ವಿಜಯಪುರ : ಸೋಮವಾರ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಿದರು. ಕೆಲವು ರಾಜಕೀಯ ನಾಯಕರು ಸರಳವಾಗಿ ನಾಮಪತ್ರ ಸಲ್ಲಿಕೆ ಮಾಡಿದರೆ, ಇನ್ನೂ ಕೆಲವರು ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ರೋಡ್ ಷೋ ನಡೆಸಿ ನಾಮಪತ್ರ ಸಲ್ಲಿಸಿದರು.
ಎಲ್ಲ ಅಭ್ಯರ್ಥಿಗಳು ದೇವಾಲಯ, ದರ್ಗಾ ಹೀಗೆ ತಮ್ಮ ಶ್ರದ್ಧೆಯ ಕೇಂದ್ರಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದು ಮುಹೂರ್ತಕ್ಕನುಗುಣವಾಗಿ ನಾಮಪತ್ರ ಸಲ್ಲಿಸುವ ಸ್ಥಳಗಳಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ವಿಜಯಪುರ, ಇಂಡಿ, ಬಬಲೇಶ್ವರ, ಮುದ್ದೇಬಿಹಾಳ ಹೀಗೆ ಎಲ್ಲ ಕಡೆಗಳಲ್ಲಿ ನಾಮಪತ್ರ ಸಲ್ಲಿಕೆ ಕೇಂದ್ರ ಮುಂಭಾಗದಲ್ಲಿ ಅಭಿಮಾನಿಗಳ ದಂಡು ಕಾಣಿಸಿಕೊಂಡಿತು. ಕಾರ್ಯಕರ್ತರು ತಾವು ಪ್ರತಿನಿಧಿಸುವ ಪಕ್ಷದ ಬಾವುಟ ಪ್ರದರ್ಶಿಸಿ ತಮ್ಮ ನಾಯಕನ ಹೆಸರು ಹೇಳಿ ಜಯಘೋಷ ಕೂಗುತ್ತಿರುವುದು ಕಂಡು ಬಂದಿತು.
ಬೃಹತ್ ಮೆರವಣಿಗೆ ಮೂಲಕ ಎಂಬಿಪಿ ನಾಮಪತ್ರ
ಸಾವಿರಾರು ಕಾರ್ಯಕರ್ತರು, ಕಲಾತಂಡಗಳ ಸಮ್ಮುಖದಲ್ಲಿ ಹಾಲಿ ಶಾಸಕ ಎಂ.ಬಿ. ಪಾಟೀಲ ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಜಗದೀಶ ಶೆಟ್ಟರ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೂ ಸಹ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ಎಂ.ಬಿ. ಪಾಟೀಲರು ಬಬಲೇಶ್ವರದ ಶ್ರೀ ಗುರುಪಾದೇಶ್ವರ ಹಾಗೂ ಶ್ರೀ ಶಾಂತವೀರ ಮಹಾಸ್ವಾಮಿಗಳ ಪವಿತ್ರ ಗದ್ದುಗೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು.
ಎಂ.ಬಿ. ಪಾಟೀಲರ ತಾಯಿ, ಧರ್ಮಪತ್ನಿ ಆಶಾ ಪಾಟೀಲ, ಪುತ್ರ ರಾಹುಲ್ ಪಾಟೀಲ, ಸಹೋದರ ಸುನೀಲಗೌಡ ಪಾಟೀಲ ಸಹ ಭಾಗಿಯಾಗಿದ್ದರು. ಡೊಳ್ಳು ಸೇರಿದಂತೆ ಹಲವಾರು ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಸಾವಿರಾರು ಕಾರ್ಯಕರ್ತರು ಈ ವೇಳೆ ಭಾಗವಹಿಸಿದ್ದರು.
ಸಾವಿರಾರು ಜನರ ನೇತೃತ್ವದಲ್ಲಿ ಯಶವಂತರಾಯಗೌಡ ನಾಮಪತ್ರ
ಇಂಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಶವಂತರಾಯಗೌಡ ಪಾಟೀಲ ಸೋಮವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರಕ್ಕೂ ಮುನ್ನ ಶ್ರೀ ಬೀರಲಿಂಗೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಯಶವಂತರಾಯಗೌಡ ಪಾಟೀಲರು ಸಾವಿರಾರು ಬೆಂಬಲಿಗರು, ಅಭಿಮಾನಿ, ಕಾರ್ಯಕರ್ತರ ಸಮ್ಮುಖದಲ್ಲಿ ರೋಡ್ ಷೋ ನಡೆಸಿದರು. ನಂತರ ನಾಮಪತ್ರ ಸಲ್ಲಿಸಿದರು.
ಸರ್ವಧರ್ಮ ಪ್ರಾರ್ಥನೆಯೊಂದಿಗೆ ನಾಮಪತ್ರ
ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಸರ್ವ ಧರ್ಮಗಳ ಪ್ರಾರ್ಥನಾ ಸ್ಥಳಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ಮಹಾತ್ಮರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ನಾಮಪತ್ರ ಸಲ್ಲಿಸಿದರು.
ವಿಜಯಪುರ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ, ನಂತರ ಮಹಾತ್ಮ ಗಾಂಧೀಜಿ, ಜಗಜ್ಯೋತಿ ಬಸವೇಶ್ವರರ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಭಕ್ತ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ನಂತರ ಹಜರತ್ ಹಾಜಿ ರೂಮಿ ಬಾಬಾ ದರ್ಗಾಕ್ಕೇ ಗಲಿಫ ಸಮರ್ಪಿಸಿದರು. ನಂತರ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಪೂಜೆ, ಜೈ ಸಂತೋಷೀ ಮಾತ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಂತರ ಬುದ್ಧವಿಹಾರಕ್ಕೆ ತೆರಳಿ ಬುದ್ದ ವಂದನೆ ಸಲಿಸಿದರು.
ಸರಳ ರೀತಿಯಲ್ಲಿ ವಿಜುಗೌಡ ನಾಮಪತ್ರ
ಬಬಲೇಶ್ವರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ವಿಜುಗೌಡ ಪಾಟೀಲ ಸೋಮವಾರ ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಬಬಲೇಶ್ವರದ ಶ್ರೀ ಗುರುಪಾದೇಶ್ವರ ಹಾಗೂ ಶ್ರೀ ಶಾಂತವೀರ ಮಹಾಸ್ವಾಮಿಗಳ ಪವಿತ್ರ ಗದ್ದುಗೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು.
ಮನೆದೇವರಿಗೆ ಪೂಜೆ ಸಲ್ಲಿಸಿ ದೇವಾನಂದ ನಾಮಪತ್ರ
ನಾಗಠಾಣ ಮೀಸಲು ವಿಧಾನಸಭಾ ಮತಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಡಾ.ದೇವಾನಂದ ಚವ್ಹಾಣ ಅವರು ನಾಮಪತ್ರ ಸಲ್ಲಿಸಿದರು. ಮನೆಯಲ್ಲಿ ತಮ್ಮ ಮನೆದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕುಟುಂಬ ಸದಸ್ಯರು, ಅಭಿಮಾನಿಗಳೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಸಾವಿರಾರು ಜನರ ಸಮ್ಮುಖದಲ್ಲಿ ನಾಡಗೌಡರ ನಾಮಪತ್ರ
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಎಸ್. ನಾಡಗೌಡ ಅವರು ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳ ಸಮ್ಮುಖದಲ್ಲಿ ಬೃಹತ್ ಮೆರವಣಿಗೆಯ ಮೂಲಕ ನಾಮಪತ್ರ ಸಲ್ಲಿಸಿದರು. ಇಂದಿರಾ ಸರ್ಕಲ್ನಿಂದ ಆರಂಭಗೊಂಡ ಬೃಹತ್ ಮೆರವಣಿಗೆಯಲ್ಲಿ ಸಾವಿರಾರ ಕಾರ್ಯಕರ್ತರ ಉದ್ಘೋಷ ಮುಗಿಲುಮುಟ್ಟಿತ್ತು.
ಎಸ್.ಯು.ಸಿ.ಐ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ನಾಮಪತ್ರ
ಎಸ್.ಯು.ಸಿ.ಐ ಪಕ್ಷದ ಅಭ್ಯರ್ಥಿಯಾಗಿ ಎಚ್.ಟಿ. ಮಲ್ಲಿಕಾರ್ಜುನ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಪಂಚಾಯತವರೆಗೆ ಬೃಹತ್ ಮೆರವಣಿಗೆಯಲ್ಲಿ ಕಾರ್ಯಕರ್ತರು ಹೆಜ್ಜೆ ಹಾಕಿದರು. ನಂತರ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಟಿ.ಎಸ್. ಸುನೀತಕುಮಾರ, ಭಿ. ಭಗವಾನರೆಡ್ಡಿ ಮೊದಲಾದವರ ಸಮ್ಮುಖದಲ್ಲಿ ಮಲ್ಲಿಕಾರ್ಜುನ ನಾಮಪತ್ರ ಸಲ್ಲಿಸಿದರು.