ವಿಜಯಪುರ : ಸಾವಿರಾರು ಕಾರ್ಯಕರ್ತರ ಹರ್ಷೋದ್ಧಾರ, ಕಾಂಗ್ರೆಸ್ ಬಾವುಟ ಹಿಡಿದ ಕಾರ್ಯಕರ್ತರ ದಂಡು, ವಿಶ್ವ ಗುರು ಬಸವಣ್ಣ ಎಂಬ ಸಂದೇಶ ಹೊತ್ತ ಬಾವುಟಗಳನ್ನು ಹಿಡಿದ ಸಾವಿರಾರು ಕಾರ್ಯಕರ್ತರು, ರಾಹುಲ್ ರ‍್ಯಾಲಿ ಕಣ್ತುಂಬಿಕೊಳ್ಳಲು ಎತ್ತರದ ಕಟ್ಟಡಗಳನ್ನು ಏರಿ ಕುಳಿತ ಜನತೆ, ಕಾಂಗ್ರೆಸ್ ಜಯವಾಗಲಿ, ರಾಹುಲ್‌ಗೆ ಜಯವಾಗಲಿ ಎಂದು ಮುಗಿಲು ಮುಟ್ಟಿದ ಉದ್ಘೋಷಗಳು….ದಾರಿಯುದ್ದಕ್ಕೂ ರಾಹುಲ್‌ಗೆ ಪುಷ್ಪವೃಷ್ಟಿಯ ಸ್ವಾಗತ….
ವಿಜಯಪುರ ನಗರದಲ್ಲಿ ನಡೆದ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ರೋಡ್ ಷೋನಲ್ಲಿ ಕಂಡು ಬಂದ ದೃಶ್ಯಗಳಿವು.
ಕೂಡಲಸಂಗಮದಲ್ಲಿ ನಡೆದ ಬಸವಜಯಂತಿ ಉತ್ಸವದಲ್ಲಿ ಭಾಗಿಯಾದ ನಂತರ ಪಕ್ಷದ ಪ್ರಚಾರಾರ್ಥವಾಗಿ ರಾಹುಲ್ ಗಾಂಧಿ ವಿಜಯಪುರದಲ್ಲಿ ಬೃಹತ್ ರೋಡ್ ಷೋ ನಡೆಸಿದರು.
ವಿಜಯಪುರದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಶ್ರೀ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರ‍್ಯಾಲಿಗೆ ಅಣಿಯಾದರು.
ಶಿವಾಜಿ ವೃತ್ತದಿಂದ ಆರಂಭಗೊಂಡ ಬೃಹತ್ ರೋಡ್ ಷೋನಲ್ಲಿ ಅಸಂಖ್ಯ ಕಾಂಗ್ರೆಸ್ ಕಾರ್ಯಕರ್ತರು ಉದ್ಘೋಷ ಕೂಗತ್ತಾ ಭಾಗಿಯಾದರು.
ಸಾಲಂಕೃತ ತೆರೆದ ವಾಹನದಲ್ಲಿ ರಾಹುಲ್ ಗಾಂಧೀ ಆತ್ಮೀಯತೆಯಿಂದ ಕೈ ಮುಗಿಯುತ್ತಾ ಸಾಗಿದರು. ಎರಡು ಬದಿಯಲ್ಲಿ ಜನಸ್ತೋಮವನ್ನು ಕಂಡು ಕೈ ಮುಗಿಯುತ್ತಾ ಸಾಗಿದರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ. ಪಾಟೀಲ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್, ಶಾಸಕರಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ನಾಗಠಾಣ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ, ಮಾಜಿ ಸಚಿವ ಸಿ.ಎಸ್. ನಾಡಗೌಡ, ದೇವರ ಹಿಪ್ಪರಗಿ ಅಭ್ಯರ್ಥಿ ಶರಣಪ್ಪ ಸುಣಗಾರ, ಸಿಂದಗಿ ಅಭ್ಯರ್ಥಿ ಅಶೋಕ ಮನಗೂಳಿ, ಸೇರಿದಂತೆ ಅನೇಕರು ಸಾಥ್ ನೀಡಿದರು.
ಶ್ರೀ ಶಿವಾಜಿ ವೃತ್ತದಿಂದ ಸಾಗಿದ ರೋಡ್ ಷೋ ಗಾಂಧಿವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ ವೃತ್ತದ ಮೂಲಕ ಸಾಗಿ ಭಕ್ತ ಕನಕದಾಸ ವೃತ್ತಕ್ಕೆ ತಲುಪಿ ಸಂಪನ್ನಗೊಂಡಿತು.
ದಾರಿಯುದ್ದಕ್ಕೂ ಕಾರ್ಯಕರ್ತರು ಕಾಂಗ್ರೆಸ್ ಬಾವುಟಗಳನ್ನು ಪ್ರದರ್ಶಿಸುತ್ತಾ ಮುನ್ನಡೆದರು. ದಾರಿಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರ ಪಡೆ ರಾಹುಲ್ ಗಾಂಧಿಗೆ ಪುಷ್ಪವೃಷ್ಟಿಗೈದು ಆತ್ಮೀಯತೆಯಿಂದ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.
ಭಕ್ತ ಕನಕದಾಸ ವೃತ್ತಕ್ಕೆ ತಲುಪಿ ರ‍್ಯಾಲಿ ಸಂಪನ್ನಗೊಂಡಿತು. ಅಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ರಾಹುಲ್ ಗಾಂಧೀ ಮಾತನಾಡಿದರು.