಫ್ ಸದಸ್ಯರು ಪ್ರತಿ ವಾರ ಸಭೆ ನಡೆಸಲು ತಿಳಿಸಲಾಗಿದೆ. ಈ ಸಭೆಗಳಲ್ಲಿ ಜಿಲ್ಲೆಯ ವಕ್ಫ್ ಹಾಗೂ ಅಲ್ಪಸಂಖ್ಯಾತ ಸಮಸ್ಯೆಗಳ ಕುರಿತು ಅಹವಾಲುಗಳನ್ನು ಸಲ್ಲಿಸಿ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ವಿವಿಧ ಮುಖಂಡರು ಅಹವಾಲುಗಳನ್ನು ಸಲ್ಲಿಸಿ, ಉರ್ದು ಶಾಲೆಗಳಿಗೆ ಶಿಕ್ಷಕರ ನೇಮಕ, ಕೊಠಡಿಗಳ ದುರಸ್ತಿ, ಜೈನ್ ಸಮುದಾಯ ಪ್ರತ್ಯೇಕ ವಸತಿ ನಿಲಯ ಸ್ಥಾಪನೆ, ವಿಜಯಪುರ ಸ್ಮಾರಕಗಳ ನಗರ ಈ ಹಿನ್ನಲೆಯಲ್ಲಿ ಪ್ರಾಚ್ಯವಸ್ತು ಇಲಾಖೆ ಕಚೇರಿಯನ್ನು ವಿಜಯಪುರದಲ್ಲಿ ಅಧೀನ ಕಚೇರಿ ಸ್ಥಾಪನೆ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿದ್ಯಾರ್ಥಿ ವೇತನ ದೊರೆಯಬೇಕು, ವಕ್ಫ್ ಆಸ್ತಿ ಕುರಿತು ಹಲವು ಅಹವಾಲುಗಳನ್ನು ಸಲ್ಲಿಸಲಾಯಿತು.

ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರು, ಜಿಲ್ಲೆಯ ವಿವಿಧ ಉರ್ದು ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲು ಶಿಕ್ಷಣ ಇಲಾಖೆ ಸೂಕ್ತ ಮಾಹಿತಿ ಪಡೆದುಕೊಂಡು ಶಿಕ್ಷಕರ ನೇಮಕಾತಿ ಹಾಗೂ ವಿವಿಧ ಉರ್ದು ಶಾಲೆಯ ಕೊಠಡಿಗಳನ್ನು ದುರಸ್ತಿಗೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಅವರು ಹೇಳಿದರು.

ಜೈನ್ ಸಮುದಾಯದವರಿಗೆ ಪ್ರತ್ಯೇಕ ವಸತಿ ನಿಲಯ ಸ್ಥಾಪನೆ ಕುರಿತು ಈಗಾಗಲೇ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜೈನ್ ಸಮುದಾಯವರಿಗೆ ಜಾತಿ ಪ್ರಮಾಣ ಪತ್ರ ದೊರೆಯಲು ಇರುವ ಅಡೆ-ತಡೆಗಳನ್ನು ನಿವಾರಿಸಿ, ಸೂಕ್ತ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ವಿಜಯಪುರ ಐತಿಹಾಸಿಕ ನಗರದಲ್ಲಿ ಅತಿ ಹೆಚ್ಚು ಸ್ಮಾರಕಗಳನ್ನು ಹೊಂದಿರುವ ಜಿಲ್ಲೆಯ ವಿಜಯಪುರವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಪ್ರಾಚ್ಯ ವಸ್ತು ಇಲಾಖೆಯ ಅಧೀನ ಕಚೇರಿ ಸ್ಥಾಪನೆ ಕುರಿತಂತೆ ಕೇಂದ್ರ ಸಚಿವರಿಗೆ ಪತ್ರ ಬರೆದು ಜಿಲ್ಲೆಯ ಕಚೇರಿ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಆಯೋಗದ ಆಪ್ತ ಕಾರ್ಯದರ್ಶಿ ನಿಸಾರ ಅಹ್ಮದ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಯಲ್ಲಮ್ಮ ಪಡೇಸೂರ, ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸದಸ್ಯರಾದ ಅಲ್ಲಾಬಕ್ಷ ಬಿಜಾಪುರ, ರಫೀಕ್ ಭಂಡಾರಿ, ವಕೀಲ ಲಾಹೋರಿ, ವಕ್ಫ್ ಅಧಿಕಾರಿ ತಬಸ್ಸುಮ್, ಫಯಾಜ್ ಕಲಾದಗಿ, ಬಂದೇನವಾಜ ಮಹಾಬರಿ, ಅಕ್ರಮ ಮಾಶ್ಯಾಳಕರ, ಜಿಲಾನಿ ಅವಟಿ, ಜೈನ್ ಸಮುದಾಯದ ಪರಶುರಾಮ ಸೇರಿದಂತೆ ವಿವಿಧ ಸಾರ್ವಜನಿಕರು ಉಪಸ್ಥಿತರಿದ್ದರು.

Latest Indian news

Popular Stories