ವಿಜಯಪುರ | ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಸುಭದ್ರ

ವಿಜಯಪುರ : ಜಿಲ್ಲೆಯ 08 ವಿಧಾನಸಭಾ ಕ್ಷೇತ್ರಗಳಿಗೆ ಈಗಾಗಲೇ ಸೂಸೂತ್ರವಾಗಿ ಚುನಾವಣೆ ನಡೆದಿದ್ದು, ಜಿಲ್ಲೆಯಿಂದ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ 95 ಅಭ್ಯರ್ಥಿಗಳ ಭವಿಷ್ಯವನ್ನು ಈಗಾಗಲೇ ಮತದಾರ ಮತಯಂತ್ರಗಳಲ್ಲಿ ಅಚ್ಚೊತ್ತಿದ್ದು, ಈ ಎಲ್ಲ ಮತಯಂತ್ರಗಳು ಸೈನಿಕ ಶಾಲೆಯಲ್ಲಿರುವ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿವೆ.

ಚುನಾವಣೆ ಮುಗಿದರೂ ಸಹ ಚುನಾವಣೆಯ ಕಾವು ಮಾತ್ರ ಇನ್ನೂ ಆರಿಲ್ಲ. ಮತದಾನದ ನಂತರ ಎಲ್ಲರ ಚಿತ್ತ ಫಲಿತಾಂಶದತ್ತ ಕೇಂದ್ರಿಕೃತವಾಗಿದೆ. ಕಳೆದ ಒಂದು ತಿಂಗಳುಗಳಿಂದ ನಿದ್ರೆ, ಊಟ ಸರಿಯಾಗಿ ಮಾಡದ ಕಾರ್ಯಕರ್ತರು ಗುರುವಾರ ಸಹ ಚುನಾವಣಾ ಮೂಡ್‌ನಿಂದ ಹೊರಬಂದಿಲ್ಲ.

ಎಲ್ಲ ಪ್ರಚಾರ ಕಾರ್ಯಾಲಯಗಳಲ್ಲಿಯೂ ದೊಡ್ಡ ಮಟ್ಟದ ಕಾರ್ಯಕರ್ತರ ದಂಡು ಕಾಣಿಸಿಗುತ್ತಿದ್ದು, ಫಲಿತಾಂಶ ಬಗ್ಗೆ ಸಮಗ್ರ ಚರ್ಚೆ ನಡೆಯುತ್ತಿದೆ.

ಪಕ್ಷಗಳ ವಲಯಗಳಲ್ಲಿ, ಕಾರ್ಯಕರ್ತರ ವಲಯದಲ್ಲಿ ಅಷ್ಟೇ ಅಲ್ಲದೇ ಸಾರ್ವಜನಿಕ ವಲಯದಲ್ಲಿಯೂ ಸೋಲು-ಗೆಲುವಿನ ಲೆಕ್ಕಾಚಾರ ತೀವ್ರಗೊಂಡಿವೆ.

ಶನಿವಾರ ಏಕಕಾಲಕ್ಕೆ ಮತ ಎಣಿಕೆ ನಡೆಯಲಿದ್ದು, ಸ್ಥಳೀಯ ಕ್ಷೇತ್ರ ಅಷ್ಟೇ ಅಲ್ಲದೇ ರಾಜ್ಯದಲ್ಲಿ ಯಾವ ಸರ್ಕಾರ ರಚನೆಯಾಗುತ್ತದೆ, ಸಂಪೂರ್ಣ ಬಹುಮತದ ಸರ್ಕಾರ ಬರುತ್ತದೆಯೋ ಈ ಬಾರಿಯೂ ಸಮ್ಮಿಶ್ರ ಸರ್ಕಾರವೇ ಬರುತ್ತದೆ ಎಂಬ ಕುತೂಹಲಕಾರಿ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿವೆ.

ಲೆಕ್ಕಾಚಾರದಲ್ಲಿ ತಲ್ಲೀನ:
ಮತದಾನ ಸಂಪನ್ನಗೊಂಡ ನಂತರ ಸಂಪೂರ್ಣ ನಿವಾಂತ ಆಗಿರುವ ಅಭ್ಯರ್ಥಿಗಳು ಕಾರ್ಯಕರ್ತರೊಡನೆ ಸೋಲು-ಗೆಲುವಿನ ಲೆಕ್ಕಾಚಾರ ಮಾಡುತ್ತಾ ಕುಳಿತುಕೊಂಡಿದ್ದಾರೆ. ಭೂತ್‌ವಾರು ಮತದಾನ ಮಾಹಿತಿ ಸಂಗ್ರಹಿಸಿ ತಮಗೆ ಈ ಭೂತ್‌ನಲ್ಲಿ ಲೀಡ್ ಬರಬಹುದು, ಈ ಭೂತ್ ನಮಗ ಕೈಕೊಟ್ಟಿರುವ ಸಾಧ್ಯತೆ ಇದೆ, ಅಲ್ಲಿ ನಮಗೆ ಹಿನ್ನೆಡೆಯಾಗಿದೆ, ಇಷ್ಟು ಲೀಡ್‌ನಲ್ಲಿ ಬರಬಹುದು, ಈ ಸಮುದಾಯದ ಮತಗಳು ಇಂತಿಷ್ಟು, ನಮ್ಮ ಪಕ್ಷದ ಸಂಪ್ರದಾಯದ ಮತಗಳು ಇಂತಿಷ್ಟು ಎಂದು ಭೂತ್‌ವಾರು ವಿವರಗಳನ್ನು ಟ್ಯಾಲಿ ಮಾಡುತ್ತಾ, ಮೊಬೈಲ್ ಕ್ಯಾಲ್ಕುಲೇಟರ್‌ನಲ್ಲಿ ಲೆಕ್ಕ ಮಾಡುವಲ್ಲಿ ತಲ್ಲೀನರಾಗಿರುವ ದೃಶ್ಯ ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಜನಸಂಪರ್ಕ ಕಾರ್ಯಾಲಯದಲ್ಲಿ ಗೋಚರಿಸುತ್ತಿದೆ.

ನೀವು ಇಷ್ಟೇ ಲೀಡ್‌ಲ್ಲಿ ಬರುತ್ತೀರಿ ಬರೆದಿಟ್ಟುಕೊಳ್ಳಿ ಎಂದು ಕೆಲವರು ಹೇಳಿದರೆ, 13 ರವರೆಗೆ ಕಾಯೋಣ ಸಮಾಧಾನವಾಗಿರಿ ಎಂದು ಹೇಳುತ್ತಿರುವ ಕಾರ್ಯಕರ್ತರ ದಂಡು ಹೀಗೆ ಚುನಾವಣೆಯ ಕುರಿತು ಬಿಸಿಬಿಸಿ ಚರ್ಚೆ ಮಾತ್ರ ವ್ಯಾಪಕವಾಗಿ ನಡೆಯುತ್ತಿದೆ.

ಸಾರ್ವಜನಿಕ ವಲಯದಲ್ಲಿಯೂ ಸಹ ದಿ.13 ರ ಫಲಿತಾಂಶವೇ ಮುಖ್ಯ ಚರ್ಚಾ ವಸ್ತುವಾಗಿದೆ, ಹೋಟೆಲ್, ಕಿರಾಣಿ ಅಂಗಡಿ ಅನೇಕ ಸಾರ್ವಜನಿಕ ಸ್ಥಳಗಳಲ್ಲಿಯೂ `ಏನಂತದ್ರೀ… ರಿಸಲ್ಟ್… ಯರ‍್ದ ಆಗಬಹುದು ಅಂತೀರಿ…..’ ಎಂಬ ಮಾತುಗಳು ಎಲ್ಲೆಡೆ ಕಿವಿಗೆ ಬೀಳುವುದಂತೂ ಸತ್ಯ.

ಈಗಾಗಲೇ ಮತದಾನ ಕರ್ತವ್ಯವನ್ನು ನಿಭಾಯಿಸಿದ್ದೇನೆ, ಫಲಿತಾಂಶದ ಕಾತರವಂತೂ ಇದ್ದಿದ್ದೇ, ಸಮೀಕ್ಷೆಗಳು ಸಹ ಹೊರಬಂದಿವೆ, ಆದರೆ ಅಂತಿಮವಾಗಿ ದಿ.13 ರವರೆಗೆ ಕಾಯಬೇಕು, ಫಲಿತಾಂಶ ನಿಜಕ್ಕೂ ಈ ಬಾರಿ ಅತ್ಯಂತ ಕುತೂಹಲ ತರಿಸಿದೆ ಎಂದು ಮಲ್ಲಿಕಾರ್ಜುನ ರೂಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Latest Indian news

Popular Stories