ವಿಜಯಪುರ : ಅನಧಿಕೃತವಾದ ಕಟ್ಟಡಗಳನ್ನು ನೆಲಸಮ ಮಾಡುವ ಅಭಿಯಾನವನ್ನು ವಿಜಯಪುರ ಮಹಾನಗರ ಪಾಲಿಕೆ ಮುಂದುವರೆಸಿದೆ.
ನಗರದ ಅಥಣಿ ರಸ್ತೆ, ಸೊಲ್ಲಾಪೂರ ರಸ್ತೆ, ಹುಡ್ಕೋ, ರಾಮನಗರ ಸೇರಿದಂತೆ ಹಲವಾರು ಭಾಗಗಳಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಈಗ ಮುರಾಣಕೇರಿಯಲ್ಲಿ ಮಹಾನಗರ ಪಾಲಿಕೆ ಜೆಸಿಬಿಗಳು ಘರ್ಜಿಸಿದ್ದು, ಅತಿಕ್ರಮಣ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ಕಳೆದ ಕೆಲ ದಿನಗಳ ಹಿಂದೆ ಒತ್ತುವರಿ ಜಾಗವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಪಾಲಿಕೆ ಗಂಭೀರವಾದ ಕಾರ್ಯಾಚರಣೆಗೆ ಮುಂದಾಗಿದೆ.
ಅಕ್ರಮವಾಗಿ ಸರ್ಕಾರಿ ಜಾಗವನ್ನು ಕಬಳಿಸಿ, ಮನೆ, ಅಂಗಡಿಗಳನ್ನು ಹೆಚ್ಚುವರಿ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಕಟ್ಟಡವನ್ನು ತೆರವುಗೊಳಿಸಲಾಯಿತು.
ನಗರದ ಮುರಾಣಕೇರಿಯಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಮನೆಗಳನ್ನು ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ನೇತೃತ್ವದಲ್ಲಿ ತೆರವು ಮಾಡಿದರು. ಇದಕ್ಕೂ ಮುನ ಸಂಬAಧಪಟ್ಟವರಿಗೆ ನೋಟಿಸ್ ನೀಡಲಾಗಿತ್ತು. ಅದರಂತೆ ಮಾಲೀಕರು ಮನೆ ಖಾಲಿ ಮಾಡಿದ್ದರು. ಇದಾದ ನಂತರ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.
ಯಾವುದೇ ಅಹಿತಕರ ಘಟನೆಗಳು ನಡೆದಂತೆ ಗೋಳಗುಮ್ಮಟ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು. ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ ಅತಿಕ್ರಮಿತ ಕಟ್ಟಡಗಳನ್ನು ತೆರವು ಗೊಳಿಸಲಾಗಿದೆ. ಕಾರ್ಯಾಚರಣೆಗೆ ಕೆಲವು ಮನೆ ಹಾಗು ಅಂಗಡಿ ಮಾಲೀಕರ ವಿರೋಧ ವ್ಯಕ್ತಪಡಿಸಿದರು.
ಕಳೆದ 10-20 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ಸಣ್ಣ ವ್ಯಾಪಾರದ ಮೂಲಕ ಬದುಕು ಕಟ್ಟಿಕೊಂಡಿದ್ದೇವೆ. ಏಕಾಏಕಿ ಮನೆ, ಅಂಗಡಿಗಳನ್ನು ತೆರವುಗೊಳಿಸಿದರೆ ನಮ್ಮ ಜೀವನದ ಗತಿ ಏನು? ಪರ್ಯಾಯ ವ್ಯವಸ್ಥೆ ಕಲ್ಪಿಸಿದ ನಂತರ ತೆರವುಗೊಳಿಸಿ ಎಂದು ಅನೇಕರು ಕಣ್ಣೀರು ಹಾಕಿ ತಮ್ಮ ನೋವು ತೋಡಿಕೊಂಡರು.