ವಿಜಯಪುರ: ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರವಾಹವನ್ನು ಸಮರ್ಥವಾಗಿ ಎದುರಿಸಲು ವಿಪತ್ತುಗಳಿಗೆ ತುತ್ತಾಗುವಂತಹ ಪ್ರದೇಶಗಳನ್ನು ಗುರುತಿಸಿಕೊಂಡು ಗ್ರಾಮ ವಿಪತ್ತು ನಿರ್ವಹಣಾ ಸಮಿತಿ ಎಲ್ಲ ಅವಶ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜನರಲ್ಲಿ ಜಾಗೃತಿ ಮೂಡಿಸಿ ಯಾವುದೇ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ಆವರಣದ ಕೇಸ್ವಾನ್ ಕೊಠಡಿಯಲ್ಲಿ ಸೋಮವಾರ ಜರುಗಿದ ಮುಂಗಾರು ಮಳೆಯ ಮುಂಜಾಗ್ರತಾ ಕ್ರಮ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಕೃಷ್ಣಾ, ಭೀಮಾ ಮತ್ತು ಡೋಣಿ ನದಿ ಪಾತ್ರದಲ್ಲಿ ಬರುವಂತಹ ಪ್ರವಾಹಕ್ಕೆ ಒಳಗಾಗುವಂತಹ 54 ಗ್ರಾಮ ಪಂಚಾಯತಿಗಳ ಒಟ್ಟು 167 ಗ್ರಾಮಗಳು ಬರುತ್ತಿದ್ದು, ಗ್ರಾಮ ಪಂಚಾಯತ್ ಅಧ್ಯಕರುಗಳ ನೇತೃತ್ವದಲ್ಲಿ ರಚಿಸಲಾದ ಗ್ರಾಮ ವಿಪತ್ತು ನಿರ್ವಹಣಾ ಸಮಿತಿಗಳು ಸಭೆಗಳನ್ನು ಜರುಗಿಸಬೇಕು. ಈ ಕುರಿತು ಜನರಲ್ಲಿ ಮುಂಚಿತವಾಗಿಯೇ ಜಾಗೃತಿ ಮೂಡಿಸಿ ಯಾವುದೇ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದರು.
ಪರಿಸ್ಥಿತಿಯ ಕುರಿತು ತೀವ್ರ ನಿಗಾ ಇಡೆಬೇಕು. ಜಿಲ್ಲೆಯಲ್ಲಿ ಪ್ರತಿದಿನ ಮಳೆಯ ವರದಿ, ಪ್ರಕೃತಿ ವಿಕೋಪದಿಂದ ಉಂಟಾಗಿರುವ ಮಾನವ-ಜಾನುವಾರು ಜೀವನ ಹಾನಿ, ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಮತ್ತು ಮಳೆಯಿಂದ ಹಾನಿಗೊಳಗಾದ ಮನೆಗಳ ವರದಿಯನ್ನು ತಕ್ಷಣವೇ ಸಿದ್ಧಪಡಿಸಿ, ಪ್ರತಿದಿನ ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಯಾವುದೇ ಅವಘಡಗಳು ಸಂಭವಿಸಿದ್ದಲ್ಲಿ ತಕ್ಷಣವೇ ಸಂಬಂಧಿಸಿದ ತಹಶೀಲ್ದಾರ, ಕಂದಾಯ ನೀರಿಕ್ಷಕರು, ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಆಸ್ತಿ-ಪಾಸ್ತಿ, ಜನ-ಜಾನುವಾರು ಜೀವಹಾನಿಗಳಿಗೆ 24 ಗಂಟೆಯೊಳಗಾಗಿ ನಿಯಮಾನುಸಾರ ಪರಿಹಾರ ವಿತರಣೆ ಕ್ರಮ ವಹಿಸಬೇಕು. ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ವ್ಯಾಟ್ಸ್ಅಪ್ ಗ್ರೂಪ್ನಲ್ಲಿ ಛಾಯಾಚಿತ್ರದೊಂದಿಗೆ ಮಾಹಿತಿ ಒದಗಿಸಬೇಕು ಎಂದು ಹೇಳಿದರು.
ಪ್ರಕೃತಿ ವಿಕೋಪದ ಕುರಿತು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಹಾಗೂ ಸಲಹೆ ಸೂಚನೆಗಳನ್ನು ನೀಡಬೇಕು. ಹವಾಮಾನ ಮುನ್ಸೂಚನೆ ಹಾಗೂ ಮುನ್ನೆಚ್ಚರಿಕೆಗಳನ್ನು ಎನ್ಡಿಎಂಎ ಅಭಿವೃದ್ದಿ ಪಡಿಸಿರುವ ಕಾಮನ್ ಅಲರ್ಟ್ ಪ್ರೋಟೋಕಾಲ್ ಮೂಲಕ ಸಾರ್ವಜನಿಕರ ಮೊಬೈಲ್ಗಳಿಗೆ ರವಾನಿಸಲಾಗುತ್ತದೆ. ಈ ಕುರಿತಂತೆಯೂ ಸಹ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ವಿವಿಧ ಮಾಧ್ಯಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ತುರ್ತು ಸಂದರ್ಭಗಳಲ್ಲಿ ಗ್ರಾಮ ಮಟ್ಟದಲ್ಲಿ ಡಂಗೂರ ಸಾರುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದ ಅವರು, ಸಾರ್ವಜನಿಕರು ಸಹ ಅವಶ್ಯವಿದ್ದಲ್ಲಿ ಕೆಎಸ್ಎನ್ಡಿಎಂಸಿಯಲ್ಲಿ ಚಾಲ್ತಿಯಲ್ಲಿರುವ “ವರುಣ ಮಿತ್ರ ಸಹಾಯವಾಣಿ 9243345433ಗೆ ಫೋನ್ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು.
ಸಿಡಿಲು ಯಾವ ಪ್ರದೇಶದಲ್ಲಿ ಬರುತ್ತದೆ ಎಂಬುದಾಗಿ 30 ನಿಮಿಷಗಳ ಮುಂಚೆಯೇ ಮುನ್ಸೂಚನೆ ನೀಡುವ ಹಾಗೂ ಸಿಡಿಲಿನ ಅಪಾಯಗಳನ್ನು ತಗ್ಗಿಸಲು ಕೈಗೊಳ್ಳಬೇಕಾದ ಸಲಹೆ-ಸೂಚನೆಗಳನ್ನು ನೀಡುವ ಎನ್ಡಿಎಂಎ ಅಭಿವೃದ್ದಿಪಡಿಸಿರುವ ಆಚಿmiಟಿi ಆಪ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖಾ ಪಡೆ, ನಾಗರೀಕ ರಕ್ಷಣಾ ದಳ, ಗೃಹ ರಕ್ಷಕ ದಳ, ಆಪದ್ ಮಿತ್ರ ಅಡಿಯಲ್ಲಿ ತರಬೇತಿ ಪಡೆದ ಸಮುದಾಯ ಮಟ್ಟದ ಸ್ವಯಂ ಸೇವಕರನ್ನು ಜಾಗೃತಿಗೊಳಿಸಿ ಸಿದ್ಧವಾಗಿರಿಸಿಕೊಳ್ಳಬೇಕು. ಲಭ್ಯವಿರುವ ರಕ್ಷಣಾ ಸಲಕರಣೆ ಸುಸ್ಥಿತಿಯಲ್ಲಿರುವುದನ್ನು ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ವಿಪತ್ತಿ ಪರಿಸ್ತಿತಿಯಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವ ಈಜುಗಾರರು, ಹಾವು ಹಿಡಿಯುವರು ಮತ್ತು ನಾಗರಿಕ ಸ್ವಯಂ ಸೇವಕರ ಸಂಪರ್ಕ ವಿಳಾಸವನ್ನು ಪಡೆದುಕೊಂಡು, ಅವಶ್ಯವಿದ್ದಾಗ ಇವರ ಸೇವೆ ಪಡೆಯುವಂತೆ ಅವರು ಸೂಚಿಸಿದರು.
ಅತಿವೃಷ್ಟಿ-ಪ್ರವಾಹದಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಲ್ಲಿ ಕೂಡಲೇ ಬದಲಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಕಂಬಗಳ ತಪಾಸಣೆ ನಡೆಸಬೇಕು. ದೋಷಗಳಿದ್ದಲ್ಲಿ ತುರ್ತಾಗಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಟ್ರಾನ್ಸಫಾರ್ಮರ್ ಬ್ಯಾಂಕಿನಲ್ಲಿ ಟ್ರಾನ್ಸ್ಫಾಮರ್ಗಳನ್ನು ದಾಸ್ತಾನಿಟ್ಟುಕೊಳ್ಳಬೇಕು. ಮಳೆಗಾಲದಲ್ಲಿ ವಿದ್ಯುತ್ ಸರಬರಾಜುವಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲು ಹಾಗೂ ತುರ್ತು ಸ್ಥಿತಿಗೆ ಸ್ಪಂದಿಸಲು ತ್ವರಿತ ಪ್ರತಿಕ್ರಿಯೆ ತಂಡ ರಚಿಸಬೇಕು. ಮಳೆ ಗಾಳಿಗೆ ಬೀಳುವಂತಹ ವಿದ್ಯುತ್ ತಂತಿ ಹಾದು ಹೋಗುವ ಮರಗಳನ್ನು ಗುರುತಿಸಿ ಕೊಂಬೆಗಳನ್ನು ಕತ್ತರಿಸಬೇಕು. ಯಾವುದೇ ಕಾರಣಕ್ಕೂ ವಿದ್ಯುತ್ ಅವಘಡಗಳು ಸಂಭವಿಸದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲ ಅವಶ್ಯಕ ಕ್ರಮ ಕೈಗೊಳ್ಳಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು. ಕುಡಿಯುವ ನೀರಿಗೆ ಕ್ಲೋರಿನೇಶನ್ ಮಾಡುವುದು, ಸೋಂಕುನಿವಾರಕ, ಲಸಿಕೆಗಳು, ವ್ಯಾಕ್ಸಿನೇಶನ್ ಮತ್ತು ಕೋರಿನೇಶನ್ ಸಾಮಗ್ರಿಗಳನ್ನು ದಾಸ್ತಾನಿಟ್ಟುಕೊಳ್ಳಬೇಕು. ಹಾವು ಕಡಿತ ಔಷಧಿ ಸಂಗ್ರಹಿಸಿಡಬೇಕು. ವೈದ್ಯರು, ಅರೆವೈದ್ಯರು ಮತ್ತು ಅಂಬ್ಯೂಲೆನ್ಸ್ ಒಳಗೊಂಡ ತ್ವರಿತ ತಂಡವನ್ನು ರಚಿಸಿಕೊಳ್ಳಬೇಕು. ಮಳೆಗಾಲದಲ್ಲಿ ವ್ಯಾಪಿಸಬಹುದಾದ ಕಾಯಿಲೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ನೋಡಲ್ ಅಧಿಕಾರಿ ನೇಮಕ : ಜಿಲ್ಲೆಯ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಎಲ್ಲ ತಾಲೂಕುಗಳಿಗೆ ನೋಡಲ್ ಅಧಿಕಾರಿಗಳನ್ನು ಹಾಗೂ ತಾಲೂಕಾ ಮಟ್ಟದಲ್ಲಿ ತಹಶೀಲ್ದಾರರು ನದಿಯ ಅಕ್ಕಪಕ್ಕದಲ್ಲಿರುವ 3-4 ಗ್ರಾಮ ಪಂಚಾಯತಿಗಳಿಗೆ ಒಬ್ಬರಂತೆ ತಾಲೂಕಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳೆಂದು ನೇಮಿಸಲಾಯಿತು.
ಕಂಟ್ರೋಲ್ ರೂಂ ಸ್ಥಾಪನೆ : ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ ಜಿಲ್ಲಾ ಕಂಟ್ರೋಲ್ ರೂಂ ದೂರವಾಣಿ ಟೋಲ್ ಫ್ರೀ ಸಂಖ್ಯೆ 1077 (08352-221261) ಸ್ಥಾಪಿಸಲಾಗಿದ್ದು, ತಾಲೂಕಾ ಮಟ್ಟದಲ್ಲಿಯೂ 24/7 ಕಂಟ್ರೋಲ್ ರೂಂ ಸ್ಥಾಪಿಸಿ, ಸಹಾಯವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ಒದಗಿಸಬೇಕು. ಈ ಕುರಿತು ವ್ಯಾಪಕವಾಗಿ ಪ್ರಚಾರ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಶಿಂಧೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ಉಪವಿಭಾಗಾಧಿಕಾರಿ, ಇಂಡಿ ಉಪವಿಭಾಗಾಧಿಕಾರಿ ಆಬೀದ್ ಗದ್ಯಾಳ ಬಸವಣ್ಣೆಪ್ಪಾ ಕಲಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ನಿಂಗಪ್ಪ ಗೋಠೆ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಾಲೂಕಾ ತಹಶೀಲ್ದಾರರು, ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.