ವಿಜಯಪುರ : ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದೆ, ಈ ನಡುವೆ ಶ್ರೀಗಳು ಅಲ್ಲಮನ ವಚನಗಳ ವ್ಯಾಖ್ಯಾನದ ಸಂಪುಟ `ಜ್ಞಾನಯೋಗ’ ವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿದ್ದಾರೆ. ಬೆಳಿಗ್ಗೆ ಗಂಜಿ ಸಹ ಸೇವನೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.
ಮಧ್ಯಾಹ್ನ ಎರಡು ಬಾರಿ ಜ್ಞಾನಯೋಗಾಶ್ರಮ ವಿಜಯಪುರ ಫೇಸ್‌ಬುಕ್ ಅಧಿಕೃತ ಫೇಜ್‌ನಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳು ಕನೇರಿಯ ಶ್ರೀ ಅದೃಶ್ಯ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮೀಜಿಗಳ ಜೊತೆ ಸನ್ನೆ ಮಾಡುತ್ತಾ ಮಾತನಾಡುತ್ತಿರುವ ದೃಶ್ಯ ಅಪಲೋಡ್ ಸಹ ಮಾಡಲಾಗಿದೆ.
ಸುತ್ತೂರ ಶ್ರೀಗಳ ಭೇಟಿ
ಜ್ಞಾನಯೋಗಾಶ್ರಮಕ್ಕ ಭೇಟಿ ನೀಡಿರುವ ಸುತ್ತೂರು ಮಠದ ಡಾ.ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಶ್ರೀಗಳು ಜ್ಞಾನ ಯೋಗ ಸಂಪುಟ ಪುಸ್ತಕ ಬಿಡುಗಡೆ ಮಾಡಿದ್ದಾರೆ, ಶ್ರೀಗಳು ಆರೋಗ್ಯವಾಗಿದ್ದಾರೆ, ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಕೋರಿದರು.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹ ಶ್ರೀಗಳ ದರ್ಶನ ಪಡೆದು ಮಾತನಾಡಿ, ಶ್ರೀಗಳು ನನಗೆ ಕೈ ಸನ್ನೆ ಮಾಡಿ ಆಶೀರ್ವಾದ ಮಾಡಿದ್ದಾರೆ, ಸ್ವಾಮೀಜಿಗಳು ಆರೋಗ್ಯವಾಗಿದ್ದಾರೆ, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದರು. ಕೆಲ ಕುಚೋದ್ಯ ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿ ಬಿಡುತ್ತಿದ್ದಾರೆ, ಅದನ್ನು ನಂಬಬೇಡಿ ಎಂದರು.
ಹರಿದು ಬಂಧ ಭಕ್ತ ಸಾಗರ
ಅಪಾರ ಸಂಖ್ಯೆಯ ಭಕ್ತವರ್ಗವನ್ನು ಹೊಂದಿರುವ ಶ್ರೀ ಸಿದ್ದೇಶ್ವರ ಶ್ರೀಗಳ ದರ್ಶನಾಶೀರ್ವಾದಕ್ಕೆ ಆಗಮಿಸುತ್ತಿದ್ದಾರೆ.
ಶ್ರೀಸಿದ್ದೇಶ್ವರ ಸ್ವಾಮಿಗಳ ಮುಖತಃ ದರ್ಶನ ಪಡೆಯಬೇಕೆಂಬ ಹಂಬಲದಿಂದ ನಾನಾ ಊರುಗಳಿಂದ ಕ್ರೂಸರ್, ಬಸ್‌ಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಜ್ಞಾನಯೋಗಾಶ್ರಮದ ಮುಂದೆ ಭಕ್ತರ ಸಮುದ್ರವೇ ಸೃಜಿಸಿದೆ. ಬಾಗಲಕೋಟೆ, ಗದಗ, ಬೀದರ್, ಸೊಲ್ಲಾಪೂರ, ಅಕ್ಕಲಕೋಟ, ಬೆಂಗಳೂರಿನಿಂದಲೂ ಭಕ್ತಾದಿಗಳು ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡುತ್ತಿದ್ದಾರೆ.
ನಿನ್ನೆ ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ಸಚಿವರು, ಹಿರಿಯ ರಾಜಕಾರಣಿಗಳು, ಅಧಿಕಾರಿಗಳು, ಗಣ್ಯಾತಿಗಣ್ಯರು, ಸಹಸ್ರಾರು ಸಾಧು ಸಂತರು, ಮಠಾಧೀಶರು ಆರೋಗ್ಯ ವಿಚಾರಿಸಿ ಹೋಗುತ್ತಿದ್ದಾರೆ.
ಶ್ರೀಗಳು ದೇವರಿದ್ದಂಗ, ಅವರನ್ನು ನೋಡಿದ್ರ ಸಾಕ್ರೀ… ನಮಗ ಪುಣ್ಯ ರ‍್ತೆöÊತಿ, ಅವರ ದರ್ಶನಕ್ಕ ಬಂದಿದ್ದೇವೆ ಎಂದು ಅನೇಕ ಭಕ್ತರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಎಲ್‌ಇಡಿ ವಾಲ್ ಅಳವಡಿಕೆ
ಶ್ರೀಗಳ ದರ್ಶನಕ್ಕೆ ಭಕ್ತಾದಿಗಳ ಸಂಖ್ಯೆ ಅಧಿಕವಾಗುತ್ತಿದೆ, ಹೀಗಾಗಿ ಬೃಹತ್ ಎಲ್‌ಇಡಿ ಪರದೆಯನ್ನು ಸಹ ಅಳವಡಿಸಲಾಗಿದೆ. ಅಲ್ಲಿ ಲೈವ್ ಮೂಲಕ ಹಲವಾರು ಸಮಯಕ್ಕೆ ಶ್ರೀಗಳ ದರ್ಶನವನ್ನು ಮಾಡುವ ವ್ಯವಸ್ಥೆ ಮಾಡಲಾಗಿದೆ.
ಆರೋಗ್ಯ ಸ್ಥಿರ : ವೈದ್ಯರ ಹೇಳಿಕೆ
ಪೂಜ್ಯರ ಆರೋಗ್ಯ ಸ್ಥಿರವಾಗಿದೆ, ಅವರ ನಾಡಿ ಬಡಿತ ಉಸಿರಾಟ ಸರಿಯಾಗಿದೆ ಎಂದು ಶ್ರೀಗಳ ಆರೋಗ್ಯ ನೋಡಿಕೊಳ್ಳುತ್ತಿರುವ ವೈದ್ಯ ಡಾ.ಮಲ್ಲಣ್ಣ ಮೂಲಿಮನಿ ಮಾಹಿತಿ ನೀಡಿದರು. ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದರು.