ವಿಜಯಪುರಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ

ವಿಜಯಪುರ : ವಿಜಯಪುರ ಜಿಲ್ಲೆಗೆ ಇದೇ ದಿ.28 ರಂದು ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ. ವಿಜಯಪುರದ ಸೈನಿಕ ಶಾಲೆಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪೂರ್ವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಕಳೆದೊಂದು ವಾರದಿಂದ ಕೈಗೊಳ್ಳಲಾಗುತ್ತಿದೆ, ಹಳ್ಳಿ-ಹಳ್ಳಿಯಿಂದ ಜನತೆ ಲಕ್ಷೊಪಲಕ್ಷ ಜನರು ಭಾಗವಹಿಸಲು ಉತ್ಸುಕತೆ ತೋರುತ್ತಿದ್ದಾರೆ ಎಂದರು.

ಅಣ್ಣ ಬಸವಣ್ಣ ಸೇರಿದಂತೆ ಅನೇಕ ಸಂತ, ಮಹಾತ್ಮರು ಜನಿಸಿದ ಪಾವನ ಭೂಮಿ ವಿಜಯಪುರ. ಜ್ಞಾನ ದಾಸೋಹವನ್ನು ಉಣಬಡಿಸಿದ ಸಹಸ್ರಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಜನ್ಮಭೂಮಿ ವಿಜಯಪುರ. ಬಸವಣ್ಣವರ ಸಾಮಾಜಿಕ ಪ್ರಜ್ಞೆಯನ್ನು ನಿತ್ಯ ಅನುಷ್ಠಾನಗೊಳಿಸುವ ಪ್ರಧಾನಿ ಮೋದಿ ಅವರು ಸರ್ವಸ್ಪರ್ಶಿಯಾಗಿ ಮೋದಿ ಆಡಳಿತ ನಡೆಸುತ್ತಿದ್ದಾರೆ, ಕಾಯಕವೇ ಕೈಲಾಸದ ಬಸವ ತತ್ವದ ಅಡಿಯಲ್ಲಿ ದಿನದ 18 ಗಂಟೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

80 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಎರಡು ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ, ಹಳ್ಳಿಹಳ್ಳಿಗಳಿಂದ ಜನತೆ ಸ್ವಯಂ ಪ್ರೇರಿತವಾಗಿ ಭಾಗವಹಿಸಲಿದ್ದಾರೆ. ಅಂದಾಜು ಒಂದೂವರೆ ಲಕ್ಷ ಜನರು ಬರುವ ನಿರಿಕ್ಷೆ ಅನ್ವಯ ಸಿದ್ಧತೆ ಮಾಡಿಕೊಂಡಿದ್ದೆವು, ಸೈನಿಕ ಶಾಲೆಯಲ್ಲಿ 1 ಲಕ್ಷ ಆಸನಗಳ ವ್ಯವಸ್ಥೆ ಮಾಡಲು ಅವಕಾಶವಿದೆ, ಆದರೆ ಈಗ ಜನತೆ ಉತ್ಸಾಹ ಹೆಚ್ಚಾಗಿದ್ದು, ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ಹಾಗೂ ಬಾಗಲಕೋಟ ಜಮಖಂಡಿ ವಿಧಾನಸಭಾ ಕ್ಷೇತ್ರದಿಂದಲೂ ಜನತೆ ಆಗಮಿಸಲಿದ್ದಾರೆ ಎಂದರು. ಅವಳಿ ಜಿಲ್ಲೆಯ ಸಂಸದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಅಪಾರ ಸಂಖ್ಯೆಯ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ವಿವಿಧ ಕಡೆಗಳಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸುವ ನಿಟ್ಟಿನಲ್ಲಿ ಅಗತ್ಯ ಚಿಂತನೆ ನಡೆಸಲಾಗುವುದು ಎಂದರು.

ಬೆಳಿಗ್ಗೆ 12 ಗಂಟೆಗೆ ಹುಮ್ನಾಬಾದ್ ಮೂಲಕ ವಿಜಯಪುರ ಸೈನಿಕ ಶಾಲೆಗೆ ಆಗಮಿಸಲಿದ್ದು, ನೇರವಾಗಿ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ, ನಂತರ ಹಾರೋಗೇರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ವಿವರಿಸಿದರು.

ವಾಹನ ದಟ್ಟಣೆಯಾಗದಂತೆ ಮುನ್ನಚ್ಚರಿಕೆ ವಹಿಸಲು ನಾಲ್ಕು ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾ ಆಸ್ಪತ್ರೆಯ ವಿಶಾಲ ಜಾಗೆಯಲ್ಲಿ, ಅಟಲ್ ಬಿಹಾರಿ ವಾಜಪೇಯಿ ಶಾಲೆ, ರಿಂಗ್ ರೋಡ ಇಟಗಿ ಪೆಟ್ರೋಲ್ ಬಳಿ ಸೇರಿದಂತೆ ನಾಲ್ಕು ಕಡೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಪಕ್ಷದ ಪ್ರಮುಖರಾದ ಮಲ್ಲಿಕಾರ್ಜುನ ಜೋಗೂರ, ಸಂಜಯ ಪಾಟೀಲ ಕನಮಡಿ, ಬಸವರಾಜ ಬಿರಾದಾರ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Latest Indian news

Popular Stories