ವಿಜಯಪುರ: ಮೂಲಭೂತ ಸೌಕರ್ಯ ಕೊರತೆ: ಲೋಕಾಯುಕ್ತ ಎಸ್ಪಿ ಭೇಟಿ ಪರಿಶೀಲನೆ

ವಿಜಯಪುರ: ವಿಜಯಪುರ ವಾರ್ಡ್ ನಂ.೨೪ ರ ವ್ಯಾಪ್ತಿಯ ಅನೇಕ ಬಡಾವಣೆಗಳು ಮೂಲ ಸೌಕರ್ಯದಿಂದ ವಂಚಿತವಾಗಿವೆ, ಅಧಿಕಾರಿಗಳಿಂದ ಸ್ಪಂದನೆ ದೊರಕುತ್ತಿಲ್ಲ ಎಂದು ಪಾಲಿಕೆ ಸದಸ್ಯೆ ವಿಮಲಾ ಖಾಣೆ ಹಾಗೂ ಮುಖಂಡ ರಫೀಕ್ ಅಹ್ಮದ್ ಖಾಣೆ ಕರ್ನಾಟಕ ಲೋಕಾಯುಕ್ತ ಬಿ.ಎಸ್. ಪಾಟೀಲ ಅವರಿಗೆ ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತರ ನಿರ್ದೇಶನ ಮೇರೆಗೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಅನೀತಾ ಹದ್ದಣ್ಣವರ ಬಡಾವಣೆಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸಿದರು.

ಬಡಾವಣೆ ವ್ಯಾಪ್ತಿಯ ಜಮಾಲ್ ಮಸಜೀದ್, ದರಿಯಾಪೀರ ಮಸಜೀದ್, ಇಕ್ರಾ ಶಾಲೆ ಸೇರಿದಂತೆ ವಿವಿಧ ಬಡಾವಣೆಗಳಿಗೆ ಸಂಚರಿಸಿ ಅಹವಾಲು ಸ್ವೀಕರಿಸಿದರು. ಜೊತೆಗೆ ನೀರು ಪೂರೈಕೆಯಾಗುತ್ತಿರುವ ದಿನಚರಿ ಪರಿಶೀಲನೆ ನಡೆಸಿ, ವ್ಯತ್ಯಯವಾಗುತ್ತಿರುವುದು ಮೇಲ್ನೋಟಕ್ಕೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

೧೦ ದಿನಗಳು ಕಳೆದರೂ ಸಹ ಕುಡಿಯುವ ನೀರು ಬರುತ್ತಿಲ್ಲ, ನೀರು ಬಂದರೂ ಸಹ ಚರಂಡಿ ನೀರು ಮಿಕ್ಸ್ ಆಗಿ ಬರುತ್ತಿದೆ, ಕುಡಿಯುವ ನೀರಿನ ತೊಂದರೆ ಅಧಿಕವಾಗುತ್ತಿದೆ, ನಮ್ಮ ಬಡಾವಣೆಗೆ ಸುಸಜ್ಜಿತ ರಸ್ತೆ ಇಲ್ಲ, ಶುದ್ಧ ಕುಡಿಯುವ ನೀರಿನ ಘಟಕಗಳು ಸಹ ನಮ್ಮ ವಾರ್ಡ್ ಅಲ್ಲಿ ಇಲ್ಲ ಎಂದು ಅನೇಕ ನಿವಾಸಿಗಳು ಲೋಕಾಯುಕ್ತ ಅಧಿಕಾರಿಗಳ ಎದುರು ಅಳಲು ತೋಡಿಕೊಂಡರು.

ಬಡಾವಣೆಯ ನಿವಾಸಿಗಳ ಪರವಾಗಿ ಸಮಸ್ಯೆ ವಿವರಿಸಿದ ಪಾಲಿಕೆ ಸದಸ್ಯೆ ವಿಮಲಾ ಖಾಣೆ, ಬಡಾವಣೆಯ ಧುರೀಣ ರಫೀಕ್‌ಅಹ್ಮದ್ ಖಾಣೆ, ವಿಜಯಪುರ ನಗರದ ವಾರ್ಡ್ ನಂ.೨೪ ರಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ, ಅಧಿಕಾರಿಗಳಿಂದ ಯಾವ ಸ್ಪಂದನೆಯೂ ಇಲ್ಲ, ಕುಡಿಯುವ ನೀರು ಪೂರೈಕೆ ಸಮಸ್ಯೆಯಂತೂ ಹೇಳತೀರದಾಗಿದೆ, ೧೦ ದಿನ ಉರುಳಿದರೂ ನೀರು ಬರುತ್ತಿಲ್ಲ, ನೀರು ಬಿಟ್ಟಲು ಸೂಕ್ತ ಪ್ರೆಷರ್ ಇರುವುದಿಲ್ಲ, ನಮ್ಮ ಬಡಾವಣೆಯ ನಿವಾಸಿಗಳು ತೊಂದರೆ ಎದುರಿಸುವಂತಾಗಿದೆ, ಬಡಾವಣೆಗೆ ಪೂರೈಕೆಯಾಗುವ ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಣವಾಗಿ ಬರುತ್ತಿದೆ, ಈಗಾಗಲೇ ವೈಯುಕ್ತಿಕವಾಗಿ ಆ ನೀರನ್ನು ಪ್ರಯೋಗಾಲಕ್ಕೆ ಕಳುಹಿಸಿದ್ದೆ, ಆಲ್ಲಿರುವ ವರದಿ ನೋಡಿದರೆ ಈ ನೀರು ಕುಡಿಯಲು ಯೋಗ್ಯವಲ್ಲ ಎಂಬುದಾಗಿ ಬಂದಿದೆ ಎಂದು ಲೋಕಾಯುಕ್ತರ ಗಮನಕ್ಕೆ ತಂದರು.

ಅಧಿಕಾರಿಗಳಿಗೆ ನಿರ್ದೇಶನ
ಈ ಸಂದರ್ಭದಲ್ಲಿ ಮಾತನಾಡಿದ ಲೋಕಾಯುಕ್ತ ಅಧೀಕ್ಷಕಿ ಅನೀತಾ ಹದ್ದಣ್ಣವರ, ಈ ಭಾಗಕ್ಕೆ ಭೇಟಿ ನೀಡಿದಾಗ ಹಲವಾರು ಸಮಸ್ಯೆಗಳ ಸರಮಾಲೆ ಇರುವುದು ಕಂಡು ಬಂದಿದೆ, ಕೇವಲ ಕುಡಿಯುವ ನೀರಿನ ಸಮಸ್ಯೆ ಅಷ್ಟೇ ಅಲ್ಲ ಸೂಕ್ತವಾದ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕಗಳು ಸಹ ಇಲ್ಲಿ ಇಲ್ಲ ಎಂಬುದು ಕಂಡು ಬಂದಿದೆ. ಪ್ರಮುಖವಾಗಿ ಅಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕೂಡಲೇ ಆ ಸ್ಯಾಂಪಲ್‌ನನ್ನು ಪ್ರಯೋಗಾಲಕ್ಕೆ ಕಳುಹಿಸಲು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳು, ಧುರೀಣರಾದ ಎಂ.ಸಿ. ಮುಲ್ಲಾ, ಹೈದರ ನದಾಫ್, ಕೈಸರ್ ಇನಾಮದಾರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Latest Indian news

Popular Stories